ರೋಹಿಂಗ್ಯಾ ನಿರಾಶ್ರಿತರ ಮಕ್ಕಳ ಶಾಲಾ ಪ್ರವೇಶಾತಿ: ಪಿಐಎಲ್ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ಮ್ಯಾನ್ಮಾರ್‌ನಿಂದ ಭಾರತಕ್ಕೆ ಬಂದಿರುವ ರೋಹಿಂಗ್ಯಾ ನಿರಾಶ್ರಿತರ ಮಕ್ಕಳಿಗೆ ಶಾಲಾ ಪ್ರವೇಶಾತಿ ಕಲ್ಪಿಸುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ [ನಾಗರಿಕ ಹಕ್ಕುಗಳ ಗುಂಪಾದ ಸೋಷಿಯಲ್ ಜ್ಯೂರಿಸ್ಟ್ ಮತ್ತು ದೆಹಲಿ ಮಹಾನಗರ ಪಾಲಿಕೆ ಇನ್ನಿತರರ ನಡುವಣ ಪ್ರಕರಣ ].
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಕೇಂದ್ರ ಗೃಹ ಸಚಿವಾಲಯವನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ಅರ್ಜಿ ವಿಲೇವಾರಿ ಮಾಡಿತು.
“ನಾವು ಇದರಲ್ಲಿ ತೊಡಗಿಸಿಕೊಳ್ಳಲು ಹೋಗುವುದಿಲ್ಲ ... ನಿರ್ಧಾರ ತೆಗೆದುಕೊಳ್ಳುವ ಮೊದಲ ಸ್ಥಳ ಹೈಕೋರ್ಟ್ ಆಗಲು ಸಾಧ್ಯವಿಲ್ಲ, ಮೊದಲು ಸರ್ಕಾರವನ್ನು ಸಂಪರ್ಕಿಸಿ ... ನೀವು ನೇರವಾಗಿ ಮಾಡಲು ಸಾಧ್ಯವಿಲ್ಲದ್ದನ್ನು ಪರೋಕ್ಷವಾಗಿಯೂ ಮಾಡಲು ಆಗದು. ಇದರಲ್ಲಿ ನ್ಯಾಯಾಲಯ ಮಾಧ್ಯಮವಾಗಬಾರದು,’’ ಎಂದು ನ್ಯಾಯಾಲಯ ಮೌಖಿಕವಾಗಿ ಹೇಳಿದೆ.
ಆ ಮಕ್ಕಳು ಭಾರತೀಯರಲ್ಲದ ಕಾರಣ, (ನಿರ್ಧಾರ ತೆಗೆದುಕೊಳ್ಳುವುದು) ಅಂತಾರಾಷ್ಟ್ರೀಯ ಪರಿಣಾಮಗಳಿಗೆ ಕಾರಣವಾಗಲಿದೆ. ಹಾಗಾಗಿ,ಕೇಂದ್ರ ಸರ್ಕಾರ ನೀತಿ ನಿರೂಪಣೆಗೆ ಮುಂದಾಗಬೇಕಾದಂತಹ ಪ್ರಕರಣ ಇದಾಗಿದೆ ಎಂದು ಅದು ನುಡಿಯಿತು.
”ನಿಯಂತ್ರಣ ಕಳೆದುಕೊಳ್ಳಲು ನಾವು ಅವಕಾಶ ನೀಡುವುದು ಬೇಡ. ಮಕ್ಕಳ ವಿಚಾರ ಎಂದಾಕ್ಷಣ ಇಡೀ ಜಗತ್ತೇ ಇಲ್ಲಿ ಬರಬೇಕೆಂದೇನೂ ಇಲ್ಲ. ಅಂತಾರಾಷ್ಟ್ರೀಯ ಸಮಸ್ಯೆ, ಭದ್ರತೆ ಹಾಗೂ ರಾಷ್ಟ್ರೀಯತೆ ಮೇಲೆ ಪರಿಣಾಮ ಬೀರುವಂತಹ ಸಂಗತಿಗಳಿವೆ ಎಂದು ಪೀಠ ಹೇಳಿತು.
ಅಸ್ಸಾಂ ಒಪ್ಪಂದದ ವ್ಯಾಪ್ತಿಗೆ ಬರುವ ವಲಸಿಗರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದ 1955ರ ಪೌರತ್ವ ಕಾಯಿದೆ ಸೆಕ್ಷನ್ 6ಎಯ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ನ್ಯಾಯಾಲಯ ಇದೇ ವೇಳೆ ಸಂಕ್ಷಿಪ್ತವಾಗಿ ಉಲ್ಲೇಖಿಸಿತು.
ತೀರ್ಪು ರಾಜ್ಯದಲ್ಲಿ ಸಾಕಷ್ಟು ಪ್ರಕ್ಷುಬ್ಧತೆ ಮತ್ತು ಆಂದೋಲನಕ್ಕೆ ಕಾರಣವಾಯಿತು. ಜಗತ್ತಿನ ಯಾವುದೇ ದೇಶದಲ್ಲಿ ಯಾರಿಗೆ ಪೌರತ್ವ ನೀಡಬೇಕೆಂದು ನ್ಯಾಯಾಲಯವು ನಿರ್ಧರಿಸುವುದಿಲ್ಲ ಎಂದು ಪೀಠ ಹೇಳಿತು.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) ನೀಡಿದ ನಿರಾಶ್ರಿತರ ಕಾರ್ಡ್ ಹೊರತುಪಡಿಸಿ ರೋಹಿಂಗ್ಯಾ ನಿರಾಶ್ರಿತರ ಮಕ್ಕಳ ಬಳಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಇಲ್ಲದ ಕಾರಣ ಅವರಿಗೆ ಶಾಲಾ ಪ್ರವೇಶಾತಿ ನಿರಾಕರಿಸಲಾಗಿದೆ. ಇದು ಆ ಮಕ್ಕಳು ಶಿಕ್ಷಣ ಪಡೆಯುವ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸೋಶಿಯಲ್ ಜ್ಯೂರಿಸ್ಟ್ ಹೆಸರಿನ ನಾಗರಿಕ ಹಕ್ಕುಗಳ ಗುಂಪು ಪಿಐಎಲ್ ಸಲ್ಲಿಸಿತ್ತು.
ಸೋಷಿಯಲ್ ಜ್ಯೂರಿಸ್ಟ್ ಪರವಾಗಿ ವಾದ ಮಂಡಿಸುತ್ತಿರುವ ವಕೀಲ ಅಶೋಕ್ ಅಗರ್‌ವಾಲ್ ಅವರು ನವದೆಹಲಿಯ ನಿರಾಶ್ರಿತರ ಕಾಲೋನಿಗೆ ಭೇಟಿ ನೀಡಿದ ನಂತರ ಈ ಸಮಸ್ಯೆ ಗಮನಕ್ಕೆ ಬಂದಿತ್ತು. ದೆಹಲಿ ಸರ್ಕಾರಕ್ಕೆ ಪತ್ರ ಬರೆದರೂ ಪ್ರತಿಕ್ರಿಯೆ ದೊರೆಯದ ಕಾರಣ ಹೈಕೋರ್ಟ್ ಮೆಟ್ಟಿಲೇರಲಾಗಿತ್ತು.