ತಾನು ಕಚೇರಿಯಲ್ಲಿ ಮಾಡುತ್ತಿದ್ದ ಕೆಲಸವನ್ನು ಮನೆಯಿಂದಲೇ ಮಾಡಲು ಆ ಕೆಲಸದ ಸ್ವರೂಪ ಅನುಮತಿಸಿದರೆ ಮಾತ್ರ ಹೆರಿಗೆ ರಜೆ ಮುಗಿದಿರುವ ಮಹಿಳಾ ಉದ್ಯೋಗಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬಹುದು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ. [ಪ್ರಾಚಿ ಸೇನ್ ಮತ್ತು ರಕ್ಷಣಾ ಸಚಿವಾಲಯ ಇನ್ನಿತರರ ನಡುವಣ ಪ್ರಕರಣ].
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಡಿಯಲ್ಲಿ ಕರ್ಯ ನಿರ್ವಹಿಸುವ ಘಟಕವಾದ ಸೆಮಿಕಂಡಕ್ಟರ್ ಟೆಕ್ನಾಲಜಿ ಮತ್ತು ಅಪ್ಲೈಡ್ ರಿಸರ್ಚ್ ಸೆಂಟರ್‌ನಲ್ಲಿ (ಸ್ಟಾರ್ಕ್- STARC) ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರಿಗೆ ಶಿಶು ಪಾಲನಾ ರಜೆಗೆ ಸಂಬಂಧಿಸಿದ ಪರಿಹಾರ (ಸಿಸಿಎಲ್) ನೀಡಲು ನಿರಾಕರಿಸಿದ ನ್ಯಾ. ಆರ್ ದೇವದಾಸ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಹೆರಿಗೆ ಸೌಲಭ್ಯ ಕಾಯಿದೆ- 1961ರ ಸೆಕ್ಷನ್ 5(5) ಅನ್ನು ಉಲ್ಲೇಖಿಸಲಾಗಿದೆಯಾದರೂ ಕೂಡ ಹೆರಿಗೆ ಸೌಲಭ್ಯ ಪಡೆದ ನಂತರ ಮನೆಯಿಂದಲೇ ಕೆಲಸ ಮಾಡುವಂತಹ ಸ್ವರೂಪ ಆ ಕೆಲಸದ್ದಾಗಿದ್ದರೆ ಮಾತ್ರ ಅಂತಹ ಸೌಲಭ್ಯ ಒದಗಿಸಬಹುದೆಂದು ನಿಯಮ ಸ್ಪಷ್ಟಪಡಿಸುತ್ತದೆ ಎಂದ ನ್ಯಾಯಾಲಯ ಸ್ಟಾರ್ಕ್‌ನೊಂದಿಗೆ ಕೆಲಸ ಮಾಡುವ ಉದ್ಯೋಗಿಗಳು ಸೂಕ್ಷ್ಮ ಮತ್ತು ಸಂಕೀರ್ಣವಾದ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿನ ಸೌಲಭ್ಯ ಬಳಸುವ ಭಾರತ ಸರ್ಕಾರದ ಪ್ರಯೋಜನಕ್ಕಾಗಿ ಈ ಸಂಶೋಧನೆ ಮಾಡಲಾಗುತ್ತಿದ್ದು ಇದನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲಾಗದು ಎಂಬ ಕಾರಣಕ್ಕೆ ಇದು ಸೂಕ್ಷ್ಮವಾಗಿದೆ. ಈ ಅಂಶವೇ ಖುದ್ದು ಇದು ಮನೆಯಿಂದ ಮಾಡುವ ಕೆಲಸವಲ್ಲ ಎಂಬುದನ್ನು ತಿಳಿಸುತ್ತದೆ ಎಂದಿತು.
ಆದರೂ ಅರ್ಜಿದಾರೆ ಕೆಲಸಕ್ಕೆ ದೀರ್ಘಾವಧಿ ಗೈರಾಗಿರುವ ಅವಧಿಯನ್ನು ಸಕ್ರಮಗೊಳಿಸುವಂತೆ ಕೋರಿ ಸಂಸ್ಥೆಗೆ ಮನವಿ ಸಲ್ಲಿಸಬಹುದು. ಆ ಮನವಿಗೆ ಕಂಪೆನಿ ಸಹಾನುಭೂತಿಯಿಂದ ಸ್ಪಂದಿಸಬೇಕು ಎಂದು ಪೀಠ ಹೇಳಿದೆ.