ತನ್ನ ಸಂಘಟನೆ ವಿರುದ್ಧ ಅವಹೇಳನಕಾರಿ ಸಂಗತಿಗಳನ್ನು ಪ್ರಕಟಿಸಿದ ಸುದ್ದಿ ಸಂಸ್ಥೆಯ ವಿರುದ್ಧ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯರೊಬ್ಬರು ನೀಡಿದ ದೂರನ್ನು ಐಪಿಸಿ ಸೆಕ್ಷನ್ 499ರ ಅಡಿ ವಿಚಾರಣೆ ನಡೆಸಬಹುದು ಎಂದು ಶುಕ್ರವಾರ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ [ಮಾತೃಭೂಮಿ ಪ್ರಿಂಟಿಂಗ್ ಅಂಡ್ ಪಬ್ಲಿಷಿಂಗ್ ಕಂ. ಲಿಮಿಟೆಡ್ ಮತ್ತಿತರರು ಹಾಗೂ ಪಿ ಗೋಪಾಲನ್‌ಕುಟ್ಟಿ ಇನ್ನಿತರರ ನಡುವಣ ಪ್ರಕರಣ].
ಕೇರಳ ಹೈಕೋರ್ಟ್ ತೀರ್ಪು ಸುಪ್ರೀಂಕೋರ್ಟ್‌ನ ಯಾವುದೇ ಮಧ್ಯಪ್ರವೇಶಕ್ಕೆ ಆಸ್ಪದವೀಯುವಂತೆ ಇಲ್ಲ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದ್ದು ಮಾಧ್ಯಮ ಸಂಸ್ಥೆ ಮಾತೃಭೂಮಿ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕಂ. ಲಿಮಿಟೆಡ್ ಮನವಿಯನ್ನು ವಜಾಗೊಳಿಸಿದೆ.
ಆರ್‌ಎಸ್‌ಎಸ್ ಒಂದು ನಿರ್ದಿಷ್ಟ ಮತ್ತು ಗುರುತಿಸಲ್ಪಡುವ ಸಂಸ್ಥೆಯಾಗಿರುವುದರಿಂದ ಸಂಘಟನೆಯನ್ನು ದೂಷಿಸುವ ಲೇಖನಗಳ ವಿರುದ್ಧ ದೂರು ನೀಡಲು ಅದರ ಸದಸ್ಯರಿಗೆ ಕಾನೂನಾತ್ಮಕ ಅಧಿಕಾರ (ಲೋಕಸ್ ಸ್ಟ್ಯಾಂಡಿ) ಇದೆ ಎಂದು ಪ್ರಕರಣದ ಕುರಿತು ತೀರ್ಪು ನೀಡಿದ್ದ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಸೋಫಿ ಥಾಮಸ್ ಅಭಿಪ್ರಾಯಪಟ್ಟಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ರಾಜ್ಯ ಕಾರ್ಯದರ್ಶಿ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಎರ್ನಾಕುಲಂನ ಆರ್ಥಿಕ ಅಪರಾಧಗಳ ವಿಚಾರಣೆ ನಡೆಸುವ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ವಿಚಾರಣೆ ರದ್ದುಗೊಳಿಸುವಂತೆ ಮಾತೃಭೂಮಿ ಇಲ್ಲಸ್ಟ್ರೇಟೆಡ್ ವೀಕ್ಲಿ ಮತ್ತು ಅದರ ಕೆಲ ವರದಿಗಾರರು, ಸಂಪಾದಕರು ಮತ್ತು ಚಿತ್ರಕಲಾವಿದರು ಹೈಕೋರ್ಟ್ ಮೊರೆ ಹೋಗಿದ್ದರು. ತೀರ್ಪು ತಮ್ಮ ವಿರುದ್ಧವಾಗಿ ಬಂದ ಬಳಿಕ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.