High Court of Karnataka 
ಸುದ್ದಿಗಳು

ಸಾರ್ವಜನಿಕ ಆಸ್ತಿ ಸಂರಕ್ಷಿಸಲು ಗ್ರಾಮ ಪಂಚಾಯಿತಿ ಸಲ್ಲಿಸಿರುವ ಮನವಿಯು ನಿರ್ವಹಣೆಗೆ ಅರ್ಹ: ಕರ್ನಾಟಕ ಹೈಕೋರ್ಟ್‌

ಕಲಂಗುಟೆ ಗ್ರಾಮ ಪಂಚಾಯಿತಿ ವರ್ಸಸ್‌ ಪಂಚಾಯಿತಿ ನಿರ್ದೇಶಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಆಧರಿಸಿರುವ ಹೈಕೋರ್ಟ್‌, ಗ್ರಾಮ ಪಂಚಾಯಿತಿ ಸಲ್ಲಿಸಿರುವ ರಿಟ್‌ ನಿರ್ವಹಣೆಗೆ ಅರ್ಹವಲ್ಲ ಎಂಬ ಮನವಿ ಒಪ್ಪಲಾಗದು ಎಂದಿದೆ.

Bar & Bench

ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಸಲ್ಲಿಸಿರುವ ಮನವಿಯು ಸಂವಿಧಾನದ 226ನೇ ವಿಧಿಯಡಿ ನಿರ್ವಹಣೆಗೆ ಅರ್ಹ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ.

ಕಲಂಗುಟೆ ಗ್ರಾಮ ಪಂಚಾಯಿತಿ ವರ್ಸಸ್‌ ಪಂಚಾಯಿತಿ ನಿರ್ದೇಶಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಆಧರಿಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಗ್ರಾಮ ಪಂಚಾಯಿತಿ ಸಲ್ಲಿಸಿರುವ ಮನವಿಯು ನಿರ್ವಹಣೆಗೆ ಅರ್ಹವಲ್ಲ ಎಂಬ ಮನವಿಯನ್ನು ಒಪ್ಪಲಾಗದು ಎಂದಿದೆ.

“ಕಾರ್ಯನಿರ್ವಾಹಕ ಅಧಿಕಾರಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಗ್ರಾಮ ಪಂಚಾಯಿತಿ ಸಲ್ಲಿಸಿದ್ದ ಮನವಿಯು ನಿರ್ವಹಣೆಗೆ ಅರ್ಹವೋ, ಇಲ್ಲವೋ ಎಂಬ ಪ್ರಶ್ನೆಯು ಸುಪ್ರೀಂ ಕೋರ್ಟ್‌ ಮುಂದೆ ಉದ್ಭವಿಸಿತ್ತು. ತಗಾದೆಗಳು ವ್ಯತಿರಕ್ತವಾಗಿದ್ದು, ರಿಟ್‌ ಮನವಿಯು ನಿರ್ವಹಣೆಗೆ ಅರ್ಹವಲ್ಲ ಎಂದು ಹೇಳಲಾಗಿತ್ತು. ಗ್ರಾಮ ಪಂಚಾಯಿತಿಯನ್ನು ಸಶಕ್ತಗೊಳಿಸುವ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತಂದಿರುವುದನ್ನು ಪರಿಗಣಿಸಿರುವ ಸುಪ್ರೀಂ ಕೋರ್ಟ್‌, ಕೆಲವು ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸಲ್ಲಿಸಿರುವ ರಿಟ್‌ ಮನವಿಯು ನಿರ್ವಹಣೆಗೆ ಅರ್ಹ. ಹೀಗಾಗಿ, ಅರ್ಜಿದಾರರು ಪ್ರಶ್ನಿಸುತ್ತಿರುವ ಮಿತಿಯನ್ನು ಒಪ್ಪಲಾಗದು. ಗ್ರಾಮ ಪಂಚಾಯಿತಿ ಸಲ್ಲಿಸಿರುವ ರಿಟ್‌ ಮನವಿಯು ನಿರ್ವಹಣೆಗೆ ಅರ್ಹವಾಗಿದೆ” ಎಂದು ಹೈಕೋರ್ಟ್‌ ಹೇಳಿದೆ.

ಆಸ್ತಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಎರಡು ರಿಟ್‌ ಮನವಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸಿತ್ತು. ಆಸ್ತಿಯು ತನ್ನ ತಾಯಿಗೆ ಸೇರಿದ್ದು, ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶದ ಹೊರತಾಗಿಯೂ ಗ್ರಾಮ ಪಂಚಾಯಿತಿಯು ತಮ್ಮ ಹೆಸರಿಗೆ ನೋಂದಣಿ ಮಾಡಲು ಅಥವಾ ಖಾತೆ ಬದಲಿಸಲು ಒಪ್ಪುತ್ತಿಲ್ಲ ಎಂದು ವಿ ಹರೀಶ್‌ ಎಂಬವರು ಮನವಿ ಸಲ್ಲಿಸಿದ್ದರು. ಅರ್ಜಿದಾರರಿಗೆ ಖಾತೆ ಮಾಡಿಕೊಡುವಂತೆ ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಗೆ ಆದೇಶಿಸಿದ್ದ ಕಾರ್ಯನಿರ್ವಾಹಕ ಅಧಿಕಾರಿಯ ಆದೇಶವನ್ನು ಎರಡನೇ ಮನವಿಯಲ್ಲಿ ಪ್ರಶ್ನಿಸಲಾಗಿತ್ತು.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯಿದೆ ಸೆಕ್ಷನ್‌ 269ರ ಅಡಿ ಗ್ರಾಮ ಪಂಚಾಯಿತಿ ನೊಂದಿರುವ ವ್ಯಕ್ತಿ ಎಂದು ಪರಿಗಣಿಸಲಾಗದು. ಹೀಗಾಗಿ, ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಆದೇಶವನ್ನು ಗ್ರಾಮ ಪಂಚಾಯಿತಿಯು ಪ್ರಶ್ನಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸಲ್ಲಿಸಿರುವ ಮನವಿಯು ನಿರ್ವಹಣೆಗೆ ಅರ್ಹವಲ್ಲ ಎಂದು ಹರೀಶ್‌ ವಾದಿಸಿದ್ದರು.

ಸಕಾರಣಗಳು ಇಲ್ಲದೇ ಮತ್ತು ವಿವೇಚನೆ ಬಳಸದೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ವಾದಿಸಿತ್ತು.

1992ರಲ್ಲಿ ಭಾರತದ ಸಂವಿಧಾನಕ್ಕೆ 73ನೇ ತಿದ್ದುಪಡಿ ತಂದಿರುವುದು ಮತ್ತು ಆ ಬಳಿಕ ಹಲವು ವಿಧಿಗಳು ಗ್ರಾಮ ಪಂಚಾಯಿತಿಗೆ ಶಕ್ತಿ ತುಂಬಿರುವುದನ್ನು ಗಮನದಲ್ಲಿಟ್ಟುಕೊಂಡು ಪೀಠವು ಮೊದಲಿಗೆ ಅರ್ಜಿಯ ನಿರ್ವಹಣೆಯ ವಿಚಾರವನ್ನು ಪರಿಗಣಿಸಿತು. ಈ ಸಂಬಂಧ ಕಲಂಗುಟೆ ಗ್ರಾಮ ಪಂಚಾಯಿತಿ ವರ್ಸಸ್‌ ಪಂಚಾಯಿತಿ ನಿರ್ದೇಶಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಆಧರಿಸಿದ್ದ ಪೀಠವು ಕಾರ್ಯನಿರ್ವಾಹಕ ಅಧಿಕಾರಿಯ ಆದೇಶವನ್ನು ಪ್ರಶ್ನಿಸಿರುವ ಗ್ರಾಮ ಪಂಚಾಯಿತಿ ನಿಲುವು ಕೆಲವು ಸಂದರ್ಭದಲ್ಲಿ ನಿರ್ವಹಣೆಗೆ ಅರ್ಹ ಎಂದು ಹೇಳಿದೆ.

ಆದೇಶ ಹೊರಡಿಸುವಾಗ ಕಾರ್ಯನಿರ್ವಾಹಕ ಅಧಿಕಾರಿ ವಿವೇಚನೆ ಬಳಸಲು ವಿಫಲವಾಗಿದ್ದಾರೆ ಎಂಬ ಗ್ರಾಮ ಪಂಚಾಯಿತಿಯ ತಗಾದೆಗಳನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು “ಕಾರ್ಯನಿರ್ವಾಹಕ ಅಧಿಕಾರಿ ವಿವೇಚನೆ ಬಳಸಿಲ್ಲ ಎಂಬುದು ಆದೇಶದಿಂದ ತಿಳಿದು ಬಂದಿದೆ. ಅರ್ಜಿದಾರರು ಅಥವಾ ಪ್ರತಿವಾದಿ ಗ್ರಾಮ ಪಂಚಾಯಿತಿಯನ್ನು ಪರಿಗಣಿಸಲಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪಕ್ಷಕಾರರ ಹಕ್ಕುಗಳನ್ನು ನಿರ್ಧರಿಸುವಾಗ, ಆದೇಶ ಹೊರಡಿಸುವಾಗ ನಿರ್ದಿಷ್ಟ ಕಾರಣಗಳನ್ನು ಅರೆ ನ್ಯಾಯಿಕ ಪ್ರಾಧಿಕಾರ/ಅಧಿಕಾರಿ ಉಲ್ಲೇಖಿಸಬೇಕು ಎಂದು ನ್ಯಾಯಾಲಯ ಹೇಳಿದೆ. “ಪಕ್ಷಕಾರರ ಹಕ್ಕುಗಳನ್ನು ನಿರ್ಧರಿಸುವಾಗ ಅರೆ ನ್ಯಾಯಿಕ ಪ್ರಾಧಿಕಾರವು ಕಾರಣಗಳನ್ನು ಉಲ್ಲೇಖಿಸಬೇಕು. ಆ ಕಾರಣಗಳಲ್ಲಿ ವಿವೇಚನೆ ಬಿಂಬಿತವಾಗಬೇಕು. ಆಡಳಿತಾತ್ಮಕ ಆದೇಶಗಳು ಸಹ ಕಾರಣಗಳನ್ನು ಕಳೆದುಕೊಳ್ಳಲಾಗದ ಯುಗದಲ್ಲಿ, ಅರೆ ನ್ಯಾಯಿಕ ಅಧಿಕಾರಿಗಳ ಆದೇಶಗಳು ರಹಸ್ಯ, ಸಂಕ್ಷಿಪ್ತವಾಗಿದ್ದರೆ ಅದು ಸಮರ್ಥನೀಯವಲ್ಲ” ಎಂದು ನ್ಯಾಯಾಲಯ ಹೇಳಿದೆ.

ಈ ವಿಚಾರಗಳನ್ನು ಪ್ರಸ್ತಾಪಿಸಿರುವ ಹೈಕೋರ್ಟ್‌ ಗ್ರಾಮ ಪಂಚಾಯಿತಿ ಮನವಿಯನ್ನು ಎತ್ತಿ ಹಿಡಿದಿದ್ದು, ಹರೀಶ್‌ ಕೋರಿಕೆಯನ್ನು ವಜಾ ಮಾಡಿದೆ. ಇಡೀ ಪ್ರಕರಣವನ್ನು ಪುನರ್‌ ಪರಿಶೀಲಿಸುವಂತೆ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ವಾಪಸ್‌ ಕಳುಹಿಸಿರುವ ನ್ಯಾಯಾಲಯವು ವಿವೇಚನ ಬಳಸಿ ಸ್ಪಷ್ಟ ಆದೇಶ ಹೊರಡಿಸುವಂತೆ ಆದೇಶ ಮಾಡಿದೆ.