ಬಹು ನಿರೀಕ್ಷಿತ ಗ್ರಾಮ ಪಂಚಾಯಿತಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶಿಸಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚುನಾವಣೆ ನಡೆಸುವ ಸಂಬಂಧ ವೇಳಾಪಟ್ಟಿ ಪ್ರಕ್ರಟಿಸಲು ಮೂರು ವಾರಗಳ ಕಾಲಾವಕಾಶವನ್ನೂ ಆಯೋಗಕ್ಕೆ ಹೈಕೋರ್ಟ್ ನೀಡಿದೆ.
ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಕೆ ಸಿ ಕೊಂಡಯ್ಯ ಹಾಗೂ ಮತ್ತಿತರರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಅವರಿದ್ದ ವಿಭಾಗೀಯ ಪೀಠವು ಚುನಾವಣಾ ಆಯೋಗಕ್ಕೆ ಹಲವು ನಿರ್ದೇಶನಗಳನ್ನು ನೀಡಿದೆ. ಸುದೀರ್ಘ ವಿಚಾರಣೆ ನಡೆಸಿದ್ದ ಪೀಠವು ಅಕ್ಟೋಬರ್ 23ರಂದು ತೀರ್ಪು ಕಾಯ್ದಿರಿಸಿತ್ತು.
“ಚುನಾವಣೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಹಕ್ಕು ರಾಜ್ಯ ಚುನಾವಣಾ ಆಯೋಗಕ್ಕೆ ಇದೆ. ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ. ಚುನಾವಣಾ ಖರ್ಚುಗಳಿಗೆ ಅನುದಾನ ಬೇಕಿದ್ದರೆ ರಾಜ್ಯಪಾಲರನ್ನು ಸಂಪರ್ಕಿಸಬಹುದು” ಎಂದು ಆಯೋಗಕ್ಕೆ ಪೀಠವು ಸೂಚಿಸಿದೆ.
“ವಿಶೇಷ ಸಂದರ್ಭದಲ್ಲಿ ಅವಧಿ ಮುಗಿದ ಮೇಲೆ ಪಂಚಾಯತಿಗಳಿಗೆ ಆಯೋಗವು ಚುನಾವಣೆ ನಡೆಸಬಹುದಾಗಿದೆ. ಈಗ ಅಂಥ ಪರಿಸ್ಥಿತಿ ಇದೆಯೋ, ಇಲ್ಲವೋ ಎಂಬುದು ಆಯೋಗದ ವ್ಯಾಪ್ತಿಗೆ ಬಿಟ್ಟಿರುವ ವಿಚಾರವಾಗಿದೆ. ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ. ವಿಶೇಷ ಪರಿಸ್ಥಿತಿಯ ಬಗ್ಗೆ ಸರ್ಕಾರದ ಜೊತೆ ಚರ್ಚಿಸಿ ವಾಸ್ತವಾಂಶಗಳ ಆಧಾರದ ಮೇಲೆ ಆಯೋಗ ನಿರ್ಧಾರ ಕೈಗೊಳ್ಳಬಹುದಾಗಿದೆ” ಎಂದು ಪೀಠ ಹೇಳಿದೆ.
ರಾಜ್ಯ ಚುನಾವಣಾ ಆಯೋಗವು ಕೋವಿಡ್ ನೆಪದಲ್ಲಿ ಮಾರ್ಚ್‌ನಿಂದಲೂ ಚುನಾವಣೆ ಮುಂದೂಡಿಕೊಂಡು ಬಂದಿದೆ. ಇದು ಸಂವಿಧಾನ ಬಾಹಿರ ನಡೆ ಎಂದು ಅರ್ಜಿದಾರರು ವಾದಿಸಿದ್ದರು.
"ರಾಜ್ಯದ 6,015 ಪಂಚಾಯಿತಿಗಳ ಪೈಕಿ ಡಿಸೆಂಬರ್ ವೇಳೆಗೆ 5,831 ಪಂಚಾಯಿತಿಗಳ ಅವಧಿ ಮುಕ್ತಾಯವಾಗಲಿದೆ. ಕೋವಿಡ್ ಸೋಗಿನಲ್ಲಿ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಯತ್ನಿಸಿರುವ ಆಯೋಗವು ಸಾಂವಿಧಾನಿಕ ಕರ್ತವ್ಯ ನಿಭಾಯಿಸಲು ವಿಫಲವಾಗಿದೆ" ಎಂದು ಅರ್ಜಿದಾರರು ದೂರಿದ್ದರು.
ಇದಕ್ಕೆ ಪ್ರತಿಕ್ರಿಯೆ ದಾಖಲಿಸಿದ ರಾಜ್ಯ ಚುನಾವಣಾ ಆಯೋಗವು ಕೋವಿಡ್ ಅಗಾಧತೆಯನ್ನು ವಿವರಿಸುವುದರ ಜೊತೆಗೆ ಜೂನ್‌ನಲ್ಲಿ ಎಲ್ಲಾ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಲಾಗಿತ್ತು. ಅಧಿಕಾರಿಗಳು ಅಕ್ಟೋಬರ್-ನವೆಂಬರ್‌ನಲ್ಲಿ ಚುನಾವಣೆ ನಡೆಸಲು ಸಲಹೆ ನೀಡಿದ್ದರು ಎಂದು ವಾದಿಸಿತ್ತು.
ಏತನ್ಮಧ್ಯೆ ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ರಾಜ್ಯ ಸರ್ಕಾರವು ಆಯೋಗಕ್ಕೆ ಮನವಿ ಮಾಡಿತ್ತು. ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರುವಂತೆ ಸರ್ಕಾರಕ್ಕೆ ಆಯೋಗವು ಪತ್ರ ಮುಖೇನ ತಿಳಿಸಿತ್ತು.
ರಾಜ್ಯ ಸರ್ಕಾರವನ್ನು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪ್ರತಿನಿಧಿಸಿದ್ದರೆ, ಅರ್ಜಿದಾರರ ಪರ ವಕೀಲೆ ಅಶ್ವಿನಿ ಓಬಳೇಶ್ ವಾದಿಸಿದರು. ಚುನಾವಣಾ ಆಯೋಗವನ್ನು ವೈಶಾಲಿ ಹೆಗ್ಡೆ ಪ್ರತಿನಿಧಿಸಿದ್ದರು.