X corp and Karnataka High Court 
ಸುದ್ದಿಗಳು

ಕೇಂದ್ರದಿಂದ ಸಹಯೋಗ್‌ ಪೋರ್ಟಲ್‌ ಆರಂಭ ಎತ್ತಿ ಹಿಡಿದಿದ್ದ ಆದೇಶ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ನಿಂದ ಮೇಲ್ಮನವಿ ಸಲ್ಲಿಕೆ

2025ರ ಸೆಪ್ಟೆಂಬರ್‌ 24ರಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಎಕ್ಸ್‌ ಕಾರ್ಪ್‌ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಮೇಲ್ಮನವಿಯ ಮೂಲಕ ಪ್ರಶ್ನಿಸಲಾಗಿದೆ.

Bar & Bench

ಮಾಹಿತಿ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಸಹಯೋಗ್‌ ಪೋರ್ಟಲ್‌ ಆರಂಭಿಸಿರುವುದನ್ನು ಎತ್ತಿಹಿಡಿದಿರುವ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಎಕ್ಸ್‌ ಕಾರ್ಪ್‌ ಶುಕ್ರವಾರ ಮೇಲ್ಮನವಿ ಸಲ್ಲಿಸಿದೆ. ಮೇಲ್ಮನವಿಯು ಇನ್ನಷ್ಟೇ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಪಟ್ಟಿಯಾಗಬೇಕಿದೆ.

2025ರ ಸೆಪ್ಟೆಂಬರ್‌ 24ರಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಎಕ್ಸ್‌ ಕಾರ್ಪ್‌ ಅರ್ಜಿಯನ್ನು ವಜಾಗೊಳಿಸಿತ್ತು.

“19ನೇ ವಿಧಿಯು ತನ್ನ ಭರವಸೆಯಲ್ಲಿ ದೇದೀಪ್ಯಮಾನವಾಗಿದ್ದರೂ ಅದು ನಾಗರಿಕರಿಗೆ ಮಾತ್ರವೇ ನೀಡಲಾದ ಹಕ್ಕುಗಳ ಸನ್ನದಾಗಿ ಉಳಿದಿದೆ. ನಾಗರಿಕನಲ್ಲದ ಅರ್ಜಿದಾರ ಎಕ್ಸ್‌ ಕಾರ್ಪ್‌ ಸಂಸ್ಥೆಯು ಅದರ ಅಡಿಯಲ್ಲಿ ಆಶ್ರಯ ಪಡೆಯಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿತ್ತು.

“ತನ್ನ ಮೂಲಸ್ಥಾನವಾದ ಅಮೆರಿಕಾದಲ್ಲಿ ಎಕ್ಸ್‌ ಕಾರ್ಪ್‌ ನಿಯಂತ್ರಣ ವ್ಯವಸ್ಥೆಗೆ ಒಳಪಟ್ಟಿದೆ. ಅಲ್ಲಿನ ವ್ಯಾಪ್ತಿಯಲ್ಲಿರುವ ಟ್ವೀಟ್‌ ತೆಗೆಯುವ ಕಾನೂನಿನ ಅಡಿ ಅದನ್ನು ಉಲ್ಲಂಘಿಸಿದಲ್ಲಿ ಕ್ರಿಮಿನಲ್‌ ಕೃತ್ಯ ಎಂದು ನಿರ್ಧರಿಸಲಾಗುತ್ತದೆ. ಅದು ಅಲ್ಲಿ ಆದೇಶ ಪಾಲಿಸುತ್ತಿದೆ. ಆದರೆ, ನಮ್ಮ ದೇಶದಲ್ಲಿ ಆ ದೇಶವನ್ನು ಪಾಲಿಸಲು ಎಕ್ಸ್‌ ಕಾರ್ಪ್‌ ನಿರಾಕರಿಸುತ್ತದೆ. ಇದಕ್ಕೆ ಸಕಾರಣವಿಲ್ಲ” ಎಂದು ಪೀಠ ಹೇಳಿತ್ತು.

“ನಮ್ಮ ರಾಷ್ಟ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಬಯಸುವ ಪ್ರತಿಯೊಂದು ವೇದಿಕೆಯು ಸ್ವಾತಂತ್ರ್ಯವನ್ನು ಜವಾಬ್ದಾರಿಯೊಂದಿಗೆ ತೆಗೆದುಕೊಳ್ಳಬೇಕು ಮತ್ತು ಪ್ರವೇಶದ ಸವಲತ್ತು ಅದರೊಂದಿಗೆ ಹೊಣೆಗಾರಿಕೆಯ ಗಂಭೀರ ಕರ್ತವ್ಯವನ್ನು ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳಬೇಕು” ಎಂದು ಎಂದಿತ್ತು.

“ಆಧುನಿಕ ವಿಚಾರಗಳ ಆಡುಂಬೊಲವಾಗಿರುವ ಸಾಮಾಜಿಕ ಮಾಧ್ಯಮವನ್ನು ಅರಾಜಕ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಬಿಡಲಾಗುವುದಿಲ್ಲ” ಎಂದಿರುವ ನ್ಯಾಯಾಲಯವು ವಿಷಯದ ನಿಯಂತ್ರಣವು ಘನತೆಯನ್ನು ರಕ್ಷಿಸಲು ಮತ್ತು ಮಹಿಳೆಯರ ವಿರುದ್ಧದ ಅಪರಾಧ ನಿರ್ಬಂಧಿಸಲು ಅಗತ್ಯವಾಗಿದೆ ಎಂದಿತ್ತು.

ಅನಾದಿ ಕಾಲದಿಂದಲೂ ಮಾಹಿತಿ ಮತ್ತು ಸಂಹವನವು ನಿಯಂತ್ರಣಕ್ಕೆ ಒಳಪಟ್ಟಿದ್ದು, ಮಾಹಿತಿದಾರರಿಂದ ಅಂಚೆ ಕಾಲದವರಿಗೆ, ಈಗ ವಾಟ್ಸಾಪ್‌, ಇನ್‌ಸ್ಟಾಗ್ರಾಂ ಮತ್ತು ಸ್ನ್ಯಾಪ್‌ಚಾಟ್‌ ಎಲ್ಲವೂ ಸ್ಥಳೀಯ ಮತ್ತು ಜಾಗತಿಕವಾಗಿ ನಿಯಂತ್ರಣಕ್ಕೆ ಒಳಪಟ್ಟಿವೆ” ಎಂದಿತ್ತು.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು (ಮೈಟಿ) ಪೊಲೀಸರನ್ನೂ ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಸೆಕ್ಷನ್‌ 69A ಮೀರಿ ಸೆಕ್ಷನ್‌ 79(3)(b) ಅಡಿ ಮಾಹಿತಿ ನಿರ್ಬಂಧಿಸಲು ನಿರ್ದೇಶಿಸಿದೆ ಎಂದು ಎಕ್ಸ್‌ ಆರೋಪಿಸಿತ್ತು. ಅಲ್ಲದೇ, ನಿರ್ಬಂಧ ಆದೇಶ ಮಾಡಲು ಸಿದ್ಧ ಮಾದರಿಯನ್ನೂ ಮೈಟಿಯು ನೀಡಿದೆ. ಇದು ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ ಎಂದು ಎಕ್ಸ್‌ ಆಕ್ಷೇಪಿಸಿತ್ತು.

ಅಲ್ಲದೇ, ಸೆಕ್ಷನ್‌ 79(3)(b) ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ನಿರ್ಬಂಧ ಆದೇಶ ಮಾಡಲು ಅನುಮತಿಸುವ ಕೇಂದ್ರ ಗೃಹ ಇಲಾಖೆ ರೂಪಿಸಿರುವ ಸಹಯೋಗ್‌ ಪೋರ್ಟಲ್‌ ಅನ್ನೂ ಎಕ್ಸ್‌ ಪ್ರಶ್ನಿಸಿತ್ತು. ಸೆಕ್ಷನ್‌ 69ಎಗೆ ಪರ್ಯಾಯವಾಗಿ ಸಹಯೋಗ್‌ ಪೋರ್ಟಲ್‌ ವ್ಯವಸ್ಥೆ ರೂಪಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಲಾಗಿತ್ತು.

ಹೀಗಾಗಿ, ಸೆಕ್ಷನ್‌ 79(3)(b) ಮಾಹಿತಿ ನಿರ್ಬಂಧ ಆದೇಶ ಮಾಡಲು ಸರ್ಕಾರಕ್ಕೆ ಅವಕಾಶವಿಲ್ಲ. ಇದು ವಿಶೇಷವಾಗಿ ಸೆಕ್ಷನ್‌ 69Aರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಆದೇಶಿಸಬೇಕು. ಆಕ್ಷೇಪಾರ್ಹವಾದ ಅಧಿಸೂಚನೆಯನ್ನು ವಜಾ ಮಾಡಬೇಕು ಮತ್ತು ಅಕ್ರಮ ನಿರ್ಬಂಧ ಆದೇಶ ಮತ್ತು ಪೋರ್ಟಲ್‌ ಸೆನ್ಸಾರ್‌ಶಿಪ್‌ ಸಂಬಂಧ ಎಕ್ಸ್‌ ವಿರುದ್ಧ ಪೂರ್ವಾಗ್ರಹ ಪೀಡಿತ ಕ್ರಮಕೈಗೊಳ್ಳದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಬೇಕು. ಸೆಕ್ಷನ್‌ 69Aಗೆ ವಿರುದ್ಧವಾಗಿ ಹೊರಡಿಸುವ ಆದೇಶ ಅನುಪಾಲಿಸದಿರುವುದಕ್ಕೆ ಎಕ್ಸ್‌ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಕೋರಲಾಗಿತ್ತು. ಈ ಮನವಿಯನ್ನು ಏಕಸದಸ್ಯ ಪೀಠ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಲಾಗುವುದು ಎಂದು ಎಕ್ಸ್‌ನ ಗ್ಲೋಬಲ್‌ ಗವರ್ನಮೆಂಟ್‌ ಅಫೇರ್ಸ್‌ ತಂಡವು ಸೆಪ್ಟೆಂಬರ್‌ 29ರಂದು ಟ್ವೀಟ್‌ ಮಾಡಿತ್ತು.