Vinay Kulkarni
Vinay Kulkarni PTI
ಸುದ್ದಿಗಳು

[ಯೋಗೀಶ್‌ ಗೌಡ ಕೊಲೆ ಪ್ರಕರಣ] ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಜಾಮೀನು ನೀಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ

Bar & Bench

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಒಂಭತ್ತು ತಿಂಗಳಿಂದ ಜೈಲು ವಾಸ ಅನುಭವಿಸುತ್ತಿರುವ ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಸಾಕ್ಷ್ಯ ನಾಶ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿದೆ.

ಯೋಗೀಶ್‌ ಗೌಡ ಅವರ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಈಚೆಗೆ ಕುಲಕರ್ಣಿ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ತವರೂರು ಧಾರವಾಡಕ್ಕೆ ತೆರಳಬಾರದು, ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ವಿಚಾರಣೆಗೆ ಕರೆದಾಗ ಹಾಜರಾಗಬೇಕು ಎಂಬ ಷರತ್ತುಗಳನ್ನು ವಿಧಿಸಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಯು ಯು ಲಲಿತ್‌ ಮತ್ತು ಅಜಯ್‌ ರಾಸ್ತೋಗಿ ಅವರಿದ್ದ ವಿಭಾಗೀಯ ಪೀಠ ಜಾಮೀನು ನೀಡಿತ್ತು.

ಆದರೆ, ಯೋಗೀಶ್‌ ಗೌಡ ಕೊಲೆಯಲ್ಲಿ ತಮ್ಮ ವಿರುದ್ಧದ ಸಾಕ್ಷ್ಯಗಳನ್ನು ಕುಲಕರ್ಣಿ ನಾಶಪಡಿಸಿದ್ದಾರೆ ಎಂಬ ಪ್ರಕರಣವು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ಮುಂದಿತ್ತು. ಹೀಗಾಗಿ, ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದ್ದರೂ ವಿನಯ್‌ ಕುಲಕರ್ಣಿ ಅವರು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಅಂದು ಬಿಡುಗಡೆಯಾಗಿರಲಿಲ್ಲ.

2016ರ ಜೂನ್‌ 15ರಂದು ಧಾರವಾಡದ ಸಪ್ತಾಪುರದ ಉದಯ್‌ ಜಿಮ್‌ನಲ್ಲಿ ದುಷ್ಕರ್ಮಿಗಳು ಯೋಗೀಶ್‌ ಗೌಡ ಅವರನ್ನು ಮಚ್ಚು-ಲಾಂಗ್‌ನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದರು. ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಅವರನ್ನು ಪ್ರಕರಣದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದು, ಅವರೂ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
2019ರಲ್ಲಿ ರಾಜ್ಯ ಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. 2020ರ ನವೆಂಬರ್‌ 5ರಂದು ಸಿಬಿಐ ಅಧಿಕಾರಿಗಳು ವಿನಯ್‌ ಕುಲಕರ್ಣಿ ಅವರನ್ನು ಬಂಧಿಸಿದ್ದರು.