[ಕೊಲೆ ಪ್ರಕರಣ] ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ನೀಡಿದ ಸುಪ್ರೀಂ; ಸದ್ಯಕ್ಕಿಲ್ಲ ಬಿಡುಗಡೆ

ಜಾಮೀನು ಮಂಜೂರು ಮಾಡುವ ವೇಳೆ ಧಾರವಾಡ ಜಿಲ್ಲೆ ಪ್ರವೇಶಿಸಿದಂತೆ ನ್ಯಾಯಾಲಯ ಮಾಜಿ ಸಚಿವರಿಗೆ ಷರತ್ತು ವಿಧಿಸಿದೆ.
[ಕೊಲೆ ಪ್ರಕರಣ] ಮಾಜಿ ಸಚಿವ ವಿನಯ್‌ ಕುಲಕರ್ಣಿಗೆ ಷರತ್ತುಬದ್ಧ ಜಾಮೀನು ನೀಡಿದ ಸುಪ್ರೀಂ; ಸದ್ಯಕ್ಕಿಲ್ಲ ಬಿಡುಗಡೆ

ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರಿಗೆ ಸುಪ್ರೀಂಕೋರ್ಟ್‌ ಬುಧವಾರ ಷರತ್ತುಬದ್ಧ ಜಾಮೀನು ನೀಡಿದೆ. ಧಾರವಾಡ ಜಿಲ್ಲೆ ಪ್ರವೇಶಿಸಿದಂತೆ ಅದು ಈ ಸಂದರ್ಭದಲ್ಲಿ ಅವರಿಗೆ ಷರತ್ತು ವಿಧಿಸಿದೆ.

ವಿಚಾರಣೆ ವೇಳೆ ಜಾಮೀನು ನೀಡದಂತೆ ಸಿಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಆದರೆ ನ್ಯಾಯಾಲಯ ಧಾರವಾಡ ಜಿಲ್ಲೆ ಪ್ರವೇಶಿಸಬಾರದು ಮತ್ತು ಸಾಕ್ಷ್ಯ ನಾಶಪಡಿಸಲು ಮುಂದಾಗಬಾರದು. ಹಾಗೊಂದು ವೇಳೆ ಸಾಕ್ಷ್ಯ ನಾಶಪಡಿಸಿದರೆ ಜಾಮೀನು ರದ್ದುಗೊಳಿಸಲಾಗುವುದು ಎಂಬ ಎಚ್ಚರಿಕೆ ನೀಡಿ ಜಾಮೀನು ಮಂಜೂರು ಮಾಡಿತು.

ಇದೇ ವೇಳೆ ಯೋಗೀಶ್‌ ಗೌಡ ಹತ್ಯೆ ಪ್ರಕರಣ ಹೈಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇದೆ ಎಂದು ಕರ್ನಾಟಕದ ಪರ ವಕೀಲ ನಟರಾಜ್ ಅವರು ನ್ಯಾಯಮೂರ್ತಿ ಯು ಯು ಲಲಿತ್‌ ನೇತೃತ್ವದ ಪೀಠದ ಗಮನ ಸೆಳೆದರು. ಹೀಗಾಗಿ ಎರಡು ತಿಂಗಳ ಒಳಗೆ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ.

Also Read
ಯೋಗೀಶ್‌ ಗೌಡ‌ ಕೊಲೆ ಪ್ರಕರಣ: ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಮಾಜಿ ಸಚಿವ ವಿನಯ್‌ ಕುಲಕರ್ಣಿ

ಸದ್ಯಕ್ಕಿಲ್ಲ ಜೈಲಿನಿಂದ ಬಿಡುಗಡೆ

ವಿನಯ್‌ ಕುಲಕರ್ಣಿ ಅವರಿಗೆ ಸುಪ್ರೀಂಕೋರ್ಟ್‌ ಜಾಮೀನು ನೀಡಿದ್ದರೂ ಅವರು ಈಗಲೇ ಬಿಡುಗಡೆಯಾಗುವುದಿಲ್ಲ. ಅವರ ವಿರುದ್ಧದ ಸಾಕ್ಷ್ಯನಾಶ ಪಡಿಸಿದ ಪ್ರಕರಣದ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇತ್ತೀಚೆಗಷ್ಟೇ ನ್ಯಾಯಾಲಯ ಜಾಮೀನು ತಿರಸ್ಕರಿಸಿದ್ದರಿಂದ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿರುವ ಪ್ರಕರಣವಾಗಿರುವ ಕಾರಣ ವಿನಯ್‌ ಅವರು ಬೆಳಗಾವಿ ಜೈಲಿನಲ್ಲಿಯೇ ಇರಬೇಕಾಗಲಿದೆ.

ಪ್ರಕರಣದ ವಿವರ

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಅವರನ್ನು 2016ರ ಜೂನ್‌ 15ರಂದು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಜಿಮ್‌ನಲ್ಲಿ ಪತ್ರಿಕೆ ಓದುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ದಾಳಿ ನಡೆದಿತ್ತು. ಪ್ರಕರಣದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಪ್ರಮುಖ ಆರೋಪಿಯಾಗಿದ್ದು, ಅವರೂ ಸೇರಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿತ್ತು. 2020ರ ನವೆಂಬರ್‌ 5ರಂದು ವಿನಯ್‌ ಅವರನ್ನು ಸಿಬಿಐ ಬಂಧಿಸಿತ್ತು.

Related Stories

No stories found.
Kannada Bar & Bench
kannada.barandbench.com