Vinay Kulkarni and Karnataka HC
Vinay Kulkarni and Karnataka HC 
ಸುದ್ದಿಗಳು

ಯೋಗೀಶ್‌ ಗೌಡ ಕೊಲೆ ಪ್ರಕರಣ: ಎರಡು ಪ್ರತ್ಯೇಕ ದೂರು ದಾಖಲಿಸಿರುವುದಕ್ಕೆ ಶಾಸಕ ವಿನಯ್‌ ಕುಲಕರ್ಣಿ ಆಕ್ಷೇಪ

Bar & Bench

ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶದ ಆರೋಪದಡಿ ದಾಖಲಾಗಿಸಲಾಗಿರುವ ಎರಡು ಪ್ರತ್ಯೇಕ ದೂರುಗಳನ್ನು ಪ್ರಕರಣದ ಆರೋಪಿಯಾದ ಶಾಸಕ ವಿನಯ್ ಕುಲಕರ್ಣಿ ಪರ ವಕೀಲರು ಕರ್ನಾಟಕ ಹೈಕೋರ್ಟ್‌ನಲ್ಲಿ ಶುಕ್ರವಾರ ಬಲವಾಗಿ ಆಕ್ಷೇಪಿಸಿದ್ದಾರೆ.

ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂಬ ಆರೋಪದಡಿ ಐಪಿಸಿ ಸೆಕ್ಷನ್‌ 195ರ ಅನುಸಾರ ಸಿಬಿಐ ದಾಖಲಿಸಿರುವ ಖಾಸಗಿ ದೂರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಗೆ ಪರಿಗಣಿಸಿದೆ. ಇದನ್ನು ರದ್ದುಪಡಿಸಬೇಕು ಎಂದು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪರ ವಕೀಲರು “ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಒಂದೇ ಆರೋಪದಡಿ ಎರಡು ದೂರುಗಳನ್ನು ದಾಖಲಿಸಲಾಗಿದೆ. ಇದು ಸಂವಿಧಾನದ 20ನೇ ವಿಧಿಗೆ ವಿರುದ್ಧವಾಗಿದ್ದು, ಇದನ್ನು ರದ್ದುಪಡಿಸಬೇಕು” ಎಂದು ಕೋರಿದರು. ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲರು, ಸಮಯಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ಡಿಸೆಂಬರ್ 1ಕ್ಕೆ ಮುಂದೂಡಲಾಗಿದೆ.

ಸಿಬಿಐ ಸಲ್ಲಿಸಿರುವ ದೂರು ಮತ್ತು ಯೋಗೀಶ್‌ ಗೌಡ ಸಹೋದರ ಗುರುನಾಥ ಗೌಡ ಸಲ್ಲಿಸಿರುವ ಪ್ರತ್ಯೇಕ ದೂರುಗಳು ಒಂದೇ ಆರೋಪಕ್ಕೆ ಸಂಬಂಧಿಸಿವೆ. ಇವುಗಳಲ್ಲಿ ಗುರುನಾಥ ಗೌಡ ನೀಡಿದ್ದ ದೂರಿನ ಅನ್ವಯ ತನಿಖೆ ನಡೆಸಿದ್ದ ಧಾರವಾಡ ಪೊಲೀಸರು ಸಲ್ಲಿಸಿದ್ದ ‘ಬಿ‘ ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿ, ಮುಂದಿನ ತನಿಖೆಗೆ ಆದೇಶಿಸಿತ್ತು.