Yogesh Gowda Facebook
ಸುದ್ದಿಗಳು

ಯೋಗೀಶ್‌ ಗೌಡ ಕೊಲೆ ಪ್ರಕರಣ: ಟಿಂಗರಿಕರ್‌, ನಿಲೇಕಣಿ ಸಲ್ಲಿಸಿದ್ದ ಆರೋಪ ಮುಕ್ತ ಮನವಿ ವಜಾ ಮಾಡಿದ ವಿಶೇಷ ನ್ಯಾಯಾಲಯ

2016ರ ಜೂನ್‌ 15ರಂದು ಬೆಳ್ಳಂಬೆಳಗ್ಗೆ ಧಾರವಾಡದ ತಮ್ಮ ಒಡೆತನದ ಜಿಮ್‌ಗೆ ತೆರಳುತ್ತಿದ್ದಾಗ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

Siddesh M S

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಲಂಚ ಪಡೆದು, ತನಿಖೆ ದಿಕ್ಕು ತಪ್ಪಿಸುವ ಮೂಲಕ ನೈಜ ಆರೋಪಿಗಳನ್ನು ರಕ್ಷಿಸಲು ಯತ್ನಿಸಿದ್ದ ಆರೋಪ ಎದುರಿಸುತ್ತಿರುವ ಪ್ರಕರಣದ ಅಂದಿನ ತನಿಖಾಧಿಕಾರಿ ಚನ್ನಕೇಶವ ಟಿಂಗರಿಕರ್‌ ಮತ್ತು ಅವರ ಮೇಲಧಿಕಾರಿಯಾಗಿದ್ದ ಸಹಾಯಕ ಪೊಲೀಸ್‌ ಆಯುಕ್ತ (ಎಸಿಪಿ) ವಾಸುದೇವ ನಿಲೇಕಣಿ ಅವರು ತಮ್ಮ ವಿರುದ್ಧದ ಆರೋಪ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಚೆಗೆ ವಜಾ ಮಾಡಿದ್ದು, ಅಧಿಕಾರಿಗಳ ವಿರುದ್ದ ಆರೋಪ ನಿಗದಿ ಮಾಡಲು ಸಾಕಷ್ಟು ದಾಖಲೆಗಳಿವೆ ಎಂದಿದೆ (ಸಿಬಿಐ ವರ್ಸಸ್‌ ಬಸವರಾಜ ಮತ್ತು ಇತರರು).

ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ 19ನೇ ಆರೋಪಿಯಾಗಿರುವ ಟಿಂಗರಿಕರ್‌ ಸಿಆರ್‌ಪಿಸಿ ಸೆಕ್ಷನ್‌ 227ರ ಅಡಿ ಮತ್ತು 20ನೇ ಆರೋಪಿಯಾಗಿರುವ ವಾಸುದೇವ ನಿಲೇಕಣಿ ಸಿಆರ್‌ಪಿಸಿ 239ರ ಅಡಿ ಸಲ್ಲಿಸಿದ್ದ ಮನವಿಯನ್ನು 110ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಯಂತ್‌ ಕುಮಾರ್ ಅವರು ವಜಾ ಮಾಡಿದ್ದಾರೆ.

“ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿ ಬಸವರಾಜ, 15ನೇ ಆರೋಪಿಯಾದ ಮಾಜಿ ಸಚಿವ ವಿನಯ್‌ ಕುಲಕರ್ಣಿ ಮತ್ತು 16ನೇ ಆರೋಪಿ ಚಂದ್ರಶೇಖರ್‌ ಇಂಡಿ ಅಲಿಯಾಸ್‌ ಚಂದ್ರು ಮಾಮ ಅವರು ನಡೆಸಿದ್ದ ವಿಸ್ತೃತ ಪಿತೂರಿಯಲ್ಲಿ ನೈಜ ಆರೋಪಿಗಳನ್ನು ರಕ್ಷಿಸಲು ಮೇಲ್ನೋಟಕ್ಕೆ ಆರೋಪಿತ ಅಧಿಕಾರಿಗಳಾದ ಟಿಂಗರಿಕರ್‌ ಮತ್ತು ವಾಸುದೇವ ನಿಲೇಕಣಿ ಭಾಗಿಯಾಗಿದ್ದಾರೆ ಎಂಬುದು ಸಾಕ್ಷಿಗಳ ಹೇಳಿಕೆಯಿಂದ ತಿಳಿಯುತ್ತದೆ. ವಿಚಾರಣೆ ಆರಂಭಿಸಿದ ಸಿಬಿಐ ಪಿತೂರಿಯನ್ನು ಬಹಿರಂಗಪಡಿಸಿದೆ. ಆರೋಪಿತ ಅಧಿಕಾರಿಗಳ ವಿರುದ್ಧ ಆರೋಪ ನಿಗದಿ ಮಾಡಲು ಸಾಕಷ್ಟು ದಾಖಲೆಗಳಿವೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಆರೋಪಿತ ಅಧಿಕಾರಿಗಳಾದ ಟಿಂಗರಿಕರ್‌ ಮತ್ತು ವಾಸುದೇವ ನಿಲೇಕಣಿ ಅವರ ವಿರುದ್ಧ ಮೇಲ್ನೋಟಕ್ಕೆ ದಾಖಲೆಗಳು ಇರುವುದನ್ನು ಪರಿಗಣಿಸಿ ಸಕ್ಷಮ ಪ್ರಾಧಿಕಾರವು ಅಧಿಕಾರಿಗಳ ವಿಚಾರಣೆಗೆ ಅನುಮತಿಸಿದೆ. ತನಿಖೆಗೆ ಅನುಮತಿಸಿರುವ ಸಿಂಧುತ್ವದ ವಿಚಾರವನ್ನು ವಿಚಾರಣೆಯ ಸಂದರ್ಭದಲ್ಲಿ ಎತ್ತಬಹುದಾಗಿದೆ” ಎಂದು ಪೀಠವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

2016ರ ಜೂನ್‌ 15ರಂದು ಬೆಳ್ಳಂಬೆಳಗ್ಗೆ ಧಾರವಾಡದ ತಮ್ಮ ಒಡೆತನದ ಜಿಮ್‌ಗೆ ತೆರಳುತ್ತಿದ್ದಾಗ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಸಂಬಂಧ ಧಾರವಾಡದ ಉಪನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಇದರ ತನಿಖಾಧಿಖಾರಿಯಾಗಿ ಟಿಂಗರಿಕರ್‌ ನೇಮಕಗೊಂಡಿದ್ದರು. ಮೇಲಾಧಿಕಾರಿಯಾಗಿ ವಾಸುದೇವ್‌ ನಿಲೇಕಣಿ ಇದ್ದರು.

ಮೊದಲಿಗೆ ಪ್ರಕರಣದಲ್ಲಿ ಆಗ ಸಚಿವರಾಗಿದ್ದ ವಿನಯ್‌ ಕುಲಕರ್ಣಿ ಅವರ ಪಾತ್ರದ ಬಗ್ಗೆ ಪ್ರಸ್ತಾಪವಾಗಿದ್ದರೂ ಆಸ್ತಿ ವಿವಾದಕ್ಕೆ ಕೊಲೆಯಾಗಿದೆ ಎಂದು ಹೇಳಲಾಗಿತ್ತು. 2019ರ ಸೆಪ್ಟೆಂಬರ್‌ 6ರಂದು ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಸರ್ಕಾರವು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಇದರ ಬೆನ್ನಿಗೇ ವಿನಯ್‌ ಕುಲಕರ್ಣಿ ಅವರನ್ನು ಸಿಬಿಐ ಬಂಧಿಸಿತ್ತು. ವಿನಯ್‌ ಕುಲಕರ್ಣಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಮಧ್ಯೆ, 2021ರ ಸೆಪ್ಟೆಂಬರ್‌ 15ರಂದು ಟಿಂಗರಿಕರ್‌ ಮತ್ತು ವಾಸುದೇವ್‌ ಅವರ ವಿರುದ್ಧ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.

ಆರೋಪ ಪಟ್ಟಿಯಲ್ಲಿ ಏನಿದೆ?

ಮೊದಲಿಗೆ ಆರು ಸೃಷ್ಟಿತ ಆರೋಪಿಗಳನ್ನು ಬಂಧಿಸುವ ಮೂಲಕ ತನಿಖಾಧಿಕಾರಿ ಟಿಂಗರಿಕರ್‌ ಪ್ರಮಾದ ಎಸಗಿದ್ದಾರೆ. ಎಸಿಪಿ ಮುಂದೆ ಶರಣಾದ ಸೃಷ್ಟಿತ ಆರೋಪಿಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿಲ್ಲ. ಮೊದಲು ಬಂಧಿಸಿದ್ದ ಆರು ಆರೋಪಿಗಳು, ಏಳನೇ ಆರೋಪಿ ಸಂತೋಷ್‌ ಸವದತ್ತಿ ಮತ್ತು 18ನೇ ಆರೋಪಿ ವಿಕಾಸ್‌ ಕಲಬುರ್ಗಿ ಜೊತೆ ಸಮಾಲೋಚನೆ ನಡೆಸಿರುವುದು ಮೊಬೈಲ್‌ ಕರೆ ದಾಖಲೆಯಲ್ಲಿದೆ. ಈ ಕುರಿತು ತನಿಖೆ ಸಂದರ್ಭದಲ್ಲಿ ಅವರನ್ನು ತನಿಖೆಗೆ ಒಳಪಡಿಸಿಲ್ಲ.

ಸ್ಥಳ ಪರಿಶೀಲಿಸುವಾಗ ಆರೋಪಿಗಳ ಫಿಂಗರ್‌ ಪ್ರಿಂಟ್‌ ಸಂಗ್ರಹಿಸಿಲ್ಲ. ಸಿಸಿಟಿವಿ ದೃಶ್ಯಾವಳಿಯಲ್ಲಿನ ಅನುಮಾನಾಸ್ಪದ ವಾಹನಗಳ ಬಗ್ಗೆ ತನಿಖೆ ನಡೆಸಿಲ್ಲ. ಕೊಲೆ ಮಾಡಲು ಬಳಸಲಾದ ನೈಜ ಶಸ್ತ್ರಾಸ್ತ್ರಗಳ ಬದಲಿಗೆ ಸೃಷ್ಟಿತ ಶಸ್ತ್ರಾಸ್ತ್ರದ ಬಳಸಿ ಮಹಜರ್‌ ನಡೆಸಿದ್ದಾರೆ. ಈ ಮೂಲಕ ನಕಲಿ ದಾಖಲೆ ಮತ್ತು ಸಾಕ್ಷ್ಯಗಳನ್ನು ಸೃಷ್ಟಿಸಿದ್ದು, ಲಂಚ ಪಡೆಯುವ ಮೂಲಕ ವಿನಯ್‌ ಕುಲಕರ್ಣಿ ಸೇರಿದಂತೆ ಆರೋಪಿಗಳನ್ನು ಶಿಕ್ಷೆಯಿಂದ ವಿಮುಖಗೊಳಿಸುವ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆಯಾಗಿ ಕೊಲೆಯ ಉದ್ದೇಶವನ್ನು ಸರಿಯಾದ ರೀತಿಯಲ್ಲಿ ತನಿಖೆ ಮಾಡಲಾಗಿಲ್ಲ. ಕೊಲೆಯ ಉದ್ದೇಶವನ್ನು ರಕ್ಷಿಸುವ ಉದ್ದೇಶದಿಂದ ಭೂ ವಿವಾದ ಸೃಷ್ಟಿಸಲಾಗಿದೆ ಎಂದು ವಿವರಿಸಲಾಗಿದೆ.

20ನೇ ಆರೋಪಿಯಾದ ವಾಸುದೇವ್‌ ನಿಲೇಕಣಿ ಅವರು ತನಿಖೆಯ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದು, ಸೂಕ್ತ ತನಿಖೆ ನಡೆಸಿಲ್ಲ. ಅಲ್ಲದೇ, ಲಂಚ ಪಡೆದ ಆರೋಪವೂ ಇದೆ. ಸೃಷ್ಟಿತ ಆರೋಪಿಗಳು ನಿಲೇಕಣಿ ಅವರ ಎದುರು ಶರಣಾಗಿದ್ದರು. ನೈಜ ಕೊಲೆಗಾರರು ಬಳಸಿದ್ದ ಮಾರಕಾಸ್ತ್ರಗಳ ಬದಲಾವಣೆಯ ವಿಚಾರದಲ್ಲೂ ಅವರ ಪಾತ್ರವಿದೆ. ಅಲ್ಲದೇ, ಇಡೀ ಧಾರವಾಡ ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊಂದಿದ್ದ ಅವರು ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗಿದ್ದರು ಎಂದು ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಅರ್ಜಿದಾರರ ಪರ ವಕೀಲರಾದ ಸಿ ಎಸ್‌ ಕುಲಕರ್ಣಿ ಮತ್ತು ಮುಜಾಫ್ಫರ್‌ ಅಹ್ಮದ್‌ ಅವರು ಸಾಕ್ಷಿಗಳ ಹೇಳಿಕೆಯಲ್ಲಿ ಅಸಂಬದ್ಧತೆ ಮತ್ತು ಸಿಬಿಐ ತನಿಖೆಯಲ್ಲಿ ಅಸಮರ್ಪಕತೆಯನ್ನು ಎತ್ತಿ ತೋರುವ ಪ್ರಯತ್ನ ಮಾಡಿರುವುದನ್ನು ನ್ಯಾಯಾಲಯ ಪುರಸ್ಕರಿಸಿಲ್ಲ.

CBI Versus Basavaraj and others.pdf
Preview