ಸುದ್ದಿಗಳು

ನೀವು ಶಾಸಕ, ರಾಷ್ಟ್ರೀಯ ಪಕ್ಷವೊಂದರ ವಕ್ತಾರ, ಹೆಚ್ಚು ಜಾಗರೂಕರಾಗಿರಬೇಕು: ನವಾಬ್ ಮಲಿಕ್‌ಗೆ ಬಾಂಬೆ ಹೈಕೋರ್ಟ್

Bar & Bench

ಯಾರ ವಿರುದ್ಧವಾದರೂ ಹೇಳಿಕೆ ನೀಡುವಾಗ ಶಾಸಕರು ಅಥವಾ ಸಚಿವರಾದಂತಹ ಜನಪ್ರತಿನಿಧಿಗಳು ಹೆಚ್ಚು ಶ್ರದ್ಧೆ ವಹಿಸುವುದನ್ನು ನಿರೀಕ್ಷಿಸುವುದಾಗಿ ಬಾಂಬೆ ಹೈಕೋರ್ಟ್ ಶುಕ್ರವಾರ ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿಯ (ಎನ್‌ಸಿಪಿ) ನಾಯಕ ನವಾಬ್ ಮಲಿಕ್‌ ಅವರಿಗೆ ತಿಳಿಸಿದೆ.

ಮಲಿಕ್‌ ಅವರು ಮಾನಹಾನಿಕರ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಎನ್‌ಸಿಬಿ ಅಧಿಕಾರಿ ಸಮೀರ್‌ ವಾಂಖೆಡೆ ಅವರ ತಂದೆ ಧ್ಯಾನ್‌ದೇವ್ ಕಚ್ರುಜಿ ವಾಂಖೆಡೆ ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ರಜಾಕಾಲೀನ ಪೀಠದ ನ್ಯಾಯಮೂರ್ತಿ ಮಾಧವ್‌ ಜಾಮ್‌ದಾರ್ ವಿಚಾರಣೆ ನಡೆಸಿದರು.

ಮಲಿಕ್‌ ಅವರು ಸಮೀರ್‌ ಅವರ ಜನ್ಮ ಪ್ರಮಾಣಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ಅದರಲ್ಲಿ ವಾಂಖೆಡೆ ಅವರ ತಂದೆ ಮುಸ್ಲಿಂ ಹಾಗೂ ಅವರ ಹೆಸರು ʼದಾವೂದ್‌ʼ ಎಂಬುದಾಗಿ ಹೇಳಲಾಗಿತ್ತು.

ಈ ಸಂಬಂಧ 20 ಪುಟಗಳ ಅಫಿಡವಿಟ್‌ ಜೊತೆಗೆ ತಮ್ಮ ಹೆಸರು ಧ್ಯಾನ್‌ದೇವ್‌ ಮತ್ತು ತಾನು ಹಿಂದೂ ಮಹರ್‌ ಜಾತಿಗೆ ಸೇರಿರುವುದಾಗಿ ಸಾಬೀತುಪಡಿಸುವ 28 ದಾಖಲೆಗಳನ್ನು ಫಿರ್ಯಾದುದಾರರು ಸಲ್ಲಿಸಿದ್ದಾರೆ.

ಮಲಿಕ್ ಟ್ವೀಟ್ ಮಾಡಿರುವ ಜನನ ಪ್ರಮಾಣಪತ್ರದ ಕೈಬರಹದಲ್ಲಿ ಇಂಟರ್‌ಪೋಲೇಷನ್‌ ತಂತ್ರಜ್ಞಾನ ಬಳಸಿ ಬದಲಿಸಿರುವಂತೆ ಕಂಡುಬಂದಿದೆ ಎಂದು ನ್ಯಾಯಾಲಯ ಶುಕ್ರವಾರದ ವಿಚಾರಣೆ ವೇಳೆ ತಿಳಿಸಿದೆ. ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಖಾಸಗಿತನಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಜಾಮ್‌ದಾರ್, ಮಾನಹಾನಿಕರವಲ್ಲದ ಹೇಳಿಕೆ ನೀಡಬೇಕಿದ್ದರೆ ಮಾಹಿತಿಯ ನಿಖರತೆ ಖಚಿತಪಡಿಸಿಕೊಳ್ಳಲು ಅದನ್ನು ಪರಿಶೀಲಿಸುವುದು ಅತ್ಯಗತ್ಯ ಎಂದು ಹೇಳಿದರು.

ಒಬ್ಬ ಜನಪ್ರತಿನಿಧಿಯಾಗಿ, ಶಾಸಕನಾಗಿ, ಮಲಿಕ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೊದಲು ಅವುಗಳನ್ನು ಪರಿಶೀಲಿಸುವುದು ಬಹಳ ಮುಖ್ಯ ಎಂದು ನ್ಯಾಯಾಲಯ ಹೇಳಿದೆ.

“ನೀವು ವಿಧಾನಸಭೆಯ ಸದಸ್ಯರು, ರಾಷ್ಟ್ರೀಯ ರಾಜಕೀಯ ಪಕ್ಷವೊಂದರ ವಕ್ತಾರರಾಗಿದ್ದು ಸಾರ್ವಜನಿಕ ಪ್ರತಿನಿಧಿಯಾಗಿದ್ದೀರಿ. ನೀವು ಹೆಚ್ಚು ಜಾಗರೂಕರಾಗಿರಬೇಕು” ಎಂದು ನ್ಯಾ. ಜಾಮ್‌ದಾರ್ ಹೇಳಿದರು.

ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರೂ ಆಗಿರುವ ಮಲಿಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅತುಲ್ ದಾಮ್ಲೆ ಅವರು ಮಲಿಕ್‌ ಅಪ್‌ಲೋಡ್‌ ಮಾಡಿರುವ ಜನನ ಪ್ರಮಾಣ ಪತ್ರ ತಪ್ಪಾಗಿದೆ ಎಂಬುದನ್ನು ಸಾಬೀತುಪಡಿಸಲು ಫಿರ್ಯಾದಿ ಯಾವಾಗಲೂ ಅದರ ಮೂಲಪ್ರತಿಯನ್ನು ನೀಡಬಹುದಿತ್ತು. ಫಿರ್ಯಾದಿಯೇ ಒಪ್ಪಿಕೊಂಡಂತೆ ಅವರ ಬಳಿ ಮೂಲ ದಾಖಲೆ ಇಲ್ಲ. ಅಲ್ಲದೆ ಬೃಹನ್ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ ನೀಡಿರುವ ಜನನ ಪ್ರಮಾಣಪತ್ರವಾಗಿರುವುದರಿಂದ ಹೆಚ್ಚಿನ ಪರಿಶೀಲನೆ ನಡೆಸದೆ ಮಲಿಕ್‌ ಅವರು ಅದನ್ನು ಅಪ್‌ಲೋಡ್‌ ಮಾಡಿದ್ದಾರೆ ಎಂದು ಪ್ರಮಾಣಪತ್ರ ಪಡೆದ ಅಧಿಕೃತ ರೆಜಿಸ್ಟರ್‌ ಛಾಯಾಚಿತ್ರವನ್ನೂ ಅವರು ತೋರಿಸಿದರು. ಐಪಿಸಿ ಸೆಕ್ಷನ್‌ 499 ರ ಅಡಿಯಲ್ಲಿ ಪ್ರಾಮಾಣಿಕ ಉದ್ದೇಶದಿಂದ ನೀಡಿದ ಹೇಳಿಕೆಗಳು ಮಾನಹಾನಿಕರವಲ್ಲ ಎಂದರು.

ಆಗ ನ್ಯಾಯಾಲಯ ದಾಖಲೆಯನ್ನು ತಿರುಚಲಾಗಿದೆ ಎಂದು ತೋರುತ್ತಿದ್ದು ದಾಖಲೆಯ ಬಗ್ಗೆ ಹೇಳಿಕೆಗಳನ್ನು ಪ್ರಾಮಾಣಿಕವಾಗಿ ನೀಡಲಾಗಿದೆಯೇ ಎಂದು ಪ್ರಶ್ನಿಸಿತು. “ತಿದ್ದಿರುವಂತೆ ತೋರುತ್ತದೆ, (ಇದನ್ನು ಆಧರಿಸಿ) ಮಾಡಿದ ಟೀಕೆಗಳು ವಿಶ್ವಾಸಾರ್ಹ ಎಂದು ಹೇಳಬಹುದೇ? ಸೂಕ್ತ ಕಾಳಜಿಯೊಡನೆ ಹೇಳಿಕೆ ನೀಡಲಾಗಿದೆಯೇ? ಎಂತಹ ಸೂಕ್ತ ಕಾಳಜಿ (ತೆಗೆದುಕೊಳ್ಳಲಾಗಿದೆ)?" ಎಂದು ನ್ಯಾ. ಜಾಮ್‌ದಾರ್ ಪ್ರಶ್ನಿಸಿದರು. ಫಿರ್ಯಾದಿದಾರರ ಪರವಾಗಿ ಅರ್ಷಾದ್‌ ಶೇಕ್‌ ವಾದ ಮಂಡಿಸಿದರು.

ಐದು ಗಂಟೆಗಳ ಕಾಲ ವಾದ ಆಲಿಸಿದ ನ್ಯಾಯಮೂರ್ತಿಗಳು “ಮಲಿಕ್‌ ಅವರು ತಮ್ಮ ಕುಟುಂಬದ ವಿರುದ್ಶ ಯಾವುದೇ ಹೇಳಿಕೆ ನೀಡದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕು” ಎಂದು ಧ್ಯಾನ್‌ದೇವ್‌ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಕಾಯ್ದಿರಿಸಿದರು.