ಸುದ್ದಿಗಳು

ನಿವೃತ್ತರಾಗಲಿರುವ ನ್ಯಾ. ಇಂದೂ ಮಲ್ಹೋತ್ರಾ ಕುರಿತು ಹೃದಯಸ್ಪರ್ಶಿ ಮಾತುಗಳನ್ನಾಡಿದ ನ್ಯಾ. ಚಂದ್ರಚೂಡ್‌

ನ್ಯಾಯವಾದಿ ವರ್ಗದಿಂದ ನೇರವಾಗಿ ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದ ಮೊದಲ ಮಹಿಳೆ ನ್ಯಾ. ಇಂದೂ ಅವರು. ಈವರೆಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದ ಏಳು ಮಹಿಳೆಯರಲ್ಲಿ ಅವರೂ ಒಬ್ಬರು.

Bar & Bench

ಸುಪ್ರೀಂಕೋರ್ಟ್‌ ವಿಶೇಷ ಪೀಠದೆದುರು ಬುಧವಾರ ನಡೆದ ವಿಚಾರಣೆಯೊಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರಾ ಅವರ ನಡುವಿನ ಹೃದಯಸ್ಪರ್ಶಿ ಸಂಭಾಷಣೆಗೆ ವೇದಿಕೆಯಾಯಿತು.

“ನಾನು ನಿಮ್ಮೊಟ್ಟಿಗೆ ಕುಳಿತು ವಿಚಾರಣೆ ನಡೆಸುವುದನ್ನು ಕಳೆದುಕೊಳ್ಳುತ್ತಿದ್ದೇನೆ ಸಹೋದರಿ ಇಂದೂ. ನಿಮ್ಮೊಟ್ಟಿಗಿನ ವಿಚಾರಣೆಗಳನ್ನು ನಿಜಕ್ಕೂ ಆನಂದಿಸಿದೆ. ನೀವು ಮಾದರಿ ವ್ಯಕ್ತಿ” ಎಂದು ನ್ಯಾ ಚಂದ್ರಚೂಡ್‌ ನ್ಯಾ. ಇಂದೂ ಅವರನ್ನು ಉದ್ದೇಶಿಸಿ ಹೇಳಿದರು. ನಾನು ಕೂಡ ನಿಮ್ಮೊಟ್ಟಿಗೆ ನ್ಯಾಯಾಲಯ ಕಲಾಪದಲ್ಲಿ ಪಾಲ್ಗೊಳ್ಳುವುದನ್ನು ಕಳೆದುಕೊಳ್ಳುತ್ತಿದ್ದೇನೆ ಎಂದು ಇಂದೂ ಅವರು ಇದಕ್ಕೆ ಪ್ರತಿಕ್ರಿಯಿಸಿದರು.

ಇಂದು ಮಲ್ಹೋತ್ರಾ ಅವರನ್ನು 27 ಏಪ್ರಿಲ್, 2018 ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಯಿತು. ನ್ಯಾಯವಾದಿ ವರ್ಗದಿಂದ ನೇರವಾಗಿ ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಇಂದೂ ಮಲ್ಹೋತ್ರಾ ಅವರು ಪಾತ್ರರಾಗಿದ್ದಾರೆ. ಅವರು ಸುಪ್ರೀಂಕೋರ್ಟ್‌ನ ಏಳನೇ ಮಹಿಳಾ ನ್ಯಾಯಮೂರ್ತಿ ಕೂಡ. ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿಯಾಗಿ ನೇಮಕಗೊಂಡ ಎರಡನೇ ಮಹಿಳಾ ವಕೀಲರು ಎಂಬ ಹಿರಿಮೆ ಕೂಡ ಮಲ್ಹೋತ್ರಾ ಅವರದಾಗಿದ್ದು ಮೊದಲನೆಯವರು ನ್ಯಾ. ಲೀಲಾ ಸೇಠ್.