Karnataka HC and ULB election 
ಸುದ್ದಿಗಳು

[ನಗರ ಸ್ಥಳೀಯ ಸಂಸ್ಥೆ ಚುನಾವಣೆ] ಡಿ.30ರೊಳಗೆ ಚುನಾವಣೆ ನಡೆಸಲು ಹೈಕೋರ್ಟ್‌ ಆದೇಶ; ಸರ್ಕಾರದ ಅಸಾಮರ್ಥ್ಯದ ಬಗ್ಗೆ ಕಿಡಿ

ಮೀಸಲಾತಿ ಅಧಿಸೂಚನೆ ಹೊರಡಿಸಲು ನ. 26ರ ಗಡುವು ವಿಧಿಸಿದ ಹೈಕೋರ್ಟ್. ಸರ್ಕಾರದ ಸಬೂಬುಗಳಿಂದ ರೋಸಿ ಹೋದ ನ್ಯಾಯಾಲಯ. ಚುನಾವಣೆ ನಡೆಸಿ, ಯುಎಲ್‌ಬಿ ರಚಿಸುವುದು ನ್ಯಾಯಾಲಯದ ಕೆಲಸವೇ? ಎಂದು ಕಟು ಪ್ರಶ್ನೆ.

Siddesh M S

ಅವಧಿ ಮುಗಿದಿರುವ ನಗರ ಸ್ಥಳೀಯ ಸಂಸ್ಥೆಗಳ (ಯುಎಲ್‌ಬಿ) ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಅಧಿಸೂಚನೆ ಹೊರಡಿಸಲು ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌, ನವೆಂಬರ್‌ 26 ಒಳಗೆ ಈಗಾಗಲೇ ಮೀಸಲಾತಿ ಅಧಿಸೂಚನೆ ಹೊರಡಿಸಿರುವ 10 ಯುಎಲ್‌ಬಿಗಳೂ ಸೇರಿದಂತೆ ಎಲ್ಲಾ 56 ಯುಎಲ್‌ಬಿಗಳಿಗೂ ಅನ್ವಯಿಸುವಂತೆ ಮೀಸಲಾತಿ ಅಧಿಸೂಚನೆ ಹೊರಡಿಸಬೇಕು ಎಂದು ಬುಧವಾರ ಆದೇಶಿಸಿದೆ. ಅಲ್ಲದೇ ಡಿಸೆಂಬರ್‌ 30ರ ಒಳಗೆ ಚುನಾವಣೆ ಪೂರ್ಣಗಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

"ಸಂವಿಧಾನದ 343ರ ಉಪ ಕಲಂ 3ರ ಅನ್ವಯ ರಾಜ್ಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಸಂಬಂಧ ನಿರ್ದೇಶನ ನೀಡುವಂತೆ ಕೋರಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಸಲ್ಲಿಸಿರುವ ಅಫಿಡವಿಟ್‌ ಅನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.

“56 ಯುಎಲ್‌ಬಿಗಳ ಪೈಕಿ 10 ಯುಎಲ್‌ಬಿಗಳಿಗೆ ಈಗಾಗಲೇ ಮೀಸಲಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಉಳಿದ 46 ಯುಎಲ್‌ಬಿಗಳಿಗೆ ಸಂಬಂಧಿಸಿದಂತೆ ಮೀಸಲಾತಿ ಅಧಿಸೂಚನೆ ಹೊರಡಿಸಬೇಕಿದೆ. ಏಳು ದಿನಗಳ ಒಳಗೆ ಅಂದರೆ ನವೆಂಬರ್‌ 26ರ ಒಳಗೆ ಬಾಕಿ ಇರುವ ಯುಎಲ್‌ಬಿಗಳಿಗೆ ಅಧಿಸೂಚನೆ ಹೊರಡಿಸುವುದಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ತಿಳಿಸಿದ್ದಾರೆ” ಎಂದು ಆದೇಶದಲ್ಲಿ ವಿವರಿಸಿದೆ.

“ಚುನಾವಣೆ ನಡೆಸುವ ಕುರಿತಾದ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂಪಡೆಯುವಿಕೆ, ಚುನಾವಣೆ ದಿನಾಂಕ, ಮತ ಎಣಿಕೆ ಇತರೆ ಚಟುವಟಿಕೆಗಳನ್ನು ತಾತ್ಕಾಲಿಕ ಚುನಾವಣಾ ವೇಳಾಪಟ್ಟಿಯ ಪ್ರಕಾರ ನಡೆಸಲಾಗುವುದು. ಇಡೀ ಪ್ರಕ್ರಿಯೆಯನ್ನು ಡಿಸೆಂಬರ್‌ 30ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಚುನಾವಣಾ ಆಯೋಗವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಹೇಳಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿತು.

ಚುನಾವಣೆ ನಡೆಸಿ, ಯುಎಲ್‌ಬಿ ರಚಿಸುವುದು ನ್ಯಾಯಾಲಯದ ಕೆಲಸವೇ?

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಹಲವು ಯುಎಲ್‌ಬಿಗಳ ಅವಧಿ 2018ರಲ್ಲೇ ಮುಗಿದಿದೆ. ಈ ಸಂಬಂಧ ಚುನಾವಣೆ ನಡೆಸಲು ಆಯೋಗವು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ, ರಾಜ್ಯ ಸರ್ಕಾರವು ಮೀಸಲಾತಿ ಅಧಿಸೂಚನೆ ಹೊರಡಿಸಿಲ್ಲ. ಹೀಗಾಗಿ, ಆಯೋಗವು ಚುನಾವಣೆ ನಡೆಸಲಾಗುತ್ತಿಲ್ಲ” ಎಂದು ಪೀಠದ ಗಮನಸೆಳೆದರು.

ಇದರಿಂದ ಕೆರಳಿದ ಪೀಠವು “ಸರಿಯಾದ ಸಮಯಕ್ಕೆ ಚುನಾವಣೆ ನಡೆಸಿ ಯುಎಲ್‌ಬಿ ರಚಿಸುವಂತೆ ಮಾಡುವುದು ನ್ಯಾಯಾಲಯದ ಕೆಲಸವೇ? ಇದರ ಮೇಲ್ವಿಚಾರಣೆ ಮಾಡುವುದು, ಅದರ ಮೇಲೆ ನಿಗಾ ಇಡುವುದು ನ್ಯಾಯಾಲಯದ ಕೆಲಸವೇ?” ಎಂದು ರಾಜ್ಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿತು.

“ಪ್ರಕರಣ ವಿಚಾರಣೆಗೆ ಬಂದಾಗ ಅಫಿಡವಿಟ್‌ ಸಿದ್ಧವಾಗಿದೆ. ಕರಡು ಸಿದ್ಧವಾಗಿದೆ ಎನ್ನುತ್ತೀರಿ. ಯಾವಾಗಲೂ ಇದೇ ಕಾರಣ ಹೇಳಲಾಗುತ್ತಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆ ಎಂದು ನೀವೇಕೆ ಹೇಳುವುದಿಲ್ಲ? ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿ ಮೀಸಲಾತಿ ಅಧಿಸೂಚನೆ ಕುರಿತು ಮಾಹಿತಿ ನೀಡಬೇಕು. ನಿಮಗೆ ಹೆಚ್ಚಿನ ಕಾಲಾವಕಾಶ ನೀಡುವುದಿಲ್ಲ” ಎಂದು ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತು.

ನೀತಿ ಸಂಹಿತೆ ಇದ್ದ ಹಿನ್ನೆಲೆಯಲ್ಲಿ ಮೀಸಲಾತಿ ಅಧಿಸೂಚನೆ ಹೊರಡಿಸಲಾಗಿರಲಿಲ್ಲ ಎಂಬ ಸರ್ಕಾರದ ವಕೀಲರ ಸಮರ್ಥನೆಯನ್ನು ಒಪ್ಪದ ನ್ಯಾಯಾಲಯವು “ಅವಧಿ ಮುಗಿದಿರುವ ಯುಎಲ್‌ಬಿಗಳಿಗೆ ಚುನಾವಣೆ ನಡೆಸಲು ನೀವು ಔಪಚಾರಿಕತೆ ಪೂರ್ಣಗೊಳಿಸಿಲ್ಲ. ನೀವು ಸಂಪೂರ್ಣವಾಗಿ ಅಸಮರ್ಥರು. ನೀವು ಕೆಲಸ ಮಾಡಬೇಕಿರುವ ರೀತಿ ಇದಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿತು. ಮಧ್ಯಾಹ್ನ ಖುದ್ದು ನ್ಯಾಯಾಲಯದಲ್ಲಿ ಹಾಜರಾಗಿದ್ದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಫಿಡವಿಟ್‌ ಸಲ್ಲಿಸಿದರು.

ಎಲ್ಲೆಲ್ಲಿ ಚುನಾವಣೆ?

ನಗರಸಭೆ: ಗದಗ-ಬೆಟಗೇರಿ, ಹೊಸಪೇಟೆ, ಹೆಬ್ಬಗೋಡಿ.

ಪುರಸಭೆ: ಅಥಣಿ, ಅಣ್ಣಿಗೇರಿ, ಬಂಕಾಪುರ, ಜಿಗಣಿ, ಚಂದಾಪುರ, ಬಿಡದಿ, ಮಲೆಬನ್ನೂರು, ಕಾಪು, ಹಾರೋಗೇರಿ, ಮುಗಳಖೋಡ, ಮುನವಳ್ಳಿ, ಉಗಾರಖುರ್ದ, ಕಾರಟಗಿ, ಕುರೆಕುಪ್ಪ, ಹಗರಿಬೊಮ್ಮನಹಳ್ಳಿ, ಕುರಗೋಡು, ಮಸ್ಕಿ, ಕೆಂಭಾವಿ, ಕಕ್ಕೇರಾ.

ಪಟ್ಟಣ ಪಂಚಾಯಿತಿ: ನಾಯಕನಹಟ್ಟಿ, ವಿಟ್ಲ, ಕೋಟೆಕಾರು, ಎಂ.ಕೆ. ಹುಬ್ಬಳ್ಳಿ, ಕಂಕನವಾಡಿ, ನಾಗನೂರ, ಯಕ್ಸಾಂಬ, ಚೆನ್ನಮ್ಮ ಕಿತ್ತೂರು, ಅರಭಾವಿ, ಐನಾಪುರ, ಶೇಡಬಾಳ, ಚಿಂಚಲಿ, ಬೋರಗಾವ, ಕಲ್ಲೋಳಿ, ನಲತವಾಡ, ನಿಡಗುಂದಿ, ದೇವರಹಿಪ್ಪರಗಿ, ಆಲಮೇಲ, ಮನಗೂಳಿ, ಕೊಲ್ಹಾರ, ಕಮಟಗಿ, ಬೆಳಗಲಿ, ಅಮೀನಗಡ, ಗುತ್ತಲ, ಜಾಲಿ, ತಾವರಗೇರಾ, ಕುಕನೂರ, ಭಾಗ್ಯನಗರ, ಕನಕಗಿರಿ, ಮರಿಯಮ್ಮನಹಳ್ಳಿ, ಕವಿತಾಳ, ತುರವಿಹಾಳ, ಬಳಗಾನೂರ, ಸಿರವಾರ.