“ಬಹುಸಂಖ್ಯಾತರ ಅಭಿಪ್ರಾಯ ಆಧರಿಸಿ ನೀವು ವ್ಯಕ್ತಿಗಳ ಮೇಲೆ ಅಪವಾದ ಹೊರಿಸುತ್ತೀರಿ (ಸುಪ್ರೀಂ ಕೋರ್ಟ್ ನೇಮಿಸಿರುವ ಕೃಷಿ ತಜ್ಞರ ಸಮಿತಿ ಸದಸ್ಯರನ್ನು ಉದ್ದೇಶಿಸಿ). ಮಾಧ್ಯಮಗಳಲ್ಲಿನ ವರದಿಗಾರಿಕೆಯಿಂದ ನನಗೆ ತೀರ ಬೇಸರವಾಗಿದೆ,” ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದ್ದಾರೆ.
ಕೃಷಿ ಕಾಯಿದೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗಳ ವಿಚಾರಣೆಯನ್ನು ಬುಧವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ಪೀಠವು ಈಚೆಗೆ ನಾಲ್ವರು ತಜ್ಞರ ಸಮಿತಿಯನ್ನು ರಚಿಸಿತ್ತು. ಸಮಿತಿಯ ಸದಸ್ಯರು ಹಿಂದೆ ಈಗ ತಡೆಯಾಜ್ಞೆಗೆ ಒಳಪಟ್ಟಿರುವ ಕಾಯಿದೆಗಳ ಪರ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಆ ಸದಸ್ಯರಿರುವ ಸಮಿತಿಯ ಮುಂದೆ ಹಾಜರಾಗಿ, ಅಹವಾಲು ಹೇಳಿಕೊಳ್ಳುವುದಿಲ್ಲ ಎಂದು ರೈತ ಸಂಘಟನೆಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಸಿಜೆಐ ಬೊಬ್ಡೆ ಅವರು ಮೇಲಿನಂತೆ ಹೇಳಿದ್ದಾರೆ.
“ನೀವು ಜನರಿಗೆ ಹಣೆಪಟ್ಟಿ ಹಚ್ಚಲಾಗದು. ಜನರು ತಮ್ಮದೇ ಆದ ಅಭಿಪ್ರಾಯ ಹೊಂದಬಹುದು. ಜನರು ಅಭಿಪ್ರಾಯ ಹೊಂದಬಾರದೇ? ನ್ಯಾಯಮೂರ್ತಿಗಳೂ ಸಹ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ,” ಎಂದು ಸಿಜೆಐ ಬೊಬ್ಡೆ ಒಂದು ಹಂತದಲ್ಲಿ ಹೇಳಿದರು.
“ಸ್ವಚ್ಚವಾದ ರೀತಿಯಲ್ಲಿ ವಾದ ಮಂಡಿಸುತ್ತಿದ್ದೇವೆ ಎನ್ನುವ ರೀತಿಯಲ್ಲಿಯೇ ಪ್ರತಿಯೊಬ್ಬರು ನ್ಯಾಯಮೂರ್ತಿ ಎದುರು ವಾದಿಸುತ್ತಾರೆ. ಜನರಿಗೆ ಹಣೆಪಟ್ಟಿ ಹಚ್ಚುವುದು ಈಗ ಸಾಂಸ್ಕೃತಿಕ ವಿಚಾರವಾಗಿ ಮಾರ್ಪಟ್ಟಿದೆ,” ಎಂದು ಅವರು ಬೇಸರ ವ್ಯಕ್ತಪಡಿಸಿದರು. “ಕೃಷಿ ಕ್ಷೇತ್ರದಲ್ಲಿನ ತಜ್ಞರನ್ನು ಒಳಗೊಂಡ ಸಮಿತಿಯನ್ನು ನ್ಯಾಯಾಲಯ ನೇಮಿಸಿದೆ. ನ್ಯಾಯ ನಿರ್ಣಯಿಸುವ ಅಧಿಕಾರಗಳನ್ನು ಸಮಿತಿಗೆ ನೀಡಲಾಗಿಲ್ಲ” ಎಂದು ಸಿಜೆಐ ಬೊಬ್ಡೆ ವಿವರಿಸಿದರು.
“ಸಮಿತಿಯು ನ್ಯಾಯಿಕ ಪ್ರಕ್ರಿಯೆ ಭಾಗ ಎಂಬುದನ್ನು ನೀವು (ನ್ಯಾಯಾಲಯ) ಸ್ಪಷ್ಟಪಡಿಸಿದ ಮೇಲೂ ಯಾರಾದರೂ ಕೆಟ್ಟದಾಗಿ ಬರೆದರೆ ನಾನು ನ್ಯಾಯಾಂಗ ನಿಂದನೆ ದಾವೆ ಹೂಡುತ್ತೇನೆ,” ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡನೆ ವೇಳೆ ಹೇಳಿದರು.
ಕಿಸಾನ್ ಮಹಾಪಂಚಾಯತ್ ಸಲ್ಲಿಸಿದ್ದ ಮನವಿ ಆಧರಿಸಿ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದ್ದು, ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ಸಂಸತ್‌ನಲ್ಲಿ ಕಾಯಿದೆಗಳಿಗೆ ತಿದ್ದುಪಡಿ ಮಾಡುವಾಗ ಯಾವುದೇ ತೆರನಾದ ಚರ್ಚೆ ನಡೆಸಿಲ್ಲವಾದ್ದರಿಂದ ಅವುಗಳನ್ನು ಹಿಂಪಡೆಯಬೇಕು ಎಂಬುದು ಕಿಸಾನ್ ಒಕ್ಕೂಟಗಳ ಆಗ್ರಹವಾಗಿದೆ ಎಂದು ಕಿಸಾನ್ ಒಕ್ಕೂಟಗಳ ಪರ ಹಿರಿಯ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ವಿವರಿಸಿದರು.
ರೈತರು ಶಾಂತಿಯುತವಾಗಿ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಲಿದ್ದಾರೆ ಎಂದು ಭೂಷಣ್ ತಿಳಿಸಿದರು. ಈ ವಿಚಾರದಲ್ಲಿ ಭೂಷಣ್ ಅವರನ್ನು ನಂಬುದಾಗಿ ಪೀಠ ಹೇಳಿದ್ದು, ಸರ್ಕಾರವು ತನ್ನ ಬಳಿ ಇರುವ ಅಧಿಕಾರ ಚಲಾಯಿಸಬಹುದು ಎಂದು ಪುನರುಚ್ಚರಿಸಿದೆ.