BBMP 
ಸುದ್ದಿಗಳು

[ರಸ್ತೆ ಗುಂಡಿ ಪ್ರಕರಣ] ಎಲ್ಲವನ್ನೂ ಹೇಳುತ್ತೀರಿ, ಏನನ್ನೂ ಮಾಡುವುದಿಲ್ಲ: ಬಿಬಿಎಂಪಿ ವಿರುದ್ಧ ಹೈಕೋರ್ಟ್‌ ಸಿಡಿಮಿಡಿ

ನ್ಯಾಯಾಲಯದ ಆದೇಶವನ್ನು ಪಾಲಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿ ವಲಯದ ಮುಖ್ಯ ಎಂಜಿನಿಯರ್‌ಗಳು ರಸ್ತೆ ಗುಂಡಿ ಪತ್ತೆ, ಮುಚ್ಚುವ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸುವ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಆದೇಶಿಸಿದ ಪೀಠ.

Siddesh M S

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ಎಂಟೂ ವಲಯಗಳಲ್ಲಿ ರಸ್ತೆ ಗುಂಡಿ ಪತ್ತೆ ಹಚ್ಚುವ ಕೆಲಸವನ್ನು ಜಂಟಿಯಾಗಿ ನಡೆಸಿ, ಬಳಿಕ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಅಮೆರಿಕನ್‌ ರೋಡ್‌ ಟೆಕ್ನಾಲಜೀಸ್‌ ಅಂಡ್‌ ಸಲ್ಯೂಷನ್ಸ್‌ (ಎಆರ್‌ಟಿಎಸ್‌) ಪ್ರೈವೇಟ್‌ ಲಿಮಿಟೆಡ್‌ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ರಸ್ತೆ ಅಗೆಯುವ ಕೆಲಸದಲ್ಲಿ ನಿರತವಾಗಿರುವ ಪ್ರತಿವಾದಿಗಳಾದ ಬಿಡಬ್ಲುಎಸ್‌ಎಸ್‌ಬಿ, ಗೇಲ್‌ ಮತ್ತಿತರ ಸಂಸ್ಥೆಗಳಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಆದೇಶಿಸಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬೆಂಗಳೂರಿನ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ರಸ್ತೆ ಅಗೆಯುವ ಕೆಲಸದಲ್ಲಿ ನಿರತವಾಗಿರುವ ಪ್ರತಿವಾದಿ ಸಂಸ್ಥೆಗಳು ಎಂಟೂ ವಲಯದಲ್ಲಿ ಜಂಟಿಯಾಗಿ ರಸ್ತೆ ಗುಂಡಿ ಪತ್ತೆ ಹಚ್ಚುವ ಕೆಲಸ ಮಾಡಬೇಕು. ಈ ಸಂಬಂಧ ಜಂಟಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಬಳಿಕ ಗುಂಡಿ ಮುಚ್ಚುವ ಕೆಲಸವನ್ನು ಎಆರ್‌ಟಿಎಸ್‌ ನಡೆಸಲಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿ ವಲಯದ ಮುಖ್ಯ ಎಂಜಿನಿಯರ್‌ಗಳು ರಸ್ತೆ ಗುಂಡಿ ಪತ್ತೆ, ಮುಚ್ಚುವ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸುವ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪೀಠವು ಆದೇಶದಲ್ಲಿ ಹೇಳಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲ ವಿ ಶ್ರೀನಿಧಿ ಅವರು “ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿ ಸಲ್ಲಿಸಿದ್ದೇವೆ. ಸೆಂಟ್ರಲ್‌ ಬ್ಯುಸಿನೆಸ್‌ ಡಿಸ್ಟ್ರಿಕ್ಟ್‌ (ಸಿಬಿಡಿ) ವ್ಯಾಪ್ತಿಯಲ್ಲಿ ಗುಂಡಿ ಮುಚ್ಚುವ ಕೆಲಸವನ್ನು ಎಆರ್‌ಟಿಎಸ್‌ಗೆ ನೀಡಲಾಗಿದೆ. ವಿಸ್ತೃತವಾದ ಪ್ರದೇಶ ಮತ್ತು ಹೆಚ್ಚು ಸಮಯವನ್ನು ನೀಡಿದರೆ ನಾವು ಅಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡುತ್ತೇವೆ ಎಂದು ಎಆರ್‌ಟಿಎಸ್‌ ಮನವಿ ಮಾಡಿದೆ. ರಸ್ತೆ ಅಗೆಯುವ ಏಜೆನ್ಸಿಗಳು ಹಾಗೂ ಎಆರ್‌ಟಿಎಸ್‌ ಜೊತೆ ಜೊತೆಗೂಡಿ ಚರ್ಚಿಸಿ ಕ್ರಿಯಾ ಯೋಜನೆ ಸಿದ್ಧಪಡಿಸುತ್ತೇವೆ. ಸಿಬಿಡಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು 182 ಕಿ ಮೀ ರಸ್ತೆಯನ್ನು ಎಆರ್‌ಟಿಸಿ ನೀಡಲಾಗಿದೆ. ಈಗ 215 ಕಿ ಮೀ ರಸ್ತೆಯಲ್ಲಿ ಗುಂಡಿ ಮುಚ್ಚುವ ಕೆಲಸವನ್ನು ನೀಡಲಾಗುವುದು” ಎಂದರು.

ಅಮೆರಿಕನ್‌ ರೋಡ್‌ ಟೆಕ್ನಾಲಜೀಸ್‌ ಅಂಡ್‌ ಸಲ್ಯೂಷನ್ಸ್‌ (ಎಆರ್‌ಟಿಸಿ) ಪ್ರೈವೇಟ್‌ ಲಿಮಿಟೆಡ್‌ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಹಾಗೂ ಇತರೆ ಪ್ರತಿವಾದಿಗಳ ಪರ ವಕೀಲರು ಬಿಬಿಎಂಪಿ ಪರ ವಕೀಲರ ವಾದಕ್ಕೆ ಸಮ್ಮತಿಸಿದರು.

ಇದಕ್ಕೂ ಮುನ್ನ ಮುಖ್ಯ ನ್ಯಾಯಮೂರ್ತಿ ಅವಸ್ಥಿ ಅವರು “ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಬೇಕು. ಬಳಿಕ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು ಎಂದು ಕಳೆದ ಬಾರಿ ನಿರ್ದೇಶಿಸಲಾಗಿತ್ತು. ಬಿಬಿಎಂಪಿ ಎಲ್ಲವನ್ನೂ ಹೇಳುತ್ತದೆ. ಆದರೆ, ಏನನ್ನೂ ಮಾಡುವುದಿಲ್ಲ. ಕಳೆದ ಬಾರಿಯ ಆದೇಶದಂತೆ ಸಿಬಿಡಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ನೀವು ಏನು ಮಾಡಿದ್ದೀರಿ?" ಎಂದು ಕಟುವಾಗಿ ಪ್ರಶ್ನಿಸಿತು. ಮುಂದುವರೆದು "ಸಿಬಿಡಿ ವಿಚಾರದ ನಂತರ ಹೊರ ವಲಯದಲ್ಲಿ ಗುಂಡಿ ಮುಚ್ಚುವ ಕೆಲಸದ ಬಗ್ಗೆ ಮಾತನಾಡೋಣ. ಈಗ ವಲಯವಾರು ಗುಂಡಿ ಮುಚ್ಚುವ ಕೆಲಸಕ್ಕೆ ಸಂಬಂಧಿಸಿದಂತೆ ಎಆರ್‌ಟಿಎಸ್‌ ಅನ್ನು ಒಳಗೊಳ್ಳಬೇಕು. ಬೆಂಗಳೂರಿನಲ್ಲಿನ ಎಂಟೂ ವಲಯಗಳಿಗೆ ಸಂಬಂಧಿಸಿದಂತೆ ರಸ್ತೆ ಅಗೆಯುವ ಏಜೆನ್ಸಿ, ಎಆರ್‌ಟಿಎಸ್‌ ಜೊತೆ ಚರ್ಚಿಸಿ ಜಂಟಿ ಕ್ರಿಯಾ ಯೋಜನೆ ಸಿದ್ಧಪಡಿಸಿ. ಬಿಬಿಎಂಪಿ ಅನುಮತಿ ಇಲ್ಲದೇ ರಸ್ತೆ ಅಗೆಯುವ ಏಜೆನ್ಸಿಗಳನ್ನು ಪತ್ತೆ ಮಾಡಿ, ಅವರಿಗೆ ನಾವು ದಂಡ ವಿಧಿಸುತ್ತೇವೆ” ಎಂದರು.

ನ್ಯಾ. ಕೃಷ್ಣ ಕುಮಾರ್ ಅವರು‌ “ಪ್ರತಿ ವಲಯದಲ್ಲಿ ಯಾವ ಏಜೆನ್ಸಿ ರಸ್ತೆ ಅಗೆಯುವ ಕೆಲಸದಲ್ಲಿ ನಿರತವಾಗಿದೆ ಎಂಬುದನ್ನು ಪತ್ತೆ ಮಾಡಿ. ರಸ್ತೆ, ವಲಯ ಮತ್ತು ಏರಿಯಾದಲ್ಲಿ ಯಾರೆಲ್ಲಾ ರಸ್ತೆ ಅಗೆಯುತ್ತಿದ್ದಾರೆ ಪತ್ತೆ ಮಾಡಬೇಕು. ಈ ನಡುವೆ ಎಆರ್‌ಟಿಎಸ್‌ ಪ್ರಸ್ತಾವನೆ ಸಲ್ಲಿಸಬೇಕು. ಬಳಿಕ, ರಸ್ತೆ ಅಗೆಯುವ ಏಜೆನ್ಸಿ, ಎಆರ್‌ಟಿಎಸ್‌ ಒಟ್ಟಾಗಿ ಸೇರಿ ಜಂಟಿ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು” ಎಂದು ತಾಕೀತು ಮಾಡಿದರು. ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಎಸ್‌ ಪ್ರಭಾಕರ್‌ ವಿಚಾರಣೆಯಲ್ಲಿ ಭಾಗಿಯಾಗಿದ್ದರು. ಅಂತಿಮವಾಗಿ ಎಲ್ಲರ ವಾದವನ್ನು ದಾಖಲಿಸಿದ ಪೀಠವು ವಿಚಾರಣೆಯನ್ನು ಏಪ್ರಿಲ್‌ 19ಕ್ಕೆ ಮುಂದೂಡಿತು.