DIMHANS, MRI Machines and Karnataka HC
DIMHANS, MRI Machines and Karnataka HC 
ಸುದ್ದಿಗಳು

ಸುಸೌಕರ್ಯವಿರುವ ಕಚೇರಿಯಲ್ಲಿ ಕೂರುವ ನಿಮಗೆ ಜನರ ಸಮಸ್ಯೆ ಅರ್ಥವಾಗದು: ಸರ್ಕಾರದ ವಿರುದ್ಧ ಹೈಕೋರ್ಟ್‌ ಕಿಡಿ

Siddesh M S

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್‌) ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರ ಅಳವಡಿಸುವ ವಿಚಾರದಲ್ಲಿ ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಚುರುಕು ಮುಟ್ಟಿಸಿದೆ. ಎಂಐಆರ್‌ ಯಂತ್ರ ಅಳವಡಿಸದಿರುವುದು ಅತ್ಯಂತ ಆಘಾತಕಾರಿ ವಿಚಾರ. ನೀವು ಸೂಕ್ಷ್ಮತೆಯನ್ನೇ ಕಳೆದುಕೊಂಡಿದ್ದೀರಿ. ಸುಸೌಕರ್ಯವಿರುವ ಕಚೇರಿಯಲ್ಲಿ ಕುಳಿತುಕೊಳ್ಳುವ ನಿಮಗೆ (ಅಧಿಕಾರಿಗಳಿಗೆ) ಜನರ ಸಮಸ್ಯೆ ಅರ್ಥವಾಗುವುದಿಲ್ಲ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.

ಡಿಮ್ಹಾನ್ಸ್‌ನಲ್ಲಿ ಎಂಆರ್‌ಐ ಸೌಲಭ್ಯ ಕಲ್ಪಿಸುವ ಸಂಬಂಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆಗೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ (ಎಎಜಿ) ಧ್ಯಾನ್‌ ಚಿನ್ನಪ್ಪ ಅವರು “ಎಂಆರ್‌ಐ ಯಂತ್ರ ಡಿಮ್ಹಾನ್ಸ್‌ ತಲುಪಿದೆ. ಯಂತ್ರ ಅಳವಡಿಕೆ ಕೆಲಸ ಬಹುತೇಕ ಪೂರ್ಣಗೊಂಡಿದೆ. ಹೆಚ್ಚಿನ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ಇದರಿಂದ ಕೆರಳಿದ ನ್ಯಾಯಾಲಯವು “ಏನಾಗಿದೆಯೋ ನಮಗೆ ಬೇಕಿಲ್ಲ.‌ ಇನ್ನೂ ಎಂಆರ್‌ಐ ಯಂತ್ರ ಕೆಲಸ ಮಾಡುವ ರೀತಿ ಏಕೆ ಮಾಡಿಲ್ಲ? ನೀವು ಕೇಳಿದಷ್ಟು ಸಮಯವನ್ನು ನಾವು ನೀಡಿದ್ದೇವೆ. ಇದು ಮೊದಲ ಬಾರಿ ಏನೂ ಅಲ್ಲ. ಹಲವು ವರ್ಷಗಳಿಂದ ನಿಮಗೆ ಒಂದು ಯಂತ್ರವನ್ನು ಅಳವಡಿಸಲಾಗಿಲ್ಲ. ಈ ರೀತಿಯಲ್ಲಿ ನೀವು ಕೆಲಸ ಮಾಡುತ್ತಿದ್ದೀರಿ. ನೀವು ದಪ್ಪ ಚರ್ಮದ ಜನ. ಈ ವಿಳಂಬಕ್ಕೆ ಯಾರು ಹೊಣೆ ಹೇಳಿ. ಆ ಎಲ್ಲಾ ಅಧಿಕಾರಿಗಳ ವೇತನ ತಡೆ ಹಿಡಿಯುತ್ತೇವೆ. ಇದನ್ನು ಹೀಗೆ ಮುಂದುವರಿಯಲು ಬಿಡಲಾಗದು. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಅವರೇ ನಿಮಗೆ ವೇತನ ಬರುವುದಿಲ್ಲ. ಸುಸೌಕರ್ಯವಿರುವ ಕಚೇರಿಯಲ್ಲಿ ಕುಳಿತುಕೊಳ್ಳುವ ನಿಮಗೆ ಜನರ ಸಮಸ್ಯೆ ಅರ್ಥವಾಗುವುದಿಲ್ಲ” ಎಂದು ಕಟುವಾಗಿ ನುಡಿಯಿತು.

“ಎಂಆರ್‌ಐ ಯಂತ್ರ ಅಳವಡಿಸುವುದು ತಡವಾಗಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ. ಮೊದಲು ಎಂಆರ್‌ಐ ಯಂತ್ರ ಅಳವಡಿಸಲಿ. ಆಮೇಲೆ ನಾವು ಅಧಿಕಾರಿಯ ವೇತನ ಬಿಡುಗಡೆ ಮಾಡುತ್ತೇವೆ. ಈ ಸಂಬಂಧ ನೀವು ವರದಿ ಸಲ್ಲಿಸಿ. ಅಲ್ಲಿಯ ತನಕ ಅಧಿಕಾರಿಗೆ ವೇತನ ಸಿಗುವುದಿಲ್ಲ” ಎಂದು ಗುಡುಗಿತು.

“ಇದು ಅತ್ಯಂತ ಆಘಾತಕಾರಿ ವಿಚಾರ.‌ ನೀವು ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದೀರಿ. ಏಪ್ರಿಲ್‌ 21ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ. ಅದರೊಳಗೆ ಎಂಆರ್‌ಐ ಯಂತ್ರ ಕಾರ್ಯನಿರ್ವಹಿಸಬೇಕು. ಅಧಿಕಾರಿಯ ಅಸಮರ್ಥತೆಯ ಹಿನ್ನೆಲೆಯಲ್ಲಿ ಕಠಿಣವಾದ ವಿಚಾರವನ್ನು ಆದೇಶದಲ್ಲಿ ದಾಖಲಿಸಬಹುದು. ಆದರೆ, ನಾವು ಅದನ್ನು ಮಾಡುತ್ತಿಲ್ಲ. ನಾವು ನಿಮ್ಮನ್ನು (ಎಎಜಿ ಕುರಿತು) ಹಲವು ಬಾರಿ ನಂಬಿದ್ದೇವೆ. ಎಷ್ಟು ಬಾರಿ ನೀವು ಕಾಲಾವಕಾಶ ತೆಗೆದುಕೊಂಡಿದ್ದೀರಿ? ನಾವು ಇನ್ನು ನಿಮ್ಮನ್ನು ನಂಬುವುದಿಲ್ಲ” ಎಂದು ತೀಕ್ಷ್ಣವಾಗಿ ನುಡಿಯಿತು.

ರಾಜ್ಯ ಸರ್ಕಾರದ ಪರವಾಗಿ ಹಿಂದೆ ವಾದಿಸಿದ್ದ ವಕೀಲೆ ರೇವತಿ ಆದಿನಾಥ್‌ ನರ್ದೆ ಅವರು ವಾದ ಮಂಡಿಸಲು ಅವಕಾಶ ಕೇಳಿದರು. ಇದಕ್ಕೆ ಪೀಠವು ನಿರಾಕರಿಸಿತು.

ಅಂತಿಮವಾಗಿ ಪೀಠವು “ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಅವರ ಪರವಾಗಿ ಎಎಜಿ ಅವರು ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ಡಿಮ್ಹಾನ್ಸ್‌ಗೆ ಮಾರ್ಚ್‌ 28ರಂದು ಯಂತ್ರ ತಲುಪಿರುವುದನ್ನು ಖಾತರಿಪಡಿಸಲಾಗಿದೆ. ಎಂಆರ್‌ಐ ಯಂತ್ರ ಅಳವಡಿಕೆಗೆ ಸಂಬಂಧಿಸಿದಂತೆ ಶೇ.75ರಷ್ಟು ಸಿವಿಲ್‌ ಕೆಲಸ ಪೂರ್ಣಗೊಂಡಿದೆ. ಬಾಕಿ ಶೇ. 25ರಷ್ಟು ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಲಾಗಿದೆ” ಎಂದು ದಾಖಲಿಸಿ ಕೊಂಡಿತು.

“ಮಾರ್ಚ್‌ 30ರೊಳಗೆ ಎಂಆರ್‌ಐ ಯಂತ್ರ ಕಾರ್ಯಚರಣೆ ಮಾಡುವಂತೆ ಮಾಡಲಾಗುವುದು ಎಂದು ಎಎಜಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಅದನ್ನು ಆಧರಿಸಿ ನಾವು ಇಂದು ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಿದ್ದೆವು. ಎಂಆರ್‌ಐ ಯಂತ್ರ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿಬಾರಿಯೂ ನಾವು ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದೇವೆ. 2020ರ ಮಾರ್ಚ್‌ 5ರಂದು ಡಿಮ್ಹಾನ್ಸ್‌ಗೆ ಎಂಆರ್‌ಐ ಯಂತ್ರ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದ ನ್ಯಾಯಾಲಯವು ಆರು ವಾರಗಳ ಕಾಲಾವಕಾಶ ನೀಡಿತ್ತು. ಅಲ್ಲಿಂದ ಇಲ್ಲಿಯವರೆಗೂ ನ್ಯಾಯಾಲಯವು ಸರ್ಕಾರಕ್ಕೆ ಕಾಲಾವಕಾಶ ನೀಡುತ್ತಾ ಬಂದಿದೆ. ಆದರೆ, ಎಂಆರ್‌ಐ ಯಂತ್ರ ಕಾರ್ಯನಿರ್ವಹಣೆ ಮಾಡುವಂತೆ ಮಾಡಿಲ್ಲ. ಇದು ಅತ್ಯಂತ ದುಃಖದ ವಿಚಾರ. ಇದು ಸಂಬಂಧಪಟ್ಟ ಇಲಾಖೆಯ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ. ಅಧಿಕಾರಿಗಳ ನಡತೆಯನ್ನು ಒಪ್ಪಲಾಗದು. ಹೀಗಾಗಿ, ಎಂಆರ್‌ಐ ಯಂತ್ರ ಅಳವಡಿಸಿ, ಅದು ಕಾರ್ಯನಿರ್ವಹಣೆ ಮಾಡುವವರೆಗೆ ಅಧಿಕಾರಿಯ ವೇತನ ತಡೆ ಹಿಡಿಯಲಾಗುವುದು” ಎಂದು ಆದೇಶ ಮಾಡಿತು.

ಆದರೆ, ಎಎಜಿ ಅವರ ವಿನಮ್ರ ಕೋರಿಕೆ ಹಿನ್ನೆಲೆಯಲ್ಲಿ ಅಧಿಕಾರಿಯ ವೇತನ ತಡೆ ಹಿಡಿಯುವ ಸಾಲನ್ನು ಆದೇಶದಿಂದ ಕೈಬಿಡಲಾಯಿತು. ವಿಚಾರಣೆಯನ್ನು ಏಪ್ರಿಲ್‌ 21ಕ್ಕೆ ಮುಂದೂಡಲಾಗಿದೆ.