[ಡಿಮ್ಹಾನ್ಸ್‌] ಸರ್ಕಾರ ಕೆಲಸ ಮಾಡಲು ಏನು ಮಾಡಬೇಕು ಎಂದು ಕೇಳಿದ ಸಿಜೆ; ಯುಕ್ರೇನ್‌ಗೆ ಕಳುಹಿಸಿ ಎಂದ ನ್ಯಾ. ಕುಮಾರ್‌!

"ಯಾವುದೇ ಇಲಾಖೆ ನೋಡಿದರೂ ಇದೇ ಸಮಸ್ಯೆ. ನಿಮ್ಮ ವಿವರಣೆ ನಮಗೆ ಬೇಕಿಲ್ಲ. ನಿಮಗೆ ಆಸ್ಪತ್ರೆ ಬೇಡ ಅಂದರೆ ಅದನ್ನು ಮುಚ್ಚಿ ಬಿಡಿ. ಆಗ ಉನ್ನತೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ಸಿಜೆ ಅಸಮಾಧಾನ ವ್ಯಕ್ತಪಡಿಸಿದರು.
DIMHANS, MRI Machines and Karnataka HC
DIMHANS, MRI Machines and Karnataka HC

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್‌) ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಅಳವಡಿಸಿ, ಉನ್ನತೀಕರಿಸಿದ ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನಾಗಿಸಲು ರಾಜ್ಯ ಸರ್ಕಾರದ ಕೋರಿಕೆಯಂತೆ ಮೂರು ತಿಂಗಳ ಸಮಯ ನೀಡಲಾಗಿದೆ. ಆದರೂ, ಕೆಲಸವಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿತು.

ಡಿಮ್ಹಾನ್ಸ್‌ ಸುಧಾರಣೆಗೆ ಸಂಬಂಧಿಸಿದಂತೆ 1996ರಲ್ಲಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಒಂದು ಹಂತದಲ್ಲಿ “ನಿಮ್ಮ ಸರ್ಕಾರ ಕೆಲಸ ಮಾಡುವಂತೆ ಮಾಡಲು ಏನು ಮಾಡಬೇಕು?” ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರನ್ನು ಪ್ರಶ್ನಿಸಿದರು. ಇದಕ್ಕೆ ವಿಭಾಗೀಯ ಪೀಠದ ಮತ್ತೊಬ್ಬ ನ್ಯಾಯಮೂರ್ತಿಯಾದ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರು "(ಅವರು ಯುದ್ದಪೀಡಿತ) ಯುಕ್ರೇನ್‌ಗೆ ಕಳುಹಿಸಿಬಿಡಿ" ಎಂದು ಲಘು ದಾಟಿಯಲ್ಲಿ ಹೇಳಿದರು.

ಇದಕ್ಕೂ ಮುನ್ನ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ರೇಣುಕಾ ಆದಿನಾಥ ನಾರ್ದೆ ಅವರು “ಎಂಆರ್‌ಐ ಯಂತ್ರ ಪೂರೈಸುವುದಕ್ಕೆ ಸಂಬಂಧಿಸಿದಂತೆ ಟೆಂಡರ್‌ ಕರೆಯಲಾಗಿತ್ತು. ಎರಡೇ ಎರಡು ಕಂಪೆನಿಗಳು ಮುಂದೆ ಬಂದಿದ್ದವು. ಬಳಿಕ ಮತ್ತೆ ಟೆಂಡರ್‌ ಕರೆದು ಕಾರ್ಯಾದೇಶ ನೀಡಲಾಗಿದೆ. ಎಂಐಆರ್‌ ಯಂತ್ರ ಅವಳವಡಿಸಲು ಡಿಮ್ಹಾನ್ಸ್‌ನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ಕೆಲಸವೂ ಆರಂಭವಾಗಿದೆ. ಅಧಿಕಾರಿಗಳು ದಾಖಲೆಗಳನ್ನು ತಡವಾಗಿ ನೀಡಿದ್ದರಿಂದ ನಾನು ನ್ಯಾಯಾಲಯದ ಮುಂದೆ ಇಡಲು ಸಾಧ್ಯವಾಗಿಲ್ಲ. ಒಂದು ವಾರ ಸಮಯ ನೀಡಿದರೆ ನಿಮ್ಮ ಮುಂದೆ ವೇಳಾಪಟ್ಟಿ ಮಂಡಿಸುತ್ತೇನೆ. ತಾಂತ್ರಿಕ ಸಮಸ್ಯೆಗಳಿಂದ ಕೆಲಸ ಮಾಡುವುದು ತಡವಾಗಿದೆ” ಎಂದು ಸಮಯಜಾಯಿಷಿ ನೀಡುವ ಪ್ರಯತ್ನ ಮಾಡಿದರು.

ಇದಕ್ಕೆ ಸಿಜೆ ಅವರು “ಡಿಮ್ಹಾನ್ಸ್‌ ಉನ್ನತೀಕರಿಸಲಾಗಿದೆಯೇ? ಸರ್ಕಾರ ಏನನ್ನೂ ಮಾಡಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಪುನಾ ಕರೆಯಬೇಕೆ? ಪ್ರಕರಣ ಕೈಗೆತ್ತುಕೊಂಡ ಮೇಲೆ ದಾಖಲೆಗಳನ್ನು ಸ್ವೀಕರಿಸಲಾಗಿದೆ ಎನ್ನುತ್ತೀರಿ. ನೀವು (ಸರ್ಕಾರ) ಸುಧಾರಿಸುವುದಿಲ್ಲ. ನಮ್ಮ ಸಲುಗೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ. ಇದೇ ಸಮಸ್ಯೆ. ಪ್ರಧಾನ ಕಾರ್ಯದರ್ಶಿಯನ್ನು ಕರೆದು ನಮ್ಮ ಅಸಮಾಧಾನವನ್ನು ದಾಖಲಿಸಿದ್ದೇವೆ. ಈಗ ನೀವು ಕೆಲಸ ಮಾಡಿದ್ದೀರಿ ಎಂಬುದನ್ನು ತೋರಿಸಲು ಒಂದೇ ಒಂದು ದಾಖಲೆಯನ್ನೂ ನಮ್ಮ ಮುಂದೆ ಇಡಲಾಗಿಲ್ಲ. ಸಮಯ ವಿಸ್ತರಣೆ ಕೋರಿರುವ ಮನವಿಯನ್ನು ನಾವು ವಜಾ ಮಾಡುತ್ತೇವೆ. ಈ ಇಲಾಖೆಯ ಕಾರ್ಯನಿರ್ವಹಣೆಯ ಬಗ್ಗೆ ನಮ್ಮ ಅಸಮಾಧಾನವನ್ನು ದಾಖಲಿಸುತ್ತೇವೆ. ಪ್ರಧಾನ ಕಾರ್ಯದರ್ಶಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಸರ್ಕಾರ ಮತ್ತು ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸುತ್ತೇವೆ. ಅವರನ್ನು ವಜಾ ಮಾಡಲಿ. ಇದು ವಿಪರೀತವಾಯ್ತು” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈ ಮನವಿಯನ್ನು 1996ರಲ್ಲಿ ಸಲ್ಲಿಸಲಾಗಿದೆ. ಇದನ್ನು ಸಲ್ಲಿಸಿರುವ ವಕೀಲರು ಸುಪ್ರೀಂ ಕೋರ್ಟ್‌ ತಲುಪಿದ್ದಾರೆ. ನೀವು ಇನ್ನೂ ಅಲ್ಲೇ ಇದ್ದೀರಿ (ಕೆಲಸ ಮಾಡಿಲ್ಲ ಎಂಬುದಕ್ಕೆ). ನಾವು ನಿಮ್ಮನ್ನು ಕೆಲಸ ಮಾಡುವಂತೆ ಮಾಡಲಾಗಿಲ್ಲ. ಈ ಸರ್ಕಾರದ ಇಲಾಖೆಗಳ ಕಾರ್ಯನಿರ್ವಹಣೆಯಲ್ಲಿ ಏನು ಸಮಸ್ಯೆಯಾಗುತ್ತಿದೆ. ಎಲ್ಲಾ ಜವಾಬ್ದಾರಿಯೂ ನಮ್ಮ (ನ್ಯಾಯಾಲಯ) ಮೇಲಿದೆ. ಹೇಗೆ ಕೆಲಸ ಮಾಡಲಾಗುತ್ತಿದೆ ಎಂಬುದನ್ನು ನೋಡುವುದು ನಮ್ಮ ಕೆಲಸವಾಗಿದೆ. ಏನೂ ಮಾಡಲು ನಿಮಗೆ (ಸರ್ಕಾರ) ಇಷ್ಟವಿಲ್ಲ. ಯಾವುದೇ ಇಲಾಖೆಯಲ್ಲಿ ನೋಡಿದರೂ ಇದೇ ಸಮಸ್ಯೆ. ಇಲ್ಲಿ ಏನು ಸಮಸ್ಯೆಯಾಗುತ್ತಿದೆ. ನಾನು ವಿಶ್ಲೇಷಿಸಲಾಗುತ್ತಿಲ್ಲ. ನಿಮ್ಮ ವಿವರಣೆ ನಮಗೆ ಬೇಕಿಲ್ಲ. ನಿಮಗೆ ಆಸ್ಪತ್ರೆ ಬೇಡ ಅಂದರೆ ಅದನ್ನು ಮುಚ್ಚಿ ಬಿಡಿ. ಆಗ ಉನ್ನತೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಕಟುವಾಗಿ ನುಡಿದು "ಧ್ಯಾನ್‌ ಚಿನ್ನಪ್ಪ ಅವರನ್ನು ಪೀಠದ ಮುಂದೆ ಬರಲು ಹೇಳಿ" ಎಂದು ಆದೇಶಿಸಿದರು.

ನ್ಯಾಯಾಲಯದ ಮುಂದೆ ಬಂದ ಧ್ಯಾನ್‌ ಚಿನ್ನಪ್ಪ ಅವರು “ಅಮೆರಿಕಾದಿಂದ ಯಂತ್ರಗಳು ಇನ್ನಷ್ಟೇ ಪೂರೈಕೆಯಾಗಬೇಕಿದೆ. ಅದಕ್ಕೆ ಅಗತ್ಯವಾದ ಸಿದ್ಧತೆಯ ಕೆಲಸ ಆರಂಭವಾಗಿದೆ. ಆಸ್ಪತ್ರೆ ಉನ್ನತೀಕರಿಸಲು ಹಣಬೇಕು ಅದಷ್ಟನ್ನೇ ನಾನು ಹೇಳಬಹುದು” ಎಂದರು.

ಆಗ ಸಿಜೆ ಅವರು “ನಿಮ್ಮ ಕೋರಿಕೆಯಂತೆ ಸಮಯ ನೀಡಿದ್ದೇವೆ. ನಿಮ್ಮ ಸರ್ಕಾರವನ್ನು ಕೆಲಸ ಮಾಡುವಂತೆ ಮಾಡಲು ಏನು ಮಾಡಬೇಕು. ಈ ಅರ್ಜಿ ಸಲ್ಲಿಸಿದ ವಕೀಲರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಆದರೂ ನೀವು (ಸರ್ಕಾರ) ಇನ್ನೂ ಕೆಲಸ ಮಾಡುತ್ತಿಲ್ಲ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಂದೆ ಇಡಬೇಕಿದೆ. ನೋಡಿ ಇಲ್ಲಿ ಕರ್ನಾಟಕದಲ್ಲಿ ಏನಾಗುತ್ತಿದೆ ಎಂದು ಅವರಿಗೆ ಹೇಳಬೇಕಿದೆ. ಏನಾದರೂ ಅಲ್ಲಿಂದಲೇ ಮಾಡಿ ಎನ್ನಬೇಕಿದೆ. ನಾವು ಇಲ್ಲಿ ಸರ್ಕಾರವನ್ನು ಕೆಲಸ ಮಾಡುವಂತೆ ಮಾಡಲಾಗುತ್ತಿಲ್ಲ. ಇದು ಇಲ್ಲಿನ ಪರಿಸ್ಥಿತಿ” ಎಂದು ಬೇಸರ ವ್ಯಕ್ತಪಡಿಸಿದರು.

“ರಾಜ್ಯ ಸರ್ಕಾರವೇ ಆಸ್ಪತ್ತೆಯನ್ನು ಉನ್ನತೀಕರಿಸಬೇಕಿದೆ ಎಂದು ಹೇಳಿದೆ. ಈಗ ಅನುದಾನದ ಕೊರತೆಯಿಂದ ತಡವಾಗುತ್ತಿದೆ ಎಂಬುದನ್ನು ಒಪ್ಪಲಾಗದು. ನಿಮಗೆ ಕನಿಷ್ಠ ಜವಾಬ್ದಾರಿ ಇರಬೇಕು. ಇದನ್ನು ಮಾಡಲು ನಿಮಗೆ ಇನ್ನೆಷ್ಟು ಸಮಯಬೇಕು” ಎಂದು ತರಾಟೆಗೆ ತೆಗೆದುಕೊಂಡರು.

ಅಂತಿಮವಾಗಿ, “ಡಿಮ್ಹಾನ್ಸ್‌ ಉನ್ನತೀಕರಿಸುವ ಕೆಲಸ ಆರಂಭವಾಗಿದೆ. ಎಂಆರ್‌ಐ ಯಂತ್ರಗಳನ್ನು ಅಮೆರಿಕದಿಂದ ತರಿಸಿಕೊಳ್ಳುತ್ತಿದ್ದು, ಹಲವು ಕೆಲಸಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ವೇಳಾಪಟ್ಟಿ ನೀಡಲಾಗಿದೆ. ಹೀಗಾಗಿ 2022ರ ಮಾರ್ಚ್‌ 30ರ ಒಳಗೆ ಇಡೀ ಕೆಲಸವನ್ನು ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದ್ದು, ಅದರ ಕೋರಿಕೆಯಂತೆ ಏಪ್ರಿಲ್‌ 5ಕ್ಕೆ ವಿಚಾರಣೆ ಮುಂದೂಡಲಾಗಿದೆ. ಕೆಲಸ ಪೂರ್ಣಗೊಂಡಿರುವುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಬೇಕು. ಆಸ್ಪತ್ರೆ ಕೆಲಸ ಆರಂಭಿಸಬೇಕು. ಇಲ್ಲವಾದಲ್ಲಿ ಮುಂದಿನ ವಿಚಾರಣೆಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಬೇಕು” ಎಂದು ಪೀಠವು ಆದೇಶದಲ್ಲಿ ದಾಖಲಿಸಿದೆ.

Also Read
ಡಿಮ್ಹಾನ್ಸ್‌ ಅನ್ನು ಉನ್ನತೀಕರಿಸಿದ ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರವಾಗಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಟೆಂಡರ್‌ ಪ್ರಹಸನಕ್ಕೆ ಅಸಮಾಧಾನ

ಎಂಆರ್‌ಐ ಯಂತ್ರ ಪೂರೈಸಲು ಟೆಂಡರ್‌ ಕರೆದಾಗ ಒಬ್ಬರೇ ಒಬ್ಬರು ಬಿಡ್‌ ಮಾಡಿದ್ದಾರೆ. ಹೀಗಾಗಿ, ಹೊಸದಾಗಿ ಟೆಂಡರ್‌ ಕರೆಯಲಾಗಿದೆ. ಈಗ ಎಲ್ಲವೂ ನಡೆಯುತ್ತಿದೆ ಎಂದು ಚಿನ್ನಪ್ಪ ಹೇಳಿದರು. ಇದನ್ನೇ ವಕೀಲೆ ರೇಣುಕಾ ಹೇಳಿದರು. ಇದಕ್ಕೆ ಪೀಠವು “ಎರಡು ದಿನಗಳ ಹಿಂದೆ ಬಿಬಿಎಂಪಿ (ರಸ್ತೆ ಗುಂಡಿ ಮುಚ್ಚಲು ಸ್ವಯಂಚಾಲಿತ ಯಂತ್ರ ಪೂರೈಸುವುದಕ್ಕೆ ಸಂಬಂಧಿಸಿದ ಪ್ರಕರಣ) ಸಹ "ನಾವು ಟೆಂಡರ್‌ ಕರೆದಿದ್ದೇವೆ. ಆದರೆ ಯಾರೂ ಬಂದಿಲ್ಲ" ಎಂದಿದ್ದರು- ತುಂಬಾ ಸರಳವಾಗಿ, ಮುಗ್ಧರಂತೆ. ನೀವು ಅದನ್ನೇ ಹೇಳುತ್ತಿದ್ದೀರಿ. ಇಬ್ಬರೇ ಇಬ್ಬರು ಟೆಂಡರ್‌ನಲ್ಲಿ ಭಾಗವಹಿಸಿದ್ದೀರಿ ಎನ್ನುತ್ತಿದ್ದೀರಿ. ನಮಗೆ ಅರ್ಥವಾಗುತ್ತದೆ” ಎಂದು ಕುಟುಕಿತು.

Kannada Bar & Bench
kannada.barandbench.com