Justice Aravind Kumar

 
ಸುದ್ದಿಗಳು

ಗುಜರಾತಿಯಲ್ಲಿ ಉತ್ತರಿಸಿದರೆ ಕನ್ನಡದಲ್ಲಿ ಮಾತನಾಡುವೆ: ದಾವೆದಾರರಿಗೆ ಗುಜರಾತ್ ಹೈಕೋರ್ಟ್ ಸಿಜೆ ತೀಕ್ಷ್ಣ ಪ್ರತಿಕ್ರಿಯೆ

ಹೈಕೋರ್ಟ್‌ಗಳ ಭಾಷೆ ಇಂಗ್ಲಿಷ್ ಆಗಿದ್ದು ಅಧೀನ ನ್ಯಾಯಾಲಯಗಳಲ್ಲಿ ಮಾತ್ರ ಪ್ರಾದೇಶಿಕ ಭಾಷೆ ಬಳಸಬಹುದು ಎಂದು ನ್ಯಾ. ಕುಮಾರ್ ದಾವೆದಾರರಿಗೆ ನೆನಪಿಸಿದರು.

Bar & Bench

ನೀವು ಗುಜರಾತ್‌ನಲ್ಲಿದ್ದೀರಿ. ನಾನು ಗುಜರಾತಿ ಭಾಷೆಯಲ್ಲಿ ಉತ್ತರಿಸುತ್ತೇನೆ ಎಂದ ದಾವೆದಾರರೊಬ್ಬರಿಗೆ ಗುಜರಾತ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆ) ಅರವಿಂದ ಕುಮಾರ್‌ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಆಸಕ್ತಿದಾಯಕ ಘಟನೆ ಇತ್ತೀಚೆಗೆ ನಡೆದಿದೆ.

ಮೂಲತಃ ಕನ್ನಡಿಗರಾದ ನ್ಯಾ. ಕುಮಾರ್‌, ಹೈಕೋರ್ಟ್‌ಗಳ ಭಾಷೆ ಇಂಗ್ಲಿಷ್ ಆಗಿದ್ದು ಅಧೀನ ನ್ಯಾಯಾಲಯಗಳಲ್ಲಿ ಮಾತ್ರ ಪ್ರಾದೇಶಿಕ ಭಾಷೆ ಬಳಸಬಹುದು ಎಂದು ದಾವೆದಾರರಿಗೆ ಸ್ಪಷ್ಟಪಡಿಸಿದರು.

"ನೀವು ಗುಜರಾತಿಯಲ್ಲಿ ಉತ್ತರಿಸಲು ಬಯಸುತ್ತೀರೇನು?" ಎಂದು ನ್ಯಾ. ಕುಮಾರ್ ಪ್ರಶ್ನಿಸಿದರು. "ಹೌದು ಸರ್," ಎಂದು ಮನವಿದಾರರು ಪ್ರತಿಕ್ರಿಯಿಸಿದರು. ಈ ಹಂತದಲ್ಲಿ ಅವರು "(ದೆನ್‌) ಐ ವಿಲ್‌ ಟೆಲ್‌ ಯು ಇನ್‌ ಕನ್ನಡ (ಕನ್ನಡದಲ್ಲಿ ಮಾತು ಆರಂಭಿಸುತ್ತಾ) ನೀವು ಏನು ಮಾಡ್ತಾ ಇದ್ದೀರೋ ನಮಗೆ ಅರ್ಥ ಆಗ್ತಾ ಇಲ್ಲ. ನೀವು ಅದನ್ನು ಹೇಳೋ ಹಂಗಿದ್ರೆ ಕನ್ನಡದಲ್ಲಿ ಹೇಳಿ… ನಮಗೆ ಅರ್ಥ ಆಗೋ ಭಾಷೆನಲ್ಲಿ.” ಎಂದರು.

"ಯೇ ಗುಜರಾತ್ ಹೇ. ಮೇ ಪೆಹ್ಲೆ ಆ ಚುಕಾ ಹೂ ಹೈಕೋರ್ಟ್ ಮೇ (ಇದು ಗುಜರಾತ್‌. ನಾನು ಮೊದಲ ಬಾರಿಗೆ ಹೈಕೋರ್ಟ್‌ಗೆ ಬಂದಿದ್ದೇನೆ)" ಎಂದು ದಾವೆದಾರರು ಹೇಳಿದರು.

ಆಗ ಮುಖ್ಯ ನ್ಯಾಯಮೂರ್ತಿಗಳು "ಇದು ಹೈಕೋರ್ಟ್. ಜಿಲ್ಲಾ ನ್ಯಾಯಾಲಯವಲ್ಲ. ಜಿಲ್ಲಾ ನ್ಯಾಯಾಲಯದಲ್ಲಿ ಮಾತ್ರ ಸ್ಥಳೀಯ ಭಾಷೆಗೆ ಅನುಮತಿ ಇದೆ. ಇಲ್ಲಿ ಇಂಗ್ಲಿಷ್ ಮಾತ್ರ," ಎಂದು ಪ್ರತಿಕ್ರಿಯಿಸಿದರು.

ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಸಾಮಾನ್ಯವಾಗಿ ಹೊರ ರಾಜ್ಯಗಳಿಗೆ ಸೇರಿದವರಾಗಿದ್ದು ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರೊಂದಿಗೆ ಆಗಾಗ ಭಾಷೆಯ ತೊಡಕು ಸೇರಿದಂತೆ ಸಮಸ್ಯೆಗಳನ್ನು ಎದುರಿಸುತ್ತಾರೆ. ದಕ್ಷಿಣ ರಾಜ್ಯಗಳ ನ್ಯಾಯಮೂರ್ತಿಗಳು ದೇಶದ ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕಗೊಂಡಾಗ ಇಂತಹ ಘಟನೆಗಳು ಹೆಚ್ಚಾಗಿ ಸಂಭವಿಸುತ್ತವೆ.

ಕರ್ನಾಟಕದಲ್ಲಿ 1987ರಲ್ಲಿ ವಕೀಲ ವೃತ್ತಿ ಆರಂಭಿಸಿದ ನ್ಯಾ. ಕುಮಾರ್ 1999ರಲ್ಲಿ ಕರ್ನಾಟಕ ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ನೇಮಕಗೊಂಡರು. 2009ರಲ್ಲಿ ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿದ ಅವರನ್ನು 2012ರಲ್ಲಿ ಕಾಯಂಗೊಳಿಸಲಾಗಿತ್ತು. ಅಕ್ಟೋಬರ್ 13, 2021ರಂದು ನ್ಯಾ. ಕುಮಾರ್‌ ಅವರು ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಕುತೂಹಲದ ಸಂಗತಿ ಎಂದರೆ ಇತ್ತೀಚೆಗೆ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ “ಸಾಮಾನ್ಯರಿಗೆ ನ್ಯಾಯಾಲಯಗಳು ಹೆಚ್ಚು ಕೈಗೆಟಕುವಂತಾಗಲು ಕಾನೂನು ವ್ಯವಸ್ಥೆಯನ್ನು ಭಾರತೀಕರಣಗೊಳಿಸುವ ಅಗತ್ಯವಿದೆ” ಎಂದಿದ್ದರು.