Srinivas BV and Supreme Court
Srinivas BV and Supreme Court 
ಸುದ್ದಿಗಳು

ಕಿರುಕುಳ ಆರೋಪ: ಎಫ್ಐಆರ್ ರದ್ದತಿ ಕೋರಿ ಸುಪ್ರೀಂ ಮೊರೆಹೋದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್

Bar & Bench

ಕಾಂಗ್ರೆಸ್‌ನ ಮಾಜಿ ಕಾರ್ಯಕರ್ತೆಯೊಬ್ಬರ ಘನತೆಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ಬಿ ವಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಶ್ರೀನಿವಾಸ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕಳೆದ ವಾರ ಗುವಾಹಟಿ ಹೈಕೋರ್ಟ್‌ ತಿರಸ್ಕರಿಸಿತ್ತು ಜೊತೆಗೆ ಅವರ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಲು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.  

ತುರ್ತು ಪರಿಹಾರ ನೀಡುವಂತೆ ಕೋರಿ ಹಿರಿಯ ವಕೀಲ ದೇವದತ್ ಕಾಮತ್ ಅವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠದೆದುರು ಸೋಮವಾರ ಪ್ರಕರಣ ಪ್ರಸ್ತಾಪಿಸಿದರು. ಪೀಠ ಮುಂದಿನ ವಾರ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವ ಸಾಧ್ಯತೆ ಇದೆ.

ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ಮಾತುಗಳಿಂದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಮಾಜಿ ಸಹೋದ್ಯೋಗಿ ಹಾಗೂ ಅಸ್ಸಾಂ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ನೀಡಿದ ದೂರಿನ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಶ್ರೀನಿವಾಸ್‌ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಶ್ರೀನಿವಾಸ್‌ ಅವರ ಮನವಿಯ ಪ್ರಮುಖಾಂಶಗಳು

  • ಎಫ್‌ಐಆರ್‌ ಅನ್ನು ಸುಮ್ಮನೆ ಓದಿದರೂ ಸಾಕು ಅದು ಅಪರಾಧವನ್ನು ಆರೋಪಿಸುವಂತಹ ಸಂಗತಿಗಳನ್ನು ತೋರಿಸಲು ವಿಫಲವಾಗಿರುವುದು ಕಂಡುಬರುತ್ತದೆ.

  • ಛತ್ತೀಸ್‌ಗಢದಲ್ಲಿ ನಡೆದಿದೆ ಎನ್ನಲಾದ ಅಪರಾಧದ ತನಿಖೆ ಮಾಡಲು ಅಥವಾ ಎಫ್‌ಐಆರ್ ದಾಖಲಿಸಲು ಅಸ್ಸಾಂ ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ

  • ದಿಸ್‌ಪುರ ಪೊಲೀಸರೆದುರು ಹಾಜರಾಗಲು ಮೇ 12 ರವರೆಗೆ ಗಡುವು ವಿಸ್ತರಿಸಲಾಗಿದ್ದರೂ ತನಿಖೆಗಾಗಿ ಗುವಾಹಟಿ ತಲುಪಿದಾಗ ಪೊಲೀಸರು ನನ್ನನ್ನು ಬಂಧಿಸಬಹುದು ಎಂಬ ಆತಂಕ ಇದೆ.