Patiala House Court 
ಸುದ್ದಿಗಳು

ಎಐ ಶೃಂಗಸಭೆ ವೇಳೆ ಯುವ ಕಾಂಗ್ರೆಸ್‌ ಅರೆಬೆತ್ತಲೆ ಪ್ರತಿಭಟನೆ: ನಾಲ್ವರನ್ನು ಪೊಲೀಸ್‌ ವಶಕ್ಕೆ ನೀಡಿದ ದೆಹಲಿ ನ್ಯಾಯಾಲಯ

ಭಾರತೀಯ ಯುವ ಕಾಂಗ್ರೆಸ್‌ನ ನಾಲ್ವರು ಕಾರ್ಯಕರ್ತರ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಅವರನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.

Bar & Bench

ದೆಹಲಿಯಲ್ಲಿ ಕೃತಕ ಬುದ್ಧಿಮತ್ತೆ ಕುರಿತ ಜಾಗತಿಕ ಕಾರ್ಯಕ್ರಮವಾದ ಎಐ ಇಂಪ್ಯಾಕ್ಟ್ ಶೃಂಗಸಭೆ ವೇಳೆ ಭಾರತೀಯ ಯುವ ಕಾಂಗ್ರೆಸ್‌ (ಐವೈಸಿ) ಅರೆಬೆತ್ತಲೆ ಪ್ರತಿಭಟನೆ ನಡೆಸಿರುವುದು ವ್ಯತಿರಿಕ್ತತೆಯ ಎಲ್ಲೆಯನ್ನು ಮೀರಿದ್ದು, ವಿದೇಶಿಗರ ಮುಂದೆ ಭಾರತದ ರಾಜತಾಂತ್ರಿಕ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ದೆಹಲಿ ನ್ಯಾಯಾಲಯ ತಿಳಿಸಿದೆ.

ಫೆಬ್ರವರಿ 20ರಂದು ಭಾರತ ಮಂಡಪಂನಲ್ಲಿ ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯ ವೇಳೆ ಐವೈಸಿ ಸದಸ್ಯರು ಪ್ರಧಾನಿ ರಾಜಿಯಾಗಿದ್ದಾರೆ ಎಂದು ಕೂಗುತ್ತಾ ಅಂಗಿ ಬಿಚ್ಚಿ ಪ್ರತಿಭಟಿಸಿದ್ದರು. ಭಾರತ ಅಮೆರಿಕ ವಾಣಿಜ್ಯ ಒಪ್ಪಂದವನ್ನು ಟೀಕಿಸಿದ್ದ ಬರಹಗಳನ್ನು ತಮ್ಮ ಟಿ ಶರ್ಟ್‌ಗಳ ಮೇಲೆ ಪ್ರದರ್ಶಿಸಿದ್ದರು. ನಂತರ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಕಾರದ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.

ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಿದ್ದ ದೆಹಲಿ ಪೊಲೀಸರು ಸ್ಥಳದ ಭದ್ರತೆ ಉಲ್ಲಂಘಿಸಿದ ಹಾಗೂ ದೇಶ ವಿರೋಧಿ ಘೋಷಣೆ ಕೂಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಫೆಬ್ರವರಿ 21ರಂದು ನೀಡಿದ ಆದೇಶದಲ್ಲಿ, ಪಟಿಯಾಲಾ ಹೌಸ್ ನ್ಯಾಯಾಲಯಗಳ ಸಂಕೀರ್ಣದಲ್ಲಿರುವ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ರವಿ ಅವರು ಐವೈಸಿ ಕಾರ್ಯಕರ್ತರಾದ ಕೃಷ್ಣ ಹರಿ, ಕುಂದನ್ ಯಾದವ್, ಅಜಯ್ ಕುಮಾರ್ ಮತ್ತು ನರಸಿಂಹ ಯಾದವ್ ಅವರನ್ನು ಐದು ದಿನಗಳ ಕಾಲ ದೆಹಲಿ ಪೊಲೀಸ್ ವಶಕ್ಕೆ ನೀಡಿದರು.

ಆರೋಪಿಗಳು ಪೂರ್ವಯೋಜಿತವಾಗಿ ಉನ್ನತ ಭದ್ರತಾ ಪ್ರದೇಶಕ್ಕೆ ನುಗ್ಗಿ ಉಗ್ರ ಘೋಷಣೆಗಳನ್ನು ಕೂಗಿ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯುಂಟುಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಇದರಿಂದ ಕಾರ್ಯಕ್ರಮದ ಪಾವಿತ್ರ್ಯ ಮಾತ್ರವಲ್ಲ, ದೇಶದ ರಾಜತಾಂತ್ರಿಕ ಪ್ರತಿಷ್ಠೆಯೂ ಹಾನಿಗೊಳಗಾಗುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರಕರಣದಲ್ಲಿ ಸಂವಿಧಾನಾತ್ಮಕ ರಕ್ಷಣೆ ಅನ್ವಯವಾಗದು ಎಂದು ನ್ಯಾಯಾಲಯ ಒತ್ತಿಹೇಳಿದೆ.