

ಅಪರೂಪದ ಬೆಳವಣಿಗೆ ಎಂಬಂತೆ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ನಿವೃತ್ತ ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.
ರಾಜ್ಯ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗದ (ಇಸಿಐ) ನಡುವೆ ಸಹಕಾರದ ಕೊರತೆ ಇರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪಿನ್ ಪಂಚೋಲಿ ಅವರಿದ್ದ ಪೀಠ ತಿಳಿಸಿತು.
ಇಸಿಐಗೆ ನಿಯೋಜಿಸಲಾದ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಪ. ಬಂಗಾಳ ಸರ್ಕಾರ ನೋಡಿಕೊಳ್ಳಬೇಕು ಎಂದು ಫೆಬ್ರವರಿ 9ರಂದು ನ್ಯಾಯಾಲಯ ನಿರ್ದೇಶಿಸಿತ್ತು. ಆದರೆ ಸೂಕ್ತ ಅರ್ಹತೆ ಇರುವ ಅಧಿಕಾರಿಗಳನ್ನು ತನಗೆ ಒದಗಿಸುತ್ತಿಲ್ಲ ಎಂದು ಇಂದು ಇಸಿಐ ಸರ್ಕಾರದ ಮೇಲೆ ಇಂದು ಗೂಬೆ ಕೂರಿಸಿತು.
ವಿಚಾರಣೆಯ ಒಂದು ಹಂತದಲ್ಲಿ ನ್ಯಾಯಾಲಯ “ರಾಜ್ಯ ಸರ್ಕಾರ ಮತ್ತು ಇಸಿಐ ಎಂಬ ಎರಡು ಸಾಂವಿಧಾನಿಕ ಸಂಸ್ಥೆಗಳ ನಡುವೆ ದೌರ್ಭಾಗ್ಯಕರ ಆರೋಪ-ಪ್ರತ್ಯಾರೋಪದ ಆಟ ನಡೆಯುತ್ತಿದೆ. ಇದರಿಂದ ಪರಸ್ಪರ ನಂಬಿಕೆಯ ಕೊರತೆ ಉಂಟಾಗಿರುವುದು ಗೋಚರಿಸುತ್ತದೆ. ಮತದಾರರ ಪಟ್ಟಿಯಲ್ಲಿನ ಅಕ್ಷರ ದೋಷ- ಹೆಸರಿನ ದೋಷಗಳುಳ್ಳ ತಾರ್ಕಿಕ ವರ್ಗಕ್ಕೆ ಸೇರಿರುವ ವ್ಯಕ್ತಿಗಳು ತಮ್ಮ ಹಕ್ಕು ಸಾಧನೆ ಮಾಡಿರುವ ಹಾಗೂ ಆಕ್ಷೇಪಣೆಗಳನ್ನು ಎತ್ತಿರುವ ಹಂತದಲ್ಲಿ ಪ್ರಸ್ತುತ ಪ್ರಕ್ರಿಯೆ ಸ್ಥಗಿತಗೊಂಡಿದೆ. ನೋಟಿಸ್ ನೀಡಲಾದ ಬಹುತೇಕರು ಮತದಾರರ ಪಟ್ಟಿಯಲ್ಲಿ ಸೇರಿಸುವಂತೆ ತಮ್ಮ ದಾವೆಗೆ ಬೆಂಬಲವಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ದಾವೆಗಳನ್ನು ಅರೆ-ನ್ಯಾಯಾಂಗ (ಕ್ವಾಸಿ-ಜುಡಿಷಿಯಲ್) ಪ್ರಕ್ರಿಯೆಯ ಮೂಲಕ ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್‌ಒಗಳು) ಪರಿಶೀಲಿಸಿ ತೀರ್ಮಾನಿಸಬೇಕು,” ಎಂದು ಹೇಳಿತು.
ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಾಂಗ ಅಧಿಕಾರಿಗಳನ್ನು ನಿಯೋಜಿಸುವುದನ್ನು ಹೊರತುಪಡಿಸಿ ಬೇರೆಯ ದಾರಿ ಇಲ್ಲದಂತಹ ಸ್ಥಿತಿ ಉಂಟಾಗಿದೆ ಎಂದು ಅದು ಹೇಳಿತು.
“ಸಲ್ಲಿಸಲಾದ ದಾಖಲೆಗಳ ಪ್ರಾಮಾಣಿಕತೆಯನ್ನು ನ್ಯಾಯಸಮ್ಮತವಾಗಿ ಪರಿಶೀಲಿಸಿ, ಅದರ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಸೇರಿಸುವ ಅಥವಾ ಹೊರಗಿಡುವ ವಿಚಾರದಲ್ಲಿ ನ್ಯಾಯಸಂಗತ ತೀರ್ಪು ನೀಡುವುದಕ್ಕಾಗಿ, ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು ಸಂಪರ್ಕಿಸಿ, ಕೆಲ ಹಾಲಿ ನ್ಯಾಯಾಂಗ ಅಧಿಕಾರಿಗಳನ್ನು ಹಾಗೂ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಅಥವಾ ಜಿಲ್ಲಾ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತರಾದವರನ್ನು ನಿಯೋಜಿಸುವಂತೆ ಸೂಚಿಸದೆ ನಮಗೆ ಬೇರೆ ದಾರಿಯೇ ಉಳಿದಿಲ್ಲ. ಇವರು ಪ್ರತಿಯೊಂದು ಜಿಲ್ಲೆಯಲ್ಲಿ ಪಟ್ಟಿಯಲ್ಲಿನ ‘ಅಕ್ಷರ ದೋಷ- ಹೆಸರಿನ ದೋಷವನ್ನು ಒಳಗೊಳ್ಳುವ ತಾರ್ಕಿಕ ವ್ಯತ್ಯಯದ ವರ್ಗದ ಅಡಿಯಲ್ಲಿ ಇರುವ ದಾವೆಗಳ ನಿವಾರಣೆ ಅಥವಾ ಮರುಪರಿಶೀಲನೆಗೆ ಸಹಕರಿಸಲಿದ್ದಾರೆ. ಪ್ರತಿ ಅಧಿಕಾರಿಗೂ ಇಸಿಐ ಮತ್ತು ರಾಜ್ಯ ಸರ್ಕಾರದ ನಿಯೋಜಿತ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಸಹಾಯ ಮಾಡಬೇಕು” ಎಂಬುದಾಗಿ ನ್ಯಾಯಾಲಯ ಸೂಚಿಸಿತು.
ಈ ಕ್ರಮದಿಂದ ಸಾಮಾನ್ಯ ಪ್ರಕರಣಗಳ ವಿಚಾರಣೆಗೆ ವ್ಯತ್ಯಯ ಉಂಟಾಗಬಹುದೆಂಬುದನ್ನು ಒಪ್ಪಿಕೊಂಡ ನ್ಯಾಯಾಲಯ, ಮಧ್ಯಂತರ ಪರಿಹಾರ ಪ್ರಕರಣಗಳನ್ನು ಒಂದು ವಾರ ಅಥವಾ ಹತ್ತು ದಿನಗಳ ಕಾಲ ಪರ್ಯಾಯ ನ್ಯಾಯಾಲಯಗಳಿಗೆ ವರ್ಗಾಯಿಸುವ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ನ್ಯಾಯಮೂರ್ತಿಗಳ ಸಮಿತಿ, ರಿಜಿಸ್ಟ್ರಾರ್ ಜನರಲ್ ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರು ತೀರ್ಮಾನ ಕೈಗೊಳ್ಳಬಹುದೆಂದು ನಿರ್ದೇಶಿಸಿತು.
ರಾಜ್ಯ ಸರ್ಕಾರವು ಇಸಿಐಗೆ ಸಮರ್ಥ ಎ ದರ್ಜೆ ಅಧಿಕಾರಿಗಳನ್ನು ಒದಗಿಸಬೇಕಾದ ಬಾಧ್ಯತೆ ಹೊಂದಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಆದರೆ ಇಸಿಐ ತನ್ನಿಗೆ ಸಮರ್ಪಕ ಅರ್ಹತೆ ಹೊಂದಿದ ಅಧಿಕಾರಿಗಳನ್ನು ನೀಡಲಾಗುತ್ತಿಲ್ಲ ಎಂದು ಆರೋಪಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಇಸಿಐಗೆ ನಿಯೋಜಿಸಲಾದ ಅಧಿಕಾರಿಗಳ ಹುದ್ದೆ ಮತ್ತು ಸ್ಥಾನಮಾನವನ್ನು ನ್ಯಾಯಾಲಯವೇ ನಿರ್ಧರಿಸುವುದು ಬಹುತೇಕ ಅಸಾಧ್ಯವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಇಸಿಐ ಪರವಾಗಿ ಹಿರಿಯ ವಕೀಲ ಡಿ ಎಸ್ ನಾಯ್ಡು, ಪ. ಬಂಗಾಳ ಸರ್ಕಾರದ ಪರವಾಗಿ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ಪ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರವಾಗಿ ಹಿರಿಯ ನ್ಯಾಯವಾದಿ ಶ್ಯಾಂ ದಿವಾನ್ ವಾದ ಮಂಡಿಸಿದರು.