A1
A1
ಸುದ್ದಿಗಳು

ಮೋದಿ ಮಾನಹಾನಿ ಮಾಡಲು ಝಾಕಿಯಾ ಸಾಧನವಾಗಿ ಬಳಕೆ ಎಂದ ಗುಜರಾತ್ ನ್ಯಾಯಾಲಯ: ತೀಸ್ತಾ, ಶ್ರೀಕುಮಾರ್‌ಗೆ ಜಾಮೀನು ನಿರಾಕರಣೆ

Bar & Bench

ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಪ್ರಭುತ್ವದ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದ ಹಿನ್ನೆಲೆಯಲ್ಲಿ ಎಸ್‌ಐಟಿಯಿಂದ ಬಂಧಿತರಾಗಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌, ನಿವೃತ್ತ ಡಿಜಿಪಿ ಆರ್‌ಬಿ ಶ್ರೀಕುಮಾರ್‌ಗೆ ಜಾಮೀನು ನೀಡಲು ಗುಜರಾತ್ ನ್ಯಾಯಾಲಯವೊಂದು ಶನಿವಾರ ನಿರಾಕರಿಸಿದೆ. [ತೀಸ್ತಾ ಅತುಲ್ ಸೆಟಲ್ವಾಡ್ ಮತ್ತು ಗುಜರಾತ್‌ ಸರ್ಕಾರದ ನಡುವಣ ಪ್ರಕರಣ].

ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತಿತರ ಅಧಿಕಾರಿಗಳ ವಿರುದ್ಧ ಝಾಕಿಯಾ ಜಾಫ್ರಿ ಅವರು ದೂರು ಸಲ್ಲಿಸಲು ತೀಸ್ತಾ ಸೆಟಲ್ವಾಡ್‌, ಆರ್‌ ಬಿ ಶ್ರೀಕುಮಾರ್‌ ಮತ್ತಿತರರು ಪ್ರಚೋದನೆ ನೀಡಿದ್ದರು ಎಂದು ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ದಿಲೀಪ್‌ಕುಮಾರ್ ಧೀರಜ್‌ಲಾಲ್ ಥಾಕ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ತೀಸ್ತಾ ಮತ್ತು ಶ್ರೀಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 194 (ಸುಳ್ಳು ಪುರಾವೆ ನೀಡಿಕೆ ಅಥವಾ ಸೃಷ್ಟಿ), 211 (ಸುಳ್ಳು ಆರೋಪ), 218 (ಸಾರ್ವಜನಿಕ ಸೇವಕರ ವಿರುದ್ಧ ಸುಳ್ಳು ದಾಖಲೆ ಸೃಷ್ಟಿ), 468 (ವಂಚನೆಯ ಉದ್ದೇಶಕ್ಕಾಗಿ ಫೋರ್ಜರಿ),ಹಾಗೂ 120 ಬಿ (ಅಪರಾಧಕ್ಕೆ ಸಂಚು) ಅಡಿ ದೂರು ದಾಖಲಿಸಲಾಗಿದೆ.

ನ್ಯಾಯಾಲಯ ಅವಲೋಕನದ ಪ್ರಮುಖಾಂಶಗಳು

  • ಇಬ್ಬರೂ ಅರ್ಜಿದಾರ- ಆರೋಪಿಗಳು ಹಾಗೂ ಇತರರು ಅಂದಿನ ಗುಜರಾತ್‌ ಮುಖ್ಯಮಂತ್ರಿ (ಪ್ರಧಾನಿ ನರೇಂದ್ರ ಮೋದಿ) ಇನ್ನಿತರರ ವಿರುದ್ಧ ಆರೋಪ ಮಾಡಲು ಝಾಕಿಯಾ ಜಾಫ್ರಿ ಅವರನ್ನು ಬಳಸಿಕೊಂಡಿರುವುದು ಬಹುದೊಡ್ಡ ಪಿತೂರಿಯಾಗಿದೆ.

  • ಅಂದಿನ ಮುಖ್ಯಮಂತ್ರಿ, ಅಧಿಕಾರಿಗಳು ಹಾಗೂ ಪೊಲೀಸ್‌ ಸಿಬ್ಬಂದಿಯ ಮಾನಹಾನಿ, ಮಾಡಲು ಅಷ್ಟೇ ಅಲ್ಲದೆ ವಿಶ್ವಮಟ್ಟದಲ್ಲಿ ದೇಶದ ಮಾನ ತೆಗೆಯಲು ಮತ್ತು ಬೇರೆ ರಾಷ್ಟ್ರಗಳಿಂದ ಹಣ ಪಡೆಯಲು ಅವರು ಸುಳ್ಳು ಅಫಿಡವಿಟ್‌ ಮತ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ.

  • ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಅದು ತಪ್ಪು ಮಾಡುವುದಕ್ಕೆ ಉತ್ತೇಜನ ನೀಡಿದಂತಾಗುತ್ತದೆ.

  • ಮೇಲ್ಕಂಡ ಸಂದರ್ಭ ಸನ್ನಿವೇಶಗಳನ್ನು ಗಮನಿಸಿ ಅರ್ಜಿದಾರರು ಮಹಿಳೆಯಾಗಿದ್ದರೂ ಮತ್ತೊಬ್ಬ ಅರ್ಜಿದಾರರು ನಿವೃತ್ತ ಐಪಿಎಸ್‌ ಅಧಿಕಾರಿ ಮತ್ತು ವಯಸ್ಸಾದ ವ್ಯಕ್ತಿಯಾಗಿದ್ದರೂ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವ ಅಗತ್ಯವಿಲ್ಲ.

  • ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಅವರು ಸಾಕ್ಷ್ಯ ಹಾಳುಮಾಡುವ ಅಥವಾ ತನಿಖೆಯ ಮೇಲೆ ಪ್ರಭಾವ ಬೀರುವ ಸಂಭವವಿದೆ.

ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಪ್ರಭುತ್ವದ ವಿರುದ್ಧ ಸುಳ್ಳು ಆರೋಪ ಮಾಡಿದವರ ವಿರುದ್ಧ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಸೂಚಿಸಿತ್ತು ಈ ಹಿನ್ನೆಲೆಯಲ್ಲಿ ತೀಸ್ತಾ ಮತ್ತು ಶ್ರೀಕುಮಾರ್‌ ಅವರನ್ನು ಎಸ್‌ಐಟಿ ಬಂಧಿಸಿತ್ತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Teesta_Atul_Setalvad_and_Another_v__State_of_Gujarat.pdf
Preview