[ಗುಜರಾತ್‌ ಗಲಭೆ] ಸುಪ್ರೀಂ ತೀರ್ಪಿನ ಬೆನ್ನಿಗೇ ತೀಸ್ತಾ, ಶ್ರೀಕುಮಾರ್‌ ಅವರನ್ನು ವಶಕ್ಕೆ ಪಡೆದ ಗುಜರಾತ್‌ ಪೊಲೀಸ್‌

ಗುಜರಾತ್‌ನಲ್ಲಿ 2002ರಲ್ಲಿ ನಡೆದ ಕೋಮು ಗಲಭೆಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ತೋರಿತ್ತು ಎಂದು ಆಪಾದಿಸಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ ಹೇಳಿದ್ದನ್ನು ಇಲ್ಲಿ ನೆನೆಯಬಹುದು.
Teesta Setalvad
Teesta SetalvadFACEBOOK

ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್, ನಿವೃತ್ತ ಹಿರಿಯ ಪೊಲೀಸ್‌ ಅಧಿಕಾರಿ ಆರ್ ಬಿ ಶ್ರೀಕುಮಾರ್‌ ಅವರನ್ನು ಗುಜರಾತ್‌ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ತೀಸ್ತಾ ಅವರನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳವು ಮುಂಬೈನಲ್ಲಿ ವಶಕ್ಕೆ ಪಡೆದಿದ್ದರೆ, ಶ್ರೀಕುಮಾರ್ ಅವರನ್ನು ಗುಜರಾತ್‌ನ ಗಾಂಧಿನಗರದ ಅವರ ಮನೆಯಿಂದ ಅಹಮದಾಬಾದ್‌ನ ಅಪರಾಧ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಗಳ ಬಗ್ಗೆ ಗುಜರಾತ್‌ ಸರ್ಕಾರದ ವೈಫಲ್ಯತೆಯ ಕುರಿತು ಆಧಾರ ರಹಿತ ತಪ್ಪು ಆರೋಪಗಳನ್ನು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪಿನ ವೇಳೆ ಹೇಳಿದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.

Also Read
ಗುಜರಾತ್‌ ಕೋಮು ಗಲಭೆ: ಪ್ರಧಾನಿ ಮೋದಿಯವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ ಚಿಟ್‌ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಗಲಭೆಗಳ ವಿಷಯದಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಹಾಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿ ತೀರ್ಪು ಪ್ರಕಟಿಸಿದ್ದ ಸುಪ್ರೀಂ ಕೋರ್ಟ್‌ ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಗುರುತರ ಅಪಪ್ರಚಾರ, ಆರೋಪ ಮಾಡಿದ್ದ ಗುಜರಾತ್‌ ಪೊಲೀಸ್ ಅಧಿಕಾರಿಗಳಾದ ಆರ್‌ ಬಿ ಶ್ರೀಕುಮಾರ್‌, ಸಂಜೀವ್ ಭಟ್‌ ಮತ್ತು ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಅವರ ವಿರುದ್ಧ ತೀರ್ಪಿನಲ್ಲಿ ಕಿಡಿಕಾರಿತ್ತು. ಇಂತಹ ಕೃತ್ಯದಲ್ಲಿ ತೊಡಗಿದ್ದವರನ್ನು ಕಟಕಟೆಯಲ್ಲಿ ನಿಲ್ಲಿಸಬೇಕು ಎಂದು ಕಠಿಣವಾಗಿ ಹೇಳಿತ್ತು.

ಗುಜರಾತ್‌ನ ಅಹಮದಾಬಾದ್‌ ನಗರದಲ್ಲಿನ ಅಪರಾಧ ದಳದ ಪೊಲೀಸ್‌ ಅಧಿಕಾರಿಯೊಬ್ಬರು ತೀಸ್ತಾ ಹಾಗೂ ಶ್ರೀಕುಮಾರ್‌ ಅವರು ತನಿಖಾ ಅಧಿಕಾರಿಗಳೊಂದಿಗೆ ಕೈಜೋಡಿಸಿ ಸಂಚು ರೂಪಿಸುವ ಮೂಲಕ ನಕಲಿ ದಾಖಲೆಗಳು, ಸಾಕ್ಷ್ಯಗಳನ್ನು ಸೃಷ್ಟಿಸಿ ಭಾರತೀಯ ಅಪರಾಧ ಸಂಹಿತೆಯಡಿ ಅಪರಾಧ ಕೃತ್ಯವೆಸಗಿದ್ದಾರೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಇವರಿಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ತೀಸ್ತಾ ಹಾಗೂ ಶ್ರೀಕುಮಾರ್ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 468 (ನಕಲಿ ದಾಖಲೆಯ ಸೃಷ್ಟಿ), 471(ನಕಲಿ ದಾಖಲೆಯನ್ನು ಅಸಲಿಯೆಂದು ಬಳಸುವುದು), 194 (ತಿರುಚಲಾದ ಸಾಕ್ಷ್ಯ ನೀಡುವುದು) 211 (ಹಾನಿಯುಂಟು ಮಾಡುವ ಉದ್ದೇಶದಿಂದ ಸುಳ್ಳು ಆರೋಪ ಹೊರಿಸುವುದು) 218 (ಶಿಕ್ಷೆ ತಪ್ಪಿಸುವ ಸಲುವಾಗಿ ತಪ್ಪು ದಾಖಲೆ ನೀಡುವುದು) 120 ಬಿ (ಕ್ರಿಮಿನಲ್‌ ಸಂಚು ರೂಪಿಸುವುದು) ದಾಖಲಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com