Karnataka HC and election
Karnataka HC and election 
ಸುದ್ದಿಗಳು

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ: ಮೇ 17ಕ್ಕೆ ರಾಜ್ಯ ಚುನಾವಣಾ ಆಯೋಗದ ಮನವಿ ಆಲಿಸಲಾಗುವುದು ಎಂದ ಹೈಕೋರ್ಟ್‌

Bar & Bench

ಸುಪ್ರೀಂ ಕೋರ್ಟ್ ಎರಡು ದಿನಗಳ ಹಿಂದೆ ಮಧ್ಯಪ್ರದೇಶ ರಾಜ್ಯದ ಪ್ರಕರಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದ ಅರ್ಜಿಯನ್ನು ಮೇ 17ರಂದು ವಿಚಾರಣೆ ನಡೆಸುವುದಾಗಿ ಕರ್ನಾಟಕ ಹೈಕೋರ್ಟ್ ಗುರುವಾರ ಹೇಳಿದೆ.

ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಮೆಮೊ ಪರಿಗಣಿಸಿದ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ ಪ್ರಸಾದ್‌ ಮತ್ತು ಎಂ ಜಿ ಎಸ್ ಕಮಲ್ ಅವರಿದ್ದ ರಜಾಕಾಲೀನ ವಿಭಾಗೀಯ ಪೀಠವು ಅರ್ಜಿಯನ್ನು ಮೇ 17ರಂದು ವಿಚಾರಣೆ ನಡೆಸುವುದಾಗಿ ಹೇಳಿ, ವಿಚಾರಣೆಯನ್ನು ಮುಂದೂಡಿತು.

ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅದರಂತೆ, ರಾಜ್ಯದಲ್ಲೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಬೇಕಾಗಿದೆ. ಈಗಾಗಲೇ ಚುನಾವಣೆ ಸಾಕಷ್ಟು ವಿಳಂಬವಾಗಿದೆ. ಈ ಕುರಿತ ಚುನಾವಣಾ ಆಯೋಗದ ಅರ್ಜಿ ವಿಚಾರಣಾ ಹಂತದಲ್ಲಿದೆ. ಸುಪ್ರೀಂ ಕೋರ್ಟ್ ತೀರ್ಪಿನಿಂದ ತುರ್ತು ಸ್ಥಿತಿ ಎದುರಾಗಿದ್ದು, ಅದಕ್ಕಾಗಿ ಮೆಮೊ ಸಲ್ಲಿಸಲಾಗಿದೆ. ಮೇ 17ರಂದು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿಬೇಕು ಎಂದು ಮನವಿ ಮಾಡಿದರು.

ಕಳೆದ ವರ್ಷದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ದತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಸಹ ಪ್ರಕಟಿಸಿತ್ತು. ಮೀಸಲಾತಿ ಕರಡು ಸಹ ಪ್ರಕಟಿಸಲಾಗಿತ್ತು. ಇನ್ನೇನು ದಿನಾಂಕ ಘೋಷಣೆ ಮಾಡಬೇಕೆನ್ನುವಷ್ಟರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು ಸರ್ಕಾರ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿತ್ತು. ಅದನ್ನು ಪ್ರಶ್ನಿಸಿ ಚುನಾವಣಾ ಆಯೋಗವು ಹೈಕೋರ್ಟ್‌ ಮೆಟ್ಟಿಲೇರಿದೆ. ಆ ಅರ್ಜಿ ವಿಚಾರಣಾ ಹಂತದಲ್ಲಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆಸುವ ಸಂಬಂಧ ಕರ್ನಾಟಕ ಹೈಕೋರ್ಟ್‌ ನೀಡಿರುವ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದೆ. ಇಲ್ಲಿ ರಾಜ್ಯ ಸರ್ಕಾರದ ಮನವಿ ಪುರಸ್ಕರಿಸಿ ಸರ್ವೋಚ್ಚ ನ್ಯಾಯಾಲಯವು ಬಿಬಿಎಂಪಿ ಚುನಾವಣೆಗೆ ತಡೆ ನೀಡಿದೆ. ಚುನಾವಣೆಗೆ ವಿಧಿಸಿರುವ ತಡೆ ತೆರವು ಮಾಡುವಂತೆ ಕೋರಿ ರಾಜ್ಯ ಚುನಾವಣಾ ಆಯೋಗವು ಮನವಿ ಸಲ್ಲಿಸಿದೆ ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.