Karnataka HC and election
Karnataka HC and election 
ಸುದ್ದಿಗಳು

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ: ವಿಸ್ತೃತ ವಿಚಾರಣೆ ಅಗತ್ಯವಿದೆ ಎಂದು ಮೇ 23ಕ್ಕೆ ಮುಂದೂಡಿದ ಹೈಕೋರ್ಟ್‌

Bar & Bench

ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆಗೆ ತಿದ್ದುಪಡಿ ತಂದಿರುವುದಕ್ಕೆ ತಡೆ ನೀಡುವ ವಿಚಾರದಲ್ಲಿ ವಿಸ್ತೃತ ವಿಚಾರಣೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌ ವಿಚಾರಣೆಯನ್ನು ಮೇ 23ಕ್ಕೆ ಮುಂದೂಡಿದೆ.

ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಎಂ ಜಿ ಉಮಾ ಅವರ ನೇತೃತ್ವದ ರಜಾಕಾಲೀನ ವಿಭಾಗೀಯ ಪೀಠವು ಮಂಗಳವಾರ ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಮೂರ್ತಿ ಪಂಡಿತ್‌ ಅವರು “ಈ ಮನವಿಯಲ್ಲಿ ಅಂಥ ತುರ್ತೇನಿದೆ” ಎಂದು ಪ್ರಶ್ನಿಸಿದರು. ಇದಕ್ಕೆ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು “ಸುಪ್ರೀಂ ಕೋರ್ಟ್ ಈಚೆಗೆ ಮಧ್ಯಪ್ರದೇಶ ರಾಜ್ಯದ ಪ್ರಕರಣದಲ್ಲಿ ಎರಡು ವಾರಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸುವಂತೆ ಆದೇಶಿಸಿದೆ. ಅದು ಇಲ್ಲಿಗೂ ಅನ್ವಯಿಸಲಿದೆ” ಎಂದರು.

ಅದಕ್ಕೆ ನ್ಯಾ. ಪಂಡಿತ್‌ ಅವರು “ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವಾಗ ನೀವು ಈ ನ್ಯಾಯಾಲಯದಿಂದ ನಿರ್ದೇಶನ ಕೇಳುವ ಅಗತ್ಯವಿಲ್ಲ” ಎಂದರು. ಆಗ ಫಣೀಂದ್ರ ಅವರು “ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರವು ಆಯೋಗದ ಅಧಿಕಾರ ಕಸಿದುಕೊಂಡಿದೆ. ಇಲ್ಲಿ ಕಾಯಿದೆಗೆ ತಡೆ ಅಗತ್ಯವಾಗಿದೆ” ಎಂದರು.

ಇದಕ್ಕೆ ನ್ಯಾಯಮೂರ್ತಿಗಳು ಪ್ರಕರಣವನ್ನು ವಿಸ್ತೃತವಾಗಿ ಆಲಿಸಬೇಕಿದೆ. ಆದ್ದರಿಂದ ಸೋಮವಾರಕ್ಕೆ (ಮೇ 23) ವಿಚಾರಣೆ ನಿಗದಿ ಮಾಡಲಾಗಿದೆ ಎಂದು ಮುಂದೂಡಿದರು.

ಮೇ 12ರಂದು ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಮೆಮೊ ಪರಿಗಣಿಸಿದ್ದ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್‌ ಪ್ರಸಾದ್ ಮತ್ತು ಎಂ ಜಿ ಎಸ್ ಕಮಲ್ ಅವರಿದ್ದ ರಜಾಕಾಲೀನ ವಿಭಾಗೀಯ ಪೀಠವು ಅರ್ಜಿಯನ್ನು ಇಂದಿಗೆ ನಿಗದಿಪಡಿಸಿತ್ತು.

ಕಳೆದ ವರ್ಷದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಅವಧಿ ಪೂರ್ಣಗೊಂಡ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸಿದ್ದತೆ ಆರಂಭಿಸಿದ್ದ ಚುನಾವಣಾ ಆಯೋಗವು ಕ್ಷೇತ್ರ ಪುನರ್‌ವಿಂಗಡಣೆ ಮಾಡಿ ಮತದಾರರ ಅಂತಿಮ ಪಟ್ಟಿ ಸಹ ಪ್ರಕಟಿಸಿತ್ತು. ಮೀಸಲಾತಿ ಕರಡು ಸಹ ಪ್ರಕಟಿಸಲಾಗಿತ್ತು. ಇನ್ನೇನು ದಿನಾಂಕ ಘೋಷಣೆ ಮಾಡಬೇಕೆನ್ನುವಷ್ಟರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆದು ಸರ್ಕಾರ ಪ್ರತ್ಯೇಕವಾಗಿ ಸೀಮಾ ನಿರ್ಣಯ ಆಯೋಗ ರಚಿಸಿತ್ತು. ಅದನ್ನು ಪ್ರಶ್ನಿಸಿ ಚುನಾವಣಾ ಆಯೋಗವು ಹೈಕೋರ್ಟ್‌ ಮೆಟ್ಟಿಲೇರಿದೆ.