ಸುಪ್ರೀಂ ತೀರ್ಪು: ಬಿಬಿಎಂಪಿ, ಜಿಲ್ಲಾ-ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಎದುರಾಗಿರುವ ಕಾನೂನು ತೊಡಕುಗಳೇನು?

ಸುಪ್ರೀಂ ಕೋರ್ಟ್‌ ಈಚೆಗೆ ತೀರ್ಪು ನೀಡಿರುವ ಮಧ್ಯಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕರಣದಲ್ಲಿ ಕರ್ನಾಟಕ ಪಕ್ಷಕಾರವಲ್ಲ. ಹೀಗಿರುವಾಗ ಸರ್ಕಾರವು ಯಾವ ಪ್ರಕರಣದಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆ ಎನ್ನುವ ಜಿಜ್ಞಾಸೆ ಮೂಡಿದೆ.
Supreme Court and BBMP
Supreme Court and BBMP

ಮಧ್ಯಪ್ರದೇಶದಲ್ಲಿ ಬಾಕಿ ಉಳಿದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಯಾವುದೇ ವಿಳಂಬ ಮಾಡದೆ ಪ್ರಸ್ತುತ ನಡೆದಿರುವ ಸೀಟು ಹಂಚಿಕೆಯ ಪ್ರಕಾರವೇ ನಡೆಸಬೇಕು. ಇದು ದೇಶದೆಲ್ಲೆಡೆ ಬಾಕಿ ಉಳಿದಿರುವ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮೂರು ದಿನಗಳ ಹಿಂದೆ ನೀಡಿರುವ ತೀರ್ಪು ಕರ್ನಾಟಕದಲ್ಲಿ ಎರಡು ವರ್ಷಗಳಿಂದ ಬಾಕಿ ಇರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಒಂದು ವರ್ಷದಿಂದ ಬಾಕಿ ಇರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

2020ರ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ಸರ್ಕಾರವು ತಡೆಯಾಜ್ಞೆ ಪಡೆದುಕೊಂಡಿದೆ. ಈಗ, ತಡೆಯಾಜ್ಞೆಗೆ ತೆರವಾದ ಬಳಿಕ ಮಾತ್ರ ರಾಜ್ಯ ಚುನಾವಣಾ ಆಯೋಗವು ಚುನಾವಣೆ ನಡೆಸಬಹುದಾಗಿದೆ.

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ರಾಜ್ಯ ಸರ್ಕಾರವು ತಿದ್ದುಪಡಿ ತಂದಿರುವುದರಿಂದ ಒಂದು ವರ್ಷದಿಂದ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗಿಲ್ಲ. ಇದನ್ನು ರಾಜ್ಯ ಚುನಾವಣಾ ಆಯೋಗವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ಚುನಾವಣೆ ನಡೆಸುವ ಸಂಬಂಧ ರಾಜ್ಯ ಚುನಾವಣಾ ಆಯೋಗವು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ ಪ್ರಸಾದ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ಮೆಮೊ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿರುವ ಪೀಠವು ಸದರಿ ಪ್ರಕರಣದ ವಿಚಾರಣೆಯನ್ನು ಮೇ 17ಕ್ಕೆ ನಿಗದಿಪಡಿಸಿದೆ. ಇಲ್ಲಿ ನ್ಯಾಯಾಲಯ ನೀಡುವ ಆದೇಶವು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯನ್ನು ನಿರ್ಧರಿಸಲಿದೆ.

ಈ ಎಲ್ಲಾ ಬೆಳವಣಿಗಳ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ವಿಸ್ತೃತವಾಗಿ ಮಾತನಾಡಿದರು. “ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ತೀರ್ಪುನ್ನು ರಾಜ್ಯ ಸರ್ಕಾರ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸುಪ್ರೀಂ ಕೋರ್ಟ್‌ 2020ರ ಡಿಸೆಂಬರ್‌ 18ರಂದು ತಡೆ ನೀಡಿದೆ. ತಡೆಯಾಜ್ಞೆ ತೆರವಾಗಬೇಕು ಅಥವಾ ಈ ಸಂಬಂಧ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟನೆ ನೀಡುವವರೆಗೆ ಬಿಬಿಎಂಪಿಗೆ ಚುನಾವಣೆ ವಿಚಾರದಲ್ಲಿ ಆಯೋಗ ಮುಂದಡಿ ಇಡಲಾಗದು. ಇಲ್ಲಿ ಆಯೋಗಕ್ಕೆ ಯಾವುದೇ ಅಧಿಕಾರ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

Senior Counsel K N Phanindra
Senior Counsel K N Phanindra

“ಬಿಬಿಎಂಪಿ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವ ಸಂಬಂಧ ನಾವು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದೇವೆ. ಹಿಂದೆ, ಇದೇ ಪ್ರಕರಣದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌ ಮತ್ತು ಅಭಯ್‌ ಶ್ರೀನಿವಾಸ್‌ ಓಕ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬಂದಿತ್ತು. ಕರ್ನಾಟಕ ಹೈಕೋರ್ಟ್‌ನಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ತೀರ್ಪು ನೀಡಿದ್ದ ಪೀಠದಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಓಕ್‌ ಅವರು ಇದ್ದರು. ಈ ಕಾರಣ ನೀಡಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಗೆ ಬಂದಾಗ ಹಿಂದೆ ಸರಿದಿದ್ದರು. ಆನಂತರ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಮತ್ತೆ ಮೆಮೊ ಹಾಕಿದ್ದೇವೆ. ಈಗ ಮೇ 20ಕ್ಕೆ ಆ ಮೆಮೊ ವಿಚಾರಣೆಗೆ ನಿಗದಿಯಾಗಿದೆ” ಎಂದು ವಿವರಿಸಿದರು.

“ಬಿಬಿಎಂಪಿ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ಮೂರು ತಿಂಗಳು ಮುಂದೂಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿ ಹಾಕುವ ಕುರಿತು ಗುರುವಾರ ರಾಜ್ಯ ಸರ್ಕಾರವು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಸುಪ್ರೀಂ ಕೋರ್ಟ್‌ ಮೂರು ದಿನಗಳ ಹಿಂದೆ ತೀರ್ಪು ನೀಡಿರುವ ಮಧ್ಯಪ್ರದೇಶ ರಾಜ್ಯ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಪಕ್ಷಕಾರವಲ್ಲ. ಹೀಗಿರುವಾಗ ಯಾವ ಪ್ರಕರಣದಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸುತ್ತಾರೆ ಎಂಬುದರ ಮಾಹಿತಿ ಇಲ್ಲ” ಎಂದು ಹೇಳಿದರು.

“ಸುಪ್ರೀಂ ಕೋರ್ಟ್‌ನಲ್ಲಿ ಒಂದೊಮ್ಮೆ ರಾಜ್ಯ ಸರ್ಕಾರವು ತೀರ್ಪು ಮರುಪರಿಶೀಲನಾ ಅರ್ಜಿ ಹಾಕಿದರೂ ಅದು ವಜಾಗೊಳ್ಳಲಿದೆ. ಮಹಾರಾಷ್ಟ್ರ ಅಥವಾ ಮಧ್ಯಪ್ರದೇಶ ರಾಜ್ಯದ ಎರಡು ಪ್ರಕರಣಗಳಲ್ಲೂ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕುರಿತಂತೆ ಕಾರಣಗಳನ್ನು ನೀಡುವಂತಿಲ್ಲ. ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗೆ ವಿಳಂಬವಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿಚಾರದ ಕುರಿತ ದತ್ತಾಂಶವನ್ನು ಮುಂದಿನ ಚುನಾವಣೆಗೆ ಬಳಸಿಕೊಳ್ಳಿ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೀಗಿರುವಾಗ ಕರ್ನಾಟಕ ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಾಲಯ ಹೇಗೆ ಪರಿಗಣಿಸಲಿದೆ ಎನ್ನುವುದನ್ನು ನೋಡಬೇಕು” ಎಂದು ವಿವರಿಸಿದರು.

“ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಆಯೋಗಕ್ಕೆ ನೀಡಿಲ್ಲ. ಹೈಕೋರ್ಟ್‌ನಲ್ಲಿ ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ತಿದ್ದುಪಡಿ ಕಾಯಿದೆಗೆ ತಡೆ ನೀಡುವ ಕುರಿತಾದ ಪ್ರಕರಣದ ವಿಚಾರಣೆಯು ಮೇ 17ರಂದು ನಡೆಯಲಿದ್ದು, ಅಂದು ರಾಜ್ಯ ಸರ್ಕಾರವು ಯಾವ ನಿಲುವು ತಳೆಯಲಿದೆ ಎಂಬುದು ತಿಳಿಯಲಿದೆ” ಎಂದರು.

“ತಿದ್ದುಪಡಿ ಕಾಯಿದೆಯ ಮೂಲಕ ರಾಜ್ಯ ಸರ್ಕಾರವು ಆಯೋಗದಿಂದ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಅಧಿಕಾರಿಗಳನ್ನು ಹಿಂಪಡೆದಿದೆ. ಹೀಗಾಗಿ, ಆಯೋಗ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಇದಕ್ಕಾಗಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ತಿದ್ದುಪಡಿ ಮಾಡಿರುವುದಕ್ಕೆ ತಡೆ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ. ಇದನ್ನು ನ್ಯಾಯಾಲಯ ಪುರಸ್ಕರಿಸಿದರೆ ಕನಿಷ್ಠ ಪಕ್ಷ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗೆ ಚುನಾವಣೆ ನಡೆಸಲು ಪ್ರಕ್ರಿಯೆ ಆರಂಭಿಸಲಾಗುವುದು” ಎಂದರು.

ಬಿಬಿಎಂಪಿ ಚುನಾವಣೆ ವಿಳಂಬದ ಹಿನ್ನೆಲೆ

ಬಿಬಿಎಂಪಿ ಹಾಲಿ 198 ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಕೆಎಂಸಿ ಕಾಯಿದೆ 1976ಕ್ಕೆ ತಿದ್ದುಪಡಿ ತಂದಿತ್ತು. ಹೀಗಾಗಿ, ಬಿಬಿಎಂಪಿ ಚುನಾವಣೆಯನ್ನು ಹಿಂದಿನ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯುವುದಕ್ಕೂ ಮುನ್ನ ನಡೆಸಿರಲಿಲ್ಲ. 2020ರ ಸೆಪ್ಟೆಂಬರ್‌ 10ಕ್ಕೆ ಹಿಂದಿನ ಕೌನ್ಸಿಲ್‌ ಅವಧಿ ಮುಗಿದಿತ್ತು.

ವಾರ್ಡ್‌ ಸಂಖ್ಯೆ ಹೆಚ್ಚಳ ಮತ್ತಿತರ ಕಾರಣಗಳನ್ನು ನೀಡಿ ಚುನಾವಣೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಕಾಂಗ್ರೆಸ್‌ನ ಎಂ ಶಿವರಾಜು ಹಾಗೂ ಅಬ್ದುಲ್‌ ವಾಜಿದ್‌ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಮನವಿಯ ವಿಚಾರಣೆ ನಡೆಸಿದ್ದ ಅಂದಿನ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ನೇತೃತ್ವದ ವಿಭಾಗೀಯ ಪೀಠವು “ವಾರ್ಡ್‌ವಾರು ಮೀಸಲಾತಿಯ ಅಂತಿಮ ಪಟ್ಟಿ ಪ್ರಕಟವಾದ ಆರು ವಾರಗಳ ಒಳಗೆ 198 ವಾರ್ಡ್‌ಗಳಿಗೆ ಚುನಾವಣೆ ಪೂರ್ಣಗೊಳಿಸಬೇಕು” ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.

2020ರ ಸೆಪ್ಟೆಂಬರ್‌ 23ರ ಅಧಿಸೂಚನೆ ಆಧರಿಸಿ ಹೈಕೋರ್ಟ್‌ ಚುನಾವಣೆ ನಡೆಸಲು ಆದೇಶ ಮಾಡಿತ್ತು. ಈ ಆದೇಶದ ಸಿಂಧುತ್ವವನ್ನು ರಾಜ್ಯ ಸರ್ಕಾರ, ಡಾ. ಬಿ ಆರ್‌ ಅಂಬೇಡ್ಕರ್‌ ದಲಿತ ಸಂಘರ್ಷ ಸಮಿತಿ ಹಾಗೂ ಭಾಸ್ಕರ್‌ ಎಂಬವರು ಮೂರು ಪ್ರತ್ಯೇಕ ಮನವಿಗಳ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ 2020ರ ಡಿಸೆಂಬರ್‌ 18ರಂದು ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ಸ್ಪಷ್ಟನೆ ನೀಡದ ಹೊರತು ಬಿಬಿಎಂಪಿ ಚುನಾವಣೆ ನಡೆಸಲು ಆಯೋಗಕ್ಕೆ ಸಾಧ್ಯವಿಲ್ಲ.

ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ವಾರ್ಡ್‌ಗಳ ಸಂಖ್ಯೆಯನ್ನು ಕನಿಷ್ಠ 243ಕ್ಕೆ ಹೆಚ್ಚಿಸುವ ಉದ್ದೇಶದಿಂದ ಕೆಎಂಸಿ ಕಾಯಿಗೆ ತಿದ್ದುಪಡಿ ತರಲಾಗಿದೆ. ರಾಜ್ಯ ಸರ್ಕಾರವು ಸಾಂವಿಧಾನಿಕವಾಗಿ ಜಾರಿಗೆ ತಂದ ಕಾನೂನು ತಿದ್ದುಪಡಿಯ ಸಿಂಧುತ್ವವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿಯಬೇಕಿತ್ತು. ಕಾನೂನು ತಿದ್ದುಪಡಿಯು ಸಂವಿಧಾನದ 243 (ಯು) ವಿಧಿಯ ಆಶಯಗಳಿಗೆ ವಿರುದ್ಧವಾಗಿಲ್ಲ” ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿಯಲ್ಲಿ ಕರ್ನಾಟಕ ಸರ್ಕಾರ ವಿವರಿಸಿದೆ.

Also Read
ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ: ಮೇ 17ಕ್ಕೆ ರಾಜ್ಯ ಚುನಾವಣಾ ಆಯೋಗದ ಮನವಿ ಆಲಿಸಲಾಗುವುದು ಎಂದ ಹೈಕೋರ್ಟ್‌

ರಾಜ್ಯ ಸರ್ಕಾರದ ನಿಲುವೇನು?

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ ಭಕ್ತವತ್ಸಲ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆ ಕುರಿತು ಅಧ್ಯಯನ ನಡೆಸಿ, ಮೀಸಲಾತಿ ನಿಗದಿಗೆ ಶಿಫಾರಸ್ಸುಗಳನ್ನು ಮಾಡಲು ಆಯೋಗ ರಚನೆ ಮಾಡಲಾಗಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಿ, ಮೀಸಲಾತಿ ನಿಗದಿಪಡಿಸಿ ಚುನಾವಣೆ ನಡೆಸಲು ಮೂರು ತಿಂಗಳು ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ನ್ಯಾಯಾಲಯವು ರಾಜ್ಯ ಸರ್ಕಾರದ ಮನವಿಯನ್ನು ಒಪ್ಪದಿದ್ದರೆ ಸ್ಥಳೀಯ ಸಂಸ್ಥಗಳಿಗೆ ಹಿಂದಿನ ಚುನಾವಣೆಯನ್ನು ಆಧಾರವಾಗಿಟ್ಟುಕೊಂಡು ರೋಸ್ಟರ್‌ ಬದಲಿಸಿ, ಮೀಸಲಾತಿ ಕಲ್ಪಿಸಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡುವಂತೆ ಕೋರಲು ನಿರ್ಧಾರ ಮಾಡಲಾಗಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರು ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದರು.

Kannada Bar & Bench
kannada.barandbench.com