ವ್ಯವಸ್ಥೆಯಲ್ಲಿ ನಾವು ಇರಿಸಬಹುದಾದ ಏಕೈಕ ನಂಬಿಕೆ ಎಂದರೆ ಅದು ಕುರುಡು ನಂಬಿಕೆ

ಸ್ವಾಮಿ ಅವರ ಸಾವು ಸೂಕ್ತಕಾಲಕ್ಕೆ ಕಾರ್ಯಪ್ರವೃತ್ತರಾಗಲು ವಿಫಲವಾದ ನ್ಯಾಯಾಲಯಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಅವರ ಸಾವಿಗೆ ನಾವು ಶೋಕಿಸುವಾಗಲೇ ಸಂಸ್ಥೆಗಳಲ್ಲಿ ಹುಟ್ಟಿರುವ ಅಂಧಶ್ರದ್ಧೆಯನ್ನು ಸಂಭ್ರಮಿಸಬೇಕಿರುವುದು ವಿಷಾದ.
Stan Swamy
Stan Swamy

"ನಮ್ಮ ಮೇಲೆ ಮತ್ತು ವ್ಯವಸ್ಥೆಯ ಮೇಲೆ ನಂಬಿಕೆ ಇಡಿ," ಇದು ಈ ವರ್ಷದ ಆರಂಭದಲ್ಲಿ ಫಾದರ್ ಸ್ಟಾನ್ ಸ್ವಾಮಿ ಅವರ ಪರ ವಕೀಲರ ವಿರುದ್ಧ ಸಿಡುಕಿದ ನ್ಯಾಯಾಲಯ ಹೇಳಿದ ಮಾತು. ಸ್ವಾಮಿ ಪರವಾಗಿ ಕಿರಿಯ ವಕೀಲರೊಬ್ಬರು ಬರೆದಿದ್ದ ಲೇಖನವೊಂದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯ ಈ ಮಾತುಗಳನ್ನಾಡಿತ್ತು. ಇದು ನಡೆದದ್ದು ಸ್ವಾಮಿ ಅವರು ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ ಮೊರೆ ಹೋದ ಒಂದು ತಿಂಗಳ ಬಳಿಕ. ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದ, ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದ ಕಿವಿ ಕೇಳದ, ನಡೆಯಲು ಕೂಡ ಮತ್ತೊಬ್ಬರ ಸಹಾಯ ಪಡೆಯುತ್ತಿದ್ದ ಎಂಬತ್ತರ ವಯೋವೃದ್ಧ ಅವರು. ಈ ಬಗೆಯ ವೈದ್ಯಕೀಯ ಕಾರಣಗಳಿಗಾಗಿಯೇ ಅವರು ಜಾಮೀನು ಕೋರಿದ್ದರು.

ನಾವು ನಂಬಿಕೆ ಇರಿಸಬೇಕಿತ್ತು; ಏಕೆಂದರೆ ಎಲ್ಲಕ್ಕೂ ಮಿಗಿಲಾಗಿ ಸುಪ್ರೀಂಕೋರ್ಟ್‌ ನ್ಯಾಯಾಲಯಗಳನ್ನು ʼನಮ್ಮ ಸ್ವಾತಂತ್ರ್ಯದ ರಕ್ಷಕರುʼ ಮತ್ತು ʼದಮನಿತರು ಮತ್ತು ಆತಂಕಿತರ ಕೊನೆಯ ತಾಣಗಳುʼ ಎಂದು ಹೇಳಿತ್ತು. ವ್ಯವಸ್ಥೆ ನಿಧಾನಗತಿಯದ್ದಾಗಿರಬಹುದು (ಫಾದರ್‌ ಸ್ಟ್ಯಾನ್‌ ಅವರು ಒಂದು ಸ್ಟ್ರಾ (ಹೀರುಗೊಳವೆ), ಸಿಪ್ಪರ್‌ ಹಾಗೂ ಕೆಲ ಬೆಚ್ಚನೆ ವಸ್ತ್ರಗಳನ್ನು ಪಡೆಯಲು ಹಲವು ಅರ್ಜಿಗಳನ್ನು ಸಲ್ಲಿಸಬೇಕಾಯಿತು ಅದಕ್ಕಾಗಿ ಒಂದು ತಿಂಗಳು ಹಿಡಿಯಿತು) ಆದರೆ ನಾವು ಮಾತ್ರ ಅದರಲ್ಲಿ ನಂಬಿಕೆ ಇರಿಸಬೇಕು.

"ನಮ್ಮ ಮೇಲೆ ಮತ್ತು ವ್ಯವಸ್ಥೆಯ ಮೇಲೆ ನಂಬಿಕೆ ಇಡಿ".
- ನ್ಯಾಯಾಲಯ

ಈಗ ಒಂದು ತಿಂಗಳ ಬಳಿಕ ಬಾಂಬೆ ಹೈಕೋರ್ಟ್ “ನಮ್ಮೆಲ್ಲಾ ಅತ್ಯುತ್ತಮ ಯತ್ನಗಳ ಹೊರತಾಗಿಯೂ” ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನಮಗೆ ಹೇಳಿದೆ.

ಈ ಒಂದು ತಿಂಗಳ ಅವಧಿಯಲ್ಲಿ ಅರ್ಹರಲ್ಲದ ವ್ಯಕ್ತಿಗಳಿಂದ ನಮಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ತಮಗೊಬ್ಬರಿಗೇ ತಿನ್ನಲು, ಬರೆಯಲು, ಸ್ನಾನಮಾಡಲು ಅಥವಾ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ಸ್ಟ್ಯಾನ್‌ ಸ್ವಾಮಿ ನ್ಯಾಯಾಲಯಕ್ಕೆ ತಿಳಿಸಿದ್ದರು. ತಮಗೆ ಹೆಚ್ಚು ಪರಿಚಿತವಾಗಿಬಿಟ್ಟಿದ್ದ ಆಸ್ಪತ್ರೆಗೆ ಮತ್ತೆ ಸೇರಲು ಬಯಸುವುದಿಲ್ಲ ಎಂದಿದ್ದರು. “ಮತ್ತೊಮ್ಮೆ ನಾನು ಆಸ್ಪತ್ರೆಗೆ ಸೇರಲು ಬಯಸುವುದಿಲ್ಲ. ಅದರಿಂದ ಆರೋಗ್ಯ ಸುಧಾರಿಸದೆ ಪರಿಸ್ಥಿತಿ ಹೀಗೆಯೇ ಇರುತ್ತದೆ. ಈಗ ಇರುವಂತೆಯೇ ಇದ್ದರೆ ಇನ್ನು ಕೆಲ ದಿನಗಳಲ್ಲಿ ನಾನು ಸಾಯುತ್ತೇನೆ” ಎಂಬುದು ಅವರ ಮಾತಾಗಿತ್ತು.

ಒಂದು ವಾರದ ಬಳಿಕ, ಸ್ವಾಮಿ ಅವರ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸುವಂತೆ ನ್ಯಾಯಾಲಯ ನಿರ್ದೇಶಿಸಿತು, ಆದರೆ ಬಹುಶಃ ಸಮುದಾಯದ ಹಿತಾಸಕ್ತಿಗಳು ಸ್ವಾಮಿ ಅವರ ಮೂಲಭೂತ ಹಕ್ಕುಗಳಿಗೂ ಮಿಗಿಲಾದುದರಿಂದಲೋ ಏನೋ ಜರ್ಜರಿತರಾಗಿದ್ದ 84 ವರ್ಷದ ಅವರಿಗೆ ಜಾಮೀನು ನೀಡಲು ನಿರಾಕರಿಸಿತು.

ಕೆಲವು ದಿನಗಳ ಹಿಂದೆ, ಫಾದರ್‌ ಸ್ವಾಮಿ ಅವರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ (ಯುಎಪಿಎ) ಸೆಕ್ಷನ್ 43 ಡಿ (5) ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು, ಇದು ಜಾಮೀನು ಪಡೆಯಲು ದುಸ್ತರವಾದ ಸೆಕ್ಷನ್‌ ಎಂದು ಅವರು ವಾದಿಸಿದ್ದರು. ಆದರೂ, ಅರ್ಜಿ ಇತ್ಯರ್ಥವಾಗುವದನ್ನು ನೋಡಲು ಅವರು ಉಳಿಯಲಿಲ್ಲ. ಕೊನೆಯ ವಿಚಾರಣೆಯ ವೇಳೆ ನ್ಯಾಯಾಲಯ ಸಮಯದ ಅಗತ್ಯ ಇರುವದರಿಂದ ಪ್ರಕರಣವನ್ನು ಜುಲೈ 6ಕ್ಕೆ ಮುಂದೂಡಿತ್ತು.

84 ವರ್ಷ ವಯಸ್ಸಿನ ಜರ್ಜರಿತ ಜೀವವನ್ನು ರಕ್ಷಿಸಲು ನ್ಯಾಯಾಲಯ ತೆಗೆದುಕೊಳ್ಳಬಹುದಾದ ಅತ್ಯುತ್ತಮ ಪ್ರಯತ್ನ ಇದೇ ಆಗಿದ್ದರೆ ವ್ಯವಸ್ಥೆಯ ಮೇಲೆ ನಾವು ಇರಿಸುವ ಏಕೈಕ ವಿಶ್ವಾಸ ಎಂದರೆ ಅದು ಅಂಧಕರಾಗಿರುವುದು - ಭಕ್ತಿಯ ಈ ವಿಧದ ಬಗ್ಗೆ ಡಾ ಬಿ ಆರ್‌ ಅಂಬೇಡ್ಕರ್‌ ಎಚ್ಚರಿಸಿದ್ದರಲ್ಲ ಅದು.

ಆದರೆ ರಾಜಕೀಯದಲ್ಲಿ, ಭಕ್ತಿ ಅಥವಾ ನಾಯಕನ ಆರಾಧನೆ ಎನ್ನುವುದು ಅವನತಿಗೆ ಮತ್ತು ಆತ್ಯಂತಿಕವಾಗಿ ಸರ್ವಾಧಿಕಾರದೆಡೆಗೆ ಸಾಗುವ ಖಚಿತ ಹಾದಿ
- ಅಂಬೇಡ್ಕರ್

ಯುಎಪಿಎ ದುರುಪಯೋಗ ಮತ್ತು ಆಡಳಿತ ದುಂಡಾವರ್ತನೆಯ ಬಗ್ಗೆ ನಾವು ಮಾತನಾಡಬಹುದು. ಆದರೆ ಒಂದು ಕ್ಷಣ ಅದನ್ನು ಬದಿಗಿರಿಸೋಣ. ನಿಜಕ್ಕೂ ಆಡಳಿತ ತಾನು ಅಪಾಯಕಾರಿಯಾಗುವ ಸಾಧ್ಯತೆ ಹೊಂದಿರುವುದಕ್ಕೇ ಹೆಸರುವಾಸಿಯಾಗಿರುವಂಥದ್ದು.

ನಮ್ಮ ಸ್ವಾತಂತ್ರ್ಯದ ಕಾವಲುಗಾರನಾಗಿರುವ ಸಂಸ್ಥೆ ನಿರ್ಣಾಯಕ ಕ್ಷಣಗಳಲ್ಲಿ ಹೇಗೆ ವಿಫಲವಾಯಿತು ಎಂಬುದರ ಈಗ ಮಾತನಾಡೋಣ. ನಮ್ಮ (ಸಂವಿಧಾನದ) 21ನೇ ವಿಧಿಯ ಕಾನೂನು ಸಿದ್ಧಾಂತ ಹೇಗೆ ಕೇವಲ ಮಾತಿನ ಮಂಟಪವಾಗಿದೆ ಎಂಬ ಬಗ್ಗೆ ಮಾತನಾಡೋಣ. ಜಾಮೀನಿನ ಮೂಲ ನಿಯಮಗಳನ್ನು ಪ್ರಜ್ಞಾಪೂರ್ವಕವಾಗಿ ಹೇಗೆ ಕಡೆಗಣಿಸಲಾಗಿದೆ ಎಂಬ ಬಗ್ಗೆ ನಾವು ಚರ್ಚಿಸೋಣ.

ಕಟ್ಟಕಡೆಗೆ, ನಾವು ವಿನಾಯಿತಿಯ ಬಗ್ಗೆ ಮಾತನಾಡೋಣ. ನ್ಯಾಯಾಲಯಗಳು ಸ್ಟಾನ್ ಸ್ವಾಮಿ ಅವರ ಸಾವಿಗೆ ನೇರ ಕಾರಣ ಎನ್ನಲು ಯಾವುದೇ ಸೂಚನೆಗಳಿಲ್ಲ. ಆದರೆ ನ್ಯಾಯಾಲಯಗಳು ಅವರ ಸಾವನ್ನು ತಡೆಯಲು ಏನೂ ಮಾಡಲಿಲ್ಲ.

ತಮ್ಮ ಮಗುವಿನ ಆರೈಕೆ ಮಾಡುವಲ್ಲಿ ನಿರ್ಲಕ್ಷ್ಯವಹಿಸಿದ ಗಿಬ್ಬನ್ಸ್‌ ಮತ್ತು ಪ್ರೊಕ್ಟರ್‌ ಅವರು ಶಿಕ್ಷೆಗೆ ಒಳಗಾದಂತೆ, ಸ್ಟ್ಯಾನ್‌ ಸ್ವಾಮಿ ಅವರ ಸಾವು ಸಕಾಲದಲ್ಲಿ ಕಾರ್ಯಪ್ರವೃತ್ತವಾಗುವಲ್ಲಿ ವಿಫಲವಾದ ನ್ಯಾಯಾಲಯಗಳನ್ನು ದೋಷಿಯಾಗಿಸುತ್ತದೆ. ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರ ಸಾವಿಗೆ ನಾವು ಶೋಕಿಸುವಾಗಲೇ ಸಂಸ್ಥೆಗಳಲ್ಲಿ ಹುಟ್ಟಿರುವ ಅಂಧಶ್ರದ್ಧೆಯನ್ನು ಸಂಭ್ರಮಿಸಬೇಕಿರುವ ವಿಷಾದ ಎದುರಾಗಿದೆ.

[ ಈ ಲೇಖನದ ಕರ್ತೃ ಸಾಯಿ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಮಹೇಶ್‌ ಮೆನನ್‌.]

ಹಕ್ಕುತ್ಯಾಗ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು, ನಿಲುವುಗಳು ಲೇಖಕರದ್ದಾಗಿದ್ದು, ಇದು 'ಬಾರ್‌ ಅಂಡ್‌ ಬೆಂಚ್‌'ನ ನಿಲುವಿನ ಪ್ರತಿಫಲನವೆಂದೇನೂ ಅಲ್ಲ.

Related Stories

No stories found.
Kannada Bar & Bench
kannada.barandbench.com