ಲೀಲಾವತಿ ಟ್ರಸ್ಟ್ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಬಾಂಬೆ ಹೈಕೋರ್ಟ್‌ನ 10ಕ್ಕೂ ಅಧಿಕ ನ್ಯಾಯಮೂರ್ತಿಗಳು

ಮೂಲಗಳ ಪ್ರಕಾರ, ಮೂವರು ನ್ಯಾಯಮೂರ್ತಿಗಳನ್ನು ಹೊರತುಪಡಿಸಿ, ಉಳಿದವರು ಲೀಲಾವತಿ ಟ್ರಸ್ಟ್‌ ಜೊತೆಗಿನ ಹಿಂದಿನ ಸಂಬಂಧಗಳನ್ನು ಉಲ್ಲೇಖಿಸಿ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
Justices R Patil, Kotwal, Revati, Kulkarni, Colabawalla, Sathaye, Chagla, Sharmila, Doctor, Jain
Justices R Patil, Kotwal, Revati, Kulkarni, Colabawalla, Sathaye, Chagla, Sharmila, Doctor, Jain
Published on

ತಮ್ಮ ವಿರುದ್ಧ ಮುಂಬೈನ ಪ್ರಸಿದ್ಧ ಲೀಲಾವತಿ ಆಸ್ಪತ್ರೆಯ ಮಾಲೀಕತ್ವ ಹೊಂದಿರುವ ಲೀಲಾವತಿ ಕೀರ್ತಿಲಾಲ್ ಮೆಹ್ತಾ ವೈದ್ಯಕೀಯ ಟ್ರಸ್ಟ್ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಜಗದೀಶನ್‌ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ಬಾಂಬೆ ಹೈಕೋರ್ಟ್‌ನ ಹತ್ತಕ್ಕೂ ಅಧಿಕ ನ್ಯಾಯಮೂರ್ತಿಗಳು ಹಿಂದೆ ಸರಿದಿದ್ದಾರೆ.

ಟ್ರಸ್ಟ್ ಮೇಲೆ ಅಕ್ರಮ ಹಿಡಿತ ಮುಂದುವರೆಸುವುದಕ್ಕಾಗಿ  ಚೇತನ್ ಮೆಹ್ತಾ ಸಮೂಹಕ್ಕೆ ಸಹಾಯ ಮಾಡಲು ಜಗದೀಶ್‌ ₹2.05 ಕೋಟಿ ಲಂಚ ಸ್ವೀಕರಿಸಿದ್ದಾರೆ. ಜಗದೀಶ್ ಅವರು ಪ್ರಮುಖ ಖಾಸಗಿ ಬ್ಯಾಂಕಿನ ಮುಖ್ಯಸ್ಥ ಹುದ್ದೆ ದುರುಪಯೋಗಪಡಿಸಿಕೊಂಡು ದತ್ತಿ ಸಂಸ್ಥೆಯ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಟ್ರಸ್ಟ್‌ ದೂರಿತ್ತು.

Also Read
ಎಫ್ಐಆರ್ ಹೂಡಿದ ಲೀಲಾವತಿ ಟ್ರಸ್ಟ್: ಬಾಂಬೆ ಹೈಕೋರ್ಟ್‌ಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಇಒ ಶಶಿಧರ್ ಜಗದೀಶ್ ಮೊರೆ

ಕೆಲ ದಿನಗಳ ಹಿಂದೆ ಪ್ರಕರಣವನ್ನು ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ರಾಜೇಶ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠದೆದುರು ಪಟ್ಟಿ ಮಾಡಲಾಗಿತ್ತು. ಇಬ್ಬರೂ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದರು. ಬಳಿಕ ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಚಂದಕ್ ಅವರಿದ್ದ ಮತ್ತೊಂದು ಪೀಠದ ಮುಂದೆ ಪ್ರಕರಣ ಪ್ರಸ್ತಾಪಿತವಾಯಿತಾದರೂ ನ್ಯಾಯಮೂರ್ತಿ ಕೊತ್ವಾಲ್ ಕೂಡ ವಿಚಾರಣೆಯಿಂದ ಹಿಂದೆ ಸರಿದರು.

ಬಳಿಕ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ , ಜಿಎಸ್ ಕುಲಕರ್ಣಿ , ಆರಿಫ್ ಡಾಕ್ಟರ್ , ಬಿಪಿ ಕೊಲಾಬವಾಲಾ , ಎಂ ಎಂ ಸಥಾಯೆ , ಆರ್‌ ಐ ಚಾಗ್ಲಾ ಮತ್ತು ಶರ್ಮಿಳಾ ದೇಶಮುಖ್ ಅವರು ಕೂಡ ವಿಚಾರಣೆಯಿಂದ ಹಿಂದೆ ಸರಿದರು.

ತರುವಾಯ ಪ್ರಕರಣವನ್ನು ಇಂದು  ನ್ಯಾಯಮೂರ್ತಿಗಳಾದ ಎಂ ಎಸ್ ಸೋನಕ್ ಮತ್ತು ಜಿತೇಂದ್ರ ಜೈನ್ ಅವರಿದ್ದ ಪೀಠದ ಮುಂದೆ ಪಟ್ಟಿ ಮಾಡಲಾಯಿತಾದರೂ ತಾವು ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಷೇರು ಹೊಂದಿರುವುದಾಗಿ ನ್ಯಾ. ಜೈನ್‌ ತಿಳಿಸಿದರು. ಟ್ರಸ್ಟ್‌ನ ಅಧಿಕೃತ ಪ್ರತಿನಿಧಿಯಾದ ಪ್ರಶಾಂತ್ ಮೆಹ್ತಾ ಅವರ ವಕೀಲರ ಆಕ್ಷೇಪಣೆಯ ಮೇರೆಗೆ, ನ್ಯಾಯಮೂರ್ತಿ ಜೈನ್ ಕೂಡ ಈ ವಿಷಯದಿಂದ ಹಿಂದೆ ಸರಿದರು.

ಮೂಲಗಳ ಪ್ರಕಾರ, ನ್ಯಾಯಮೂರ್ತಿಗಳಾದ ಸಥಾಯೆ, ಪಾಟೀಲ್ ಮತ್ತು ಜೈನ್ ಅವರನ್ನು ಹೊರತುಪಡಿಸಿ, ಉಳಿದ ನ್ಯಾಯಮೂರ್ತಿಗಳು ಲೀಲಾವತಿ ಟ್ರಸ್ಟ್‌ನೊಂದಿಗಿನ ತಮ್ಮ ಹಿಂದಿನ ಸಂಬಂಧಗಳನ್ನು ಉಲ್ಲೇಖಿಸಿ ಪ್ರಕರಣದ ವಿಚಾರಣೆಗೆ ಮುಂದಾಗಿಲ್ಲ.

Also Read
ಅನಧಿಕೃತವಾಗಿ ₹74 ಲಕ್ಷ ಹಣ ವರ್ಗಾವಣೆ: ಎಚ್‌ಡಿಎಫ್‌ಸಿ, ಆರ್‌ಬಿಐ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ವಿಚಾರಣೆಯ ಸಂದರ್ಭದಲ್ಲಿ, ಜಗದೀಶನ್ ಪರ ಹಾಜರಾದ ಹಿರಿಯ ವಕೀಲ ಅಮಿತ್ ದೇಸಾಯಿ , ನ್ಯಾಯಾಮೂರ್ತಿಗಳು ಹಿಂದೆ ಸರಿಯುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಟ್ರಸ್ಟ್‌ ಫೋರಂ ಶಾಪಿಂಗ್‌ನಲ್ಲಿ (ತಮಗೆ ಬೇಕಾದ ತೀರ್ಪು ಪಡೆಯುವುದಕ್ಕಾಗಿ ನಿರ್ದಿಷ್ಟ ನ್ಯಾಯಮೂರ್ತಿಗಳ ಮುಂದೆ ಪ್ರಕರಣ ಬರುವಂತೆ ನೋಡಿಕೊಳ್ಳುವುದು) ತೊಡಗಿದೆ ಎಂದರು.

ಅಲ್ಲದೆ, ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಪಬ್ಲಿಕ್‌ ಕಂಪೆನಿಯಲ್ಲಿ ಕೇವಲ ಷೇರು ಹೊಂದಿರುವ ಅಂಶವೇ ಪ್ರಕರಣದಿಂದ ಹಿಂದೆ ಸರಿಯಲು ಆಧಾರವಾಗಬಾರದು ಎಂದು ಸಹ ಅವರು ಹೇಳಿದರು. ಅಂತಿಮವಾಗಿ, ವಿಚಾರಣೆಯನ್ನು ಆಲಿಸುವ ಪೀಠದಲ್ಲಿರಬೇಕೆ, ಇಲ್ಲವೇ ಎನ್ನುವುದು ಆಯಾ ನ್ಯಾಯಮೂರ್ತಿಗಳಿಗೆ ಬಿಟ್ಟ ವಿಚಾರ ಎಂದರು.

 ಅಲ್ಲದೆ ಲಘು ದಾಟಿಯಲ್ಲಿ ಅವರು "ಲೀಲಾವತಿ ಟ್ರಸ್ಟ್‌ನೊಂದಿಗೆ ನಂಟು ಹೊಂದಿರದ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಗಳನ್ನು ನೇಮಿಸಲು ಕೊಲಿಜಿಯಂ ಬಹುಶಃ ಹೊಸ ಮಾನದಂಡ  ರೂಪಿಸಬೇಕು" ಎಂದರು.

Kannada Bar & Bench
kannada.barandbench.com