
ಮುಂಬೈನ ಲೀಲಾವತಿ ಆಸ್ಪತ್ರೆಯ ಮಾಲೀಕತ್ವ ಹೊಂದಿರುವ ಲೀಲಾವತಿ ಕೀರ್ತಿಲಾಲ್ ಮೆಹ್ತಾ ವೈದ್ಯಕೀಯ ಟ್ರಸ್ಟ್ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಎಚ್‌ಡಿಎಫ್‌ಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಜಗದಿಶನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣ ನ್ಯಾಯಮೂರ್ತಿಗಳಾದ ಎ.ಎಸ್. ಗಡ್ಕರಿ ಮತ್ತು ರಾಜೇಶ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠದೆದುರು ಬಂದಾಗ ಇಬ್ಬರೂ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದರು. ಬಳಿಕ ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಚಂದಕ್ ಅವರಿದ್ದ ಮತ್ತೊಂದು ಪೀಠದ ಮುಂದೆ ಪ್ರಕರಣ ಪ್ರಸ್ತಾಪಿತವಾಯಿತಾದರೂ ನ್ಯಾಯಮೂರ್ತಿ ಕೊತ್ವಾಲ್ ಕೂಡ ವಿಚಾರಣೆಯಿಂದ ಹಿಂದೆ ಸರಿದರು.
ಮುಖ್ಯ ನ್ಯಾಯಮೂರ್ತಿಗಳ ಆಡಳಿತಾತ್ಮಕ ಆದೇಶದ ಮೂಲಕ ಪ್ರಕರಣವನ್ನು ಇದೀಗ ಮತ್ತೊಂದು ಪೀಠಕ್ಕೆ ವರ್ಗಾಯಿಸಲಾಗುತ್ತದೆ.
ಐಪಿಸಿಯ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆ ದ್ರೋಹ), 409 (ಸಾರ್ವಜನಿಕ ಸೇವಕನಿಂದ ಕ್ರಿಮಿನಲ್ ನಂಬಿಕೆ ದ್ರೋಹ) ಮತ್ತು 420 (ವಂಚನೆ) ಅಡಿಯಲ್ಲಿ ಜಗದೀಶ್ ಅವರ ವಿರುದ್ಧ ಟ್ರಸ್ಟ್ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ದೂರು ದಾಖಲಿಸಿತ್ತು. ಟ್ರಸ್ಟ್ ಮೇಲೆ ಅಕ್ರಮ ಹಿಡಿತ ಮುಂದುವರೆಸುವುದಕ್ಕಾಗಿ ಚೇತನ್ ಮೆಹ್ತಾ ಸಮೂಹಕ್ಕೆ ಸಹಾಯ ಮಾಡಲು ಜಗದೀಶ್ ₹2.05 ಕೋಟಿ ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023 ರ ಸೆಕ್ಷನ್ 175(3)ರ ಅಡಿಯಲ್ಲಿ ಟ್ರಸ್ಟ್ ಅರ್ಜಿ ಸಲ್ಲಿಸಿತ್ತು. ಬಾಂದ್ರಾದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.