[ಸಿಖ್ ವಿರೋಧಿ ದಂಗೆ] ತಂದೆ-ಮಗನ ಕೊಲೆ ಪ್ರಕರಣದಲ್ಲಿ ಸಜ್ಜನ್ ಕುಮಾರ್ ದೋಷಿ: ದೆಹಲಿ ನ್ಯಾಯಾಲಯದ ತೀರ್ಪು

ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದ ವಾದಗಳನ್ನು ಫೆಬ್ರವರಿ 18ರಂದು ನ್ಯಾಯಾಲಯ ಆಲಿಸಲಿದೆ.
Sajjan Kumar and Rouse Avenue Court
Sajjan Kumar and Rouse Avenue Court
Published on

ದೆಹಲಿಯಲ್ಲಿ 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಯ ವೇಳೆ ತಂದೆ-ಮಗನನ್ನು ಕೊಲೆ ಮಾಡಿದ್ದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ದೋಷಿ ಎಂದು ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ [ಸರ್ಕಾರ ವಿರುದ್ಧ ಸಜ್ಜನ್ ಕುಮಾರ್ ನಡುವಣ ಪ್ರಕರಣ].

ಇಂದು ಮಧ್ಯಾಹ್ನ ಆದೇಶ ಹೊರಡಿಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದ ವಾದಗಳನ್ನು ಫೆಬ್ರವರಿ 18 ರಂದು ಆಲಿಸುವುದಾಗಿ ತಿಳಿಸಿದರು.

Also Read
ಇದು ಸಾಮಾನ್ಯ ಪ್ರಕರಣವಲ್ಲ: ಸಿಖ್ ವಿರೋಧಿ ಗಲಭೆ ಪ್ರಕರಣದ ಅಪರಾಧಿ ಸಜ್ಜನ್ ಕುಮಾರ್ ಗೆ‌ ಜಾಮೀನು ನಿರಾಕರಿಸಿದ ಸುಪ್ರೀಂ

ಸಜ್ಜನ್‌ ಕುಮಾರ್‌ ವಿರುದ್ಧ 2021ರಲ್ಲಿ ಐಪಿಸಿ ಸೆಕ್ಷನ್‌ 302 (ಕೊಲೆ), 147 (ಗಲಭೆ), 148 (ಮಾರಕ ಆಯುಧದಿಂದ ಶಸ್ತ್ರಸಜ್ಜಿತವಾದ ಗಲಭೆ), 149 (ಸಾಮಾನ್ಯ ಉದ್ದೇಶದಿಂದ ಮಾಡಿದ ಅಪರಾಧದಲ್ಲಿ ಕಾನೂನುಬಾಹಿರವಾಗಿ ನೆರೆದಿದ್ದ ಪ್ರತಿಯೊಬ್ಬ ಸದಸ್ಯರು ತಪ್ಪಿತಸ್ಥರು), 308 (ಶಿಕ್ಷಾರ್ಹ ನರಹತ್ಯೆಗೆ ಪ್ರಯತ್ನ), 323 (ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 395 (ದರೋಡೆ) ಇನ್ನಿತರ ಆರೋಪ ಮಾಡಲಾಗಿತ್ತು.

ನವೆಂಬರ್ 1, 1984 ರಂದು, ಪಶ್ಚಿಮ ದೆಹಲಿಯ ರಾಜ್ ನಗರದ ನಿವಾಸಿಗಳಾದ ಎಸ್ ಜಸ್ವಂತ್ ಸಿಂಗ್ ಮತ್ತು ಅವರ ಮಗ ಎಸ್ ತರುಣ್ ದೀಪ್ ಸಿಂಗ್ ಅವರನ್ನು ಸಜ್ಜನ್‌ ಕುಮಾರ್‌ ನೇತೃತ್ವದ ಸಾವಿರಾರು ಗಲಭೆಕೋರರ ಗುಂಪು ಕೊಂದಿತ್ತು ಎಂದು ಪ್ರಾಸಿಕ್ಯೂಷನ್‌ ದೂರಿತ್ತು.

Also Read
ಸಿಖ್‌, ಗೋಧ್ರಾ ಹತ್ಯಾಕಾಂಡ ತನಿಖೆ ನಡೆಸಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಿ ಟಿ ನಾನಾವತಿ ನಿಧನ

1984ರ ಗಲಭೆಗಳ ಪ್ರಕರಣಗಳನ್ನು ಮರುತನಿಖೆ ಮಾಡುವುದಕ್ಕಾಗಿ ಗೃಹ ಸಚಿವಾಲಯ 2015ರಲ್ಲಿ ರಚಿಸಿದ್ದ ವಿಶೇಷ ತನಿಖಾ ತಂಡದೆದುರು ದೂರುದಾರರು ನವೆಂಬರ್ 23, 2016ರಂದು ಹೇಳಿಕೆ ದಾಖಲಿಸಿದ್ದರು.

ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಿಹಾರ್ ಜೈಲಿನಲ್ಲಿದ್ದ ಸಜ್ಜನ್‌ ಕುಮಾರ್‌ ಅವರನ್ನು ಏಪ್ರಿಲ್ 6, 2021ರಂದು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು.

Kannada Bar & Bench
kannada.barandbench.com