ಇದು ಸಾಮಾನ್ಯ ಪ್ರಕರಣವಲ್ಲ: ಸಿಖ್ ವಿರೋಧಿ ಗಲಭೆ ಪ್ರಕರಣದ ಅಪರಾಧಿ ಸಜ್ಜನ್ ಕುಮಾರ್ ಗೆ‌ ಜಾಮೀನು ನಿರಾಕರಿಸಿದ ಸುಪ್ರೀಂ

1984ರ ಸಿಖ್ ವಿರೋಧಿ ಗಲಭೆಗಳ ಪ್ರಕರಣದಲ್ಲಿ ಸಜ್ಜನ್ ಕುಮಾರ್‌ರನ್ನು ದೆಹಲಿ ಹೈಕೋರ್ಟ್ ಅಪರಾಧಿ ಎಂದು ತೀರ್ಪು ನೀಡಿದ್ದು ಅವರು ದೆಹಲಿಯ ತಿಹಾರ್ ಜೈಲಿನಲ್ಲಿ ಆಜೀವ ಶಿಕ್ಷೆ ಅನುಭವಿಸುತ್ತಿದ್ದಾರೆ.
Sajjan Kumar
Sajjan Kumar

1984ರ ಸಿಖ್ ವಿರೋಧಿ ಗಲಭೆಗಳ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿರುವ ಕಾಂಗ್ರೆಸ್ ಮಾಜಿ ನಾಯಕ ಸಜ್ಜನ್ ಕುಮಾರ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ವೈದ್ಯಕೀಯ ವಿಚಾರ ಮುಂದು ಮಾಡಿ ಮಧ್ಯಂತರ ಜಾಮೀನು ಕೋರಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ನೇತೃತ್ವದ ತ್ರಿಸದಸ್ಯ ಪೀಠ ತಿರಸ್ಕರಿಸಿತು.

“ಇದು ಸಾಮಾನ್ಯ ಪ್ರಕರಣವಲ್ಲ, ನಾವು ನಿಮಗೆ ಯಾವುದೇ ಕಾರಣಕ್ಕೂ ಜಾಮೀನು ನೀಡುವುದಿಲ್ಲ” ಎಂದು ಸಿಜೆಐ ಎಸ್ ಎ ಬೊಬ್ಡೆ ಹೇಳಿದರು.

ಸಜ್ಜನ್ ಕುಮಾರ್ ಪರ ವಾದಿಸುತ್ತಿರುವ ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ವಿಚಾರಣಾಧೀನ ನ್ಯಾಯಾಲಯದಿಂದ ಹೈಕೋರ್ಟ್ ವರೆಗಿನ ಸಾಕ್ಷಿಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂಬ ಆಧಾರದಲ್ಲಿ ವಾದಕ್ಕೆ ಮುಂದಾದರು.

ಈ ಸಂದರ್ಭದಲ್ಲಿ ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ಆಲಿಸಲು ಒಪ್ಪದ ನ್ಯಾಯಾಲಯವು ಹೈಕೋರ್ಟ್ ತೀರ್ಪಿನ ಮೇಲ್ಮನವಿಯನ್ನು ಭೌತಿಕ ನ್ಯಾಯಾಲಯದ ಪ್ರಕ್ರಿಯೆಗಳು ಪುನಾರಂಭವಾದಾಗ ಆಲಿಸಲಾಗುವುದು ಎಂದು ಹೇಳಿತು. ಇದು ಹೆಚ್ಚಿನ ಸಮಯ ಹಿಡಿಯಬಹುದು ಎಂದ ವಿಕಾಸ್ ಸಿಂಗ್ ಅವರು ಸಜ್ಜನ್ ಕುಮಾರ್ ಅವರು ಈಗಾಗಲೇ ಬಹುಕಾಲವನ್ನು ಜೈಲಿನಲ್ಲಿ ಕಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಷರತ್ತು ಬದ್ಧ ಜಾಮೀನು ನೀಡಬೇಕು ಎಂದು ಸಿಂಗ್ ಮನವಿ ಮಾಡಿದರು.

Also Read
ಭೂಸ್ವಾಧೀನ ಕಾಯಿದೆ, ಎಜಿಆರ್, ಮಾಸ್ಟರ್ ಆಫ್ ರೋಸ್ಟರ್: ನ್ಯಾಯಮೂರ್ತಿಯಾಗಿ ಅರುಣ್ ಮಿಶ್ರಾ ನೀಡಿದ ಪ್ರಮುಖ ತೀರ್ಪುಗಳು

ಆಸ್ಪತ್ರೆಯಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುವ ಅಗತ್ಯವಿಲ್ಲ ಎಂದು ಆಸ್ಪತ್ರೆ ವರದಿಗಳು ಹೇಳಿರುವುದರಿಂದ ಜಾಮೀನು ನೀಡುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಿಂಗ್ ಅವರು ಸಜ್ಜನ್ ಕುಮಾರ್ ಅವರು 20 ಕೆ ಜಿ ತೂಕ ಕಳೆದುಕೊಂಡಿದ್ದಾರೆ ಎಂದರು. ಇದಕ್ಕೆ ಹಿರಿಯ ವಕೀಲ ಎಚ್ ಎಸ್ ಫೂಲ್ಕಾ ಅವರ ಅಭಿಪ್ರಾಯವನ್ನು ನ್ಯಾಯಾಲಯ ಬಯಸಿತು. ಪೂಲ್ಕಾ ಅವರು ಸಜ್ಜನ್ ಕುಮಾರ್ ದೇಹದ ತೂಕ ಹೆಚ್ಚಾಗಿದೆ ಎಂದು ಅವರ ವೈದ್ಯಕೀಯ ವರದಿ ಹೇಳುತ್ತಿದೆ ಎಂದು ನ್ಯಾಯಾಲಯದ ಗಮನಸೆಳೆದರು. ಇದರ ಆಧಾರದಲ್ಲಿ ನ್ಯಾಯಾಲಯವು ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com