
ದೆಹಲಿಯಲ್ಲಿ 1984ರಲ್ಲಿ ಸಂಭವಿಸಿದ್ದ ಸಿಖ್ ವಿರೋಧಿ ದಂಗೆ ವೇಳೆ ನಡೆದ ತಂದೆ-ಮಗನ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ [ಸರ್ಕಾರ ಮತ್ತು ಸಜ್ಜನ್ ಕುಮಾರ್ ನಡುವಣ ಪ್ರಕರಣ]
ಫೆಬ್ರವರಿ 12 ರಂದು ಕುಮಾರ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಇಂದು ಶಿಕ್ಷೆಯ ಆದೇಶ ಪ್ರಕಟಿಸಿದರು.
ಸಜ್ಜನ್ ಕುಮಾರ್‌ಗೆ ಮರಣದಂಡನೆ ವಿಧಿಸಬೇಕೆಂದು ಪ್ರಾಸಿಕ್ಯೂಷನ್ ಮತ್ತು ದೂರುದಾರರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಕುಮಾರ್ ಮಾಡಿದ ಅಪರಾಧಗಳು ಕ್ರೂರ ಮತ್ತು ಖಂಡನೀಯ ಎಂದು ನ್ಯಾಯಾಲಯ ತಿಳಿಸಿತು.
ಆದರೆ ಮರಣದಂಡನೆ ಬದಲು ಜೀವಾವಧಿ ಶಿಕ್ಷೆ ವಿಧಿಸಲು ಕಾರಣವಾಗುವ ಕೆಲವು ಅಂಶಗಳಿವೆ ಎಂದ ಅದು ಅಪರಾಧಿಯ ನಡೆ ತೃಪ್ತಿಕರ ಎಂದು ಜೈಲು ಅಧಿಕಾರಿ ನೀಡಿರುವ ವರದಿ, ಆತ ಕಾಯಿಲೆಯಿಂದ ಬಳಲುತ್ತಿರುವುದು, ಆತನಿಗೆ ಸಮಾಜದಲ್ಲಿರುವ ಮನ್ನಣೆ ಹಾಗೂ ಸುಧಾರಣೆಗೆ ಅವಕಾಶ ಇರುವುದನ್ನು ಗಮನಿಸಿ ತಾನು ಜೀವಾವಧಿ ಸಜೆ ವಿಧಿಸುತ್ತಿರುವುದಾಗಿ ತಿಳಿಸಿತು.
ಲಾಠಿ ಮತ್ತು ಕಬ್ಬಿಣದ ಸರಳುಗಳಿಂದ ದಾಳಿ ನಡೆಸಿದ್ದ ಗುಂಪನ್ನು ಸಜ್ಜನ್ ಕುಮಾರ್ ಪ್ರಚೋದಿಸಿದ್ದರು ಎಂದು ನ್ಯಾಯಾಲಯ ಈ ಹಿಂದೆ ತಿಳಿಸಿತ್ತು.
ಸಜ್ಜನ್ ಕುಮಾರ್ ಕಾನೂನು ಬಾಹಿರ ಸಭೆಯಲ್ಲಿ ಭಾಗಿಯಾಗಿದ್ದು 01.11.1984ರಲ್ಲಿ ನಡೆದಿದ್ದ ಗಲಭೆ ವೇಳೆ ದೂರುದಾರರ ಪತಿ ಎಸ್ ಜಸ್ವಂತ್ ಸಿಂಗ್ ಮತ್ತು ಮಗ ಎಸ್ ತರುಣ್ ದೀಪ್ ಸಿಂಗ್ ಅವರ ಕೊಲೆಗೆ ಕಾರಣವಾಗಿದ್ದಾನೆ ಎಂದು ನ್ಯಾಯಾಲಯ ಫೆಬ್ರವರಿ 12ರಂದು ನೀಡಿದ ತೀರ್ಪಿನಲ್ಲಿ ತಿಳಿಸಿತ್ತು.
ನವೆಂಬರ್ 1, 1984 ರಂದು, ಪಶ್ಚಿಮ ದೆಹಲಿಯ ನಿವಾಸಿಗಳಾದ ಎಸ್ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರನನ್ನು ಸಜ್ಜನ್ ಕುಮಾರ್ ನೇತೃತ್ವದ ಗುಂಪು ಕೊಂದಿತ್ತು ಎಂದು ಪ್ರಾಸಿಕ್ಯೂಷನ್ ದೂರಿತ್ತು.
1984ರ ಗಲಭೆಗಳ ಪ್ರಕರಣಗಳನ್ನು ಮರುತನಿಖೆ ಮಾಡುವುದಕ್ಕಾಗಿ ಗೃಹ ಸಚಿವಾಲಯ 2015ರಲ್ಲಿ ರಚಿಸಿದ್ದ ವಿಶೇಷ ತನಿಖಾ ತಂಡದೆದುರು ದೂರುದಾರರು ನವೆಂಬರ್ 23, 2016ರಂದು ಹೇಳಿಕೆ ದಾಖಲಿಸಿದ್ದರು.
ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಿಹಾರ್ ಜೈಲಿನಲ್ಲಿದ್ದ ಸಜ್ಜನ್ ಕುಮಾರ್ ಅವರನ್ನು ಏಪ್ರಿಲ್ 6, 2021ರಂದು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು.