ಜನರನ್ನು ಕೋಮು ಉದ್ವಿಗ್ನ ವಾತಾವರಣದಲ್ಲಿ ಬದುಕುವಂತೆ ಒತ್ತಾಯಿಸುವುದು ಜೀವಿಸುವ ಹಕ್ಕಿಗೆ ವಿರುದ್ಧ: ಸುಪ್ರೀಂ ಕೋರ್ಟ್‌

ಆದರೆ ಒಂಬತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಬಿಡುಗಡೆ/ ಖುಲಾಸೆ ಪ್ರಕರಣಗಳನ್ನು ಪುನಃ ವಿಚಾರಣೆ ಮಾಡುವುದಕ್ಕೆ ಈಗಾಗಲೇ ತಡವಾಗಿದೆ ಎಂದ ಪೀಠ.
Justice Sanjay Kaul, Justice AS Oka and Justice Vikram Nath
Justice Sanjay Kaul, Justice AS Oka and Justice Vikram Nath

ಅರ್ಥಪೂರ್ಣವಾಗಿ ಮತ್ತು ಘನತೆಯಿಂದ ಬದುಕವುದು ಜೀವಿಸುವ ಹಕ್ಕಿನ ಅವಿಭಾಜ್ಯ ಅಂಗವಾಗಿದ್ದು  ಕೋಮು ಉದ್ವಿಗ್ನ ವಾತಾವರಣದಲ್ಲಿ ಬದುಕುವಂತೆ ನಾಗರಿಕರನ್ನು ಒತ್ತಾಯಿಸುವುದು ಜೀವಿಸುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ [ಶಕೀಲ್ ಅಹ್ಮದ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

1992ರಲ್ಲಿ ನಡೆದಿದ್ದ ಮುಂಬೈ ಕೋಮು ಗಲಭೆಗೆ ಸಂಬಂಧಿಸಿದಂತೆ  ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎ ಎಸ್ ಓಕಾ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

"ಕೋಮು ಉದ್ವಿಗ್ನತೆಯ ವಾತಾವರಣದಲ್ಲಿ ನಾಗರಿಕರನ್ನು ಬದುಕುವಂತೆ ಒತ್ತಾಯಿಸುವುದು (ಸಂವಿಧಾನದ) 21ನೇ ವಿಧಿಯಲ್ಲಿ ಒದಗಿಸಲಾದ ಅವರ ಜೀವಿಸುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ. ಡಿಸೆಂಬರ್ 1992 ಮತ್ತು ಜನವರಿ 1993 ರಲ್ಲಿ ಮುಂಬೈನಲ್ಲಿ ನಡೆದ ಹಿಂಸಾಚಾರ, ಗಲಭೆ ಪೀಡಿತ ಪ್ರದೇಶದ ನಿವಾಸಿಗಳ ಗೌರವಯುತ ಮತ್ತು ಅರ್ಥಪೂರ್ಣ ಜೀವನ ನಡೆಸುವ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು” ಎಂದು ನ್ಯಾಯಾಲಯ ಹೇಳಿದೆ.

ಪೊಲೀಸರು ಗಲಭೆ ನಿಯಂತ್ರಿಸಲು ಮತ್ತು ಜನರ ಹಕ್ಕು ರಕ್ಷಿಸಲು ವಿಫಲರಾಗಿದ್ದಾರೆ ಎಂದು ಕೂಡ ಸುಪ್ರೀಂ ಕೋರ್ಟ್ ಟೀಕಿಸಿದೆ.

"ಡಿಸೆಂಬರ್ 1992 ಮತ್ತು ಜನವರಿ 1993 ರಲ್ಲಿ ಸಂಭವಿಸಿದ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಕೆಲವು ಗುಂಪುಗಳು ಜವಾಬ್ದಾರರಾಗಿರುವುದು ನಿರ್ವಿವಾದಿತ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮತ್ತು ಸಂವಿಧಾನದ  21ನೇ ವಿಧಿಯಡಿ ಒದಗಿಸಲಾದ ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ ರಾಜ್ಯ ಸರ್ಕಾರದ ಕಡೆಯಿಂದ ವೈಫಲ್ಯ ಉಂಟಾಗಿದೆ" ಎಂದು ಪೀಠ ಹೇಳಿದೆ.

ಆದರೆ ಒಂಬತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ಬಿಡುಗಡೆ/ ಖುಲಾಸೆ ಪ್ರಕರಣಗಳನ್ನು ಪುನಃ ವಿಚಾರಣೆ ಮಾಡುವುದಕ್ಕೆ ಈಗಾಗಲೇ ತಡವಾಗಿದೆ ಎಂದು ಪೀಠ ನುಡಿಯಿತು. ಪ್ರಸ್ತುತ ಅರ್ಜಿಗೆ ಸಂಬಂಧಿಸಿದಂತೆ ಪರಿಹಾರ ನೀಡುವುದು ಬಾಕಿ ಇದ್ದರೆ ನ್ಯಾ. ಶ್ರೀ ಕೃಷ್ಣ ಆಯೋಗದ ಶಿಫಾರಿಸಿನಂತೆ ಅದನ್ನು ನೀಡಬೇಕು. ತಮಗೆ ಹೆಚ್ಚುವರಿ ಪರಿಹಾರ ನೀಡಬೇಕೆಂಬ ಪ್ರಾರ್ಥನೆಯನ್ನು ಈ ಹಂತದಲ್ಲಿ ಮನ್ನಿಸಲಾಗದು ಎಂದ ಪೀಠ, ಇನ್ನೂ ಬಾಕಿ ಪರಿಹಾರ ದೊರೆಯದವರು ಬಡ್ಡಿಸಹಿತ ಪರಿಹಾರ ಪಡೆಯಲು ಅರ್ಹರು ಎಂದು ಸ್ಪಷ್ಟಪಡಿಸಿತು.

Also Read
ಗುಜರಾತ್‌ ಕೋಮು ಗಲಭೆ: ಪ್ರಧಾನಿ ಮೋದಿಯವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ ಚಿಟ್‌ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

"ಸಮಿತಿಯು ಈ ನಿರ್ದೇಶನಗಳ ಪ್ರಕಾರ ಬಡ್ಡಿಗೆ ಅರ್ಹತೆಯ ಸಮಸ್ಯೆಯನ್ನು ನಿರ್ಧರಿಸಬೇಕಾಗುತ್ತದೆ. ಈ ರಿಟ್ ಅರ್ಜಿಯ ವಿಲೇವಾರಿಯಲ್ಲಿ ವಿಳಂಬವಾಗಿದೆ ಎಂಬ ಕಾರಣಕ್ಕಾಗಿ ಸಂತ್ರಸ್ತರು ತೊಂದರೆ ಅನುಭವಿಸಲು ನಾವು ಅವಕಾಶ ನೀಡುವುದಿಲ್ಲ. ಪರಿಹಾರ ವಂಚಿತ ವ್ಯಕ್ತಿಗಳನ್ನು ತಲುಪಲು, ಔಪಚಾರಿಕ ವಿಧಿವಿಧಾನಗಳನ್ನು ಪಾಲಿಸಲು ಸಮಿತಿ ಯಾವಾಗ ಬೇಕಾದರೂ ಅರೆ ಕಾನೂನು ಸ್ವಯಂಸೇವಕರ ಸಹಾಯ ಪಡೆಯಬಹುದು" ಎಂದು ಹೇಳಿ ಪರಿಹಾರಕ್ಕೆ ಸಂಬಂಧಿಸಿದ ವಿವಿಧ ನಿರ್ದೇಶನಗಳನ್ನು ಅದು ನೀಡಿತು.

ತೊಂಬತ್ತರ ದಶಕದಲ್ಲಿ ನಡೆದ ಮುಂಬೈ ಗಲಭೆ ವೇಳೆ ಸುಮಾರು 900 ಮಂದಿ ಸಾವನ್ನಪ್ಪಿ 168 ಮಂದಿ ಕಾಣೆಯಾಗಿದ್ದರು. 2036 ಮಂದಿ ಗಾಯಗೊಂಡರು. ಗಲಭೆಯ ನಂತರ ಮಾರ್ಚ್ 1993ರಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ  257 ಮಂದಿ ಹತರಾಗಿ 1400 ಮಂದಿ ಗಾಯಾಳುಗಳಾದರು. ಆಗ ಬಾಂಬೆ ಹೈಕೋರ್ಟಿನ ನ್ಯಾಯಮೂರ್ತಿಯಾಗಿದ್ದ ಶ್ರೀಕೃಷ್ಣ ಅವರಿಗೆ ಘಟನೆಯ ತನಿಖೆಯ ನೇತೃತ್ವ ವಹಿಸಲಾಗಿತ್ತು. 1998ರಲ್ಲಿ ಅವರು ವರದಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com