ವಿಚಾರಣೆ ವಿಳಂಬ: ಕೇರಳಕ್ಕೆ ತೆರಳಲು ಅನುಮತಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ ಬೆಂಗಳೂರು ಸ್ಫೋಟ ಆರೋಪಿ ಮದನಿ

ವಿಚಾರಣೆ ಮುಗಿಯುವವರೆಗೆ ಕೇರಳದ ಸ್ವಂತ ಊರಿಗೆ ತೆರಳಿ ಅಲ್ಲಿ ಉಳಿಯಲು ಅವಕಾಶ ನೀಡಬೇಕೆಂದು ಕೋರಿ 2008ರ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ನಜೀರ್ ಮದನಿ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
Abdul Nasser Maudany and Supreme court
Abdul Nasser Maudany and Supreme court
Published on

ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್‌ ನಜೀರ್‌ ಮದನಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು ಪ್ರಕರಣದ ವಿಚಾರಣೆ ಮುಗಿಯುವವರೆಗೂ ಕೇರಳದಲ್ಲಿರುವ ತಮ್ಮ ಊರಿಗೆ ತೆರಳಲು ಅನುಮತಿ ನೀಡಬೇಕೆಂದು ಕೋರಿದ್ದಾರೆ. ಕಳೆದ ಆರು ವರ್ಷಗಳಿಂದ ವಿಚಾರಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಅವರು ಈ ಅರ್ಜಿ ಸಲ್ಲಿಸಿದ್ದಾರೆ.

ಅನಾರೋಗ್ಯದ ಕಾರಣಕ್ಕೆ ಸುಪ್ರೀಂಕೋರ್ಟ್‌ ಮದನಿಗೆ 2014 ರಲ್ಲಿ ಜಾಮೀನು ನೀಡಿತ್ತು. ಆದರೆ ಬೆಂಗಳೂರನ್ನು ತೊರೆಯದಂತೆ ಆದೇಶಿಸಿತ್ತು. ಪರಿಣಾಮವಾಗಿ ಮದನಿ ಅಂದಿನಿಂದಲೂ ನಗರದಲ್ಲಿ ನೆಲೆಸಿದ್ದಾರೆ. ಜಾಮೀನು ಷರತ್ತಿನ ಅವಧಿ ಮುಗಿದಿರುವುದರಿಂದ ಜಾಮೀನು ಷರತ್ತನ್ನು ಸಡಿಲಗೊಳಿಸುವಂತೆ ಅವರು ಕೋರಿದ್ದಾರೆ.

"ನಾಲ್ಕು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳ್ಳಲಿದೆ ಎಂದು ಪ್ರತಿವಾದಿಗಳು 2014 ರಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಆದರೆ, ಆರಕ್ಕಿಂತ ಹೆಚ್ಚು ವರ್ಷವೇ ಕಳೆದರೂ ವಿಚಾರಣೆ ಪ್ರಕ್ರಿಯೆ ಅಂತ್ಯಗೊಂಡಿಲ್ಲ” ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಕೀಲ ಹ್ಯಾರಿಸ್‌ ಬೀರನ್‌ ಅವರು ವಕೀಲ ಆರ್‌ ಎಸ್‌ ಜೆನಾ ಅವರ ಮೂಲಕ ಪ್ರಕರಣದ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.

Also Read
ತೀವ್ರ ವಿರೋಧದ ಹಿನ್ನೆಲೆಯಲ್ಲಿ ಪೊಲೀಸ್ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ ಜಾರಿಯಿಂದ ಹಿಂದೆ ಸರಿದ ಕೇರಳ ಸರ್ಕಾರ

ಕರ್ನಾಟಕ ಸರ್ಕಾರದ ನಿರ್ಲಕ್ಷ್ಯದಿಂದಾಗಿ ವಿಚಾರಣೆ ವಿಳಂಬವಾಗಿದೆ. ವಿಚಾರಣೆ 'ಬಸವನ ಹುಳುವಿನ ವೇಗ'ದಲ್ಲಿ ಸಾಗುತ್ತಿದೆ. ಸಾಕ್ಷಿಗಳ ಮರುವಿಚಾರಣೆ, ಮೂರು ಬಾರಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವರ್ಗಾವಣೆ ಹಾಗೂ ಕೋವಿಡ್‌ ಸಾಂಕ್ರಾಮಿಕದಿಂದಾಗಿ ವಿಳಂಬ ಉಂಟಾಗಿದೆ. ವಿಚಾರಣೆ ನಡೆಸಬೇಕಿರುವ ಮುಖ್ಯ ಅಧಿಕಾರಿ ಕೂಡ ವರ್ಗಾವಣೆಯಾಗಿದ್ದು ವಿಚಾರಣೆ ನಡೆಸಲು ಈಗ ಯಾವ ಅಧಿಕಾರಿಯೂ ಇಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಕಳೆದ ಹನ್ನೊಂದು ವರ್ಷಗಳ ಅವಧಿಯಲ್ಲಿ ಕೇವಲ 25 ದಿನ ಮಾತ್ರ ಕೇರಳಕ್ಕೆ ತೆರಳಲು ಸಾಧ್ಯವಾಗಿದೆ. ಎರ್ನಾಕುಲಂನಲ್ಲಿ ಕಣ್ಣಿಗೆ ಆಯುರ್ವೇದ ಚಿಕಿತ್ಸೆ ಪಡೆಯುವಂತೆ ಬೆಂಗಳೂರಿನ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳಕ್ಕೆ ತೆರಳಲು ಅನುಮತಿ ನೀಡಬೇಕು. 2015ರಲ್ಲಿ ತಾಯಿಗೆ ಕ್ಯಾನ್ಸರ್‌ ತಗುಲಿದಾಗ, 2016 ರಲ್ಲಿ ಇದೇ ಕಾರಣಕ್ಕೆ ಮತ್ತು 2017 ರಲ್ಲಿ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ತನಗೆ ಜಾಮೀನು ಷರತ್ತಿನಲ್ಲಿ ಸಡಿಲಿಕೆ ನೀಡಲಾಗಿತ್ತು. ಈ ಹಿಂದಿನ ಘಟನೆಗಳಲ್ಲಿ ತಾವು ಜಾಮೀನು ಷರತ್ತನ್ನು ಉಲ್ಲಂಘಿಸಿಲ್ಲ ಎಂದು ಮದನಿ ತಿಳಿಸಿದ್ದಾರೆ.

Kannada Bar & Bench
kannada.barandbench.com