ನಾಗಾಲ್ಯಾಂಡ್ ನಾಗರಿಕರ ಹತ್ಯಾಕಾಂಡ: 30 ಸೇನಾ ಸಿಬ್ಬಂದಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿದ ಸುಪ್ರೀಂ ಕೋರ್ಟ್

ಉಗ್ರಗಾಮಿಗಳ ಚಲನವಲನದ ಬಗ್ಗೆ ಗುಪ್ತಚರ ದಳ ನೀಡಿದ್ದ ಸುಳಿವು ಆಧರಿಸಿ ಸೇನೆಯ ದಂಗೆ ನಿಗ್ರಹ ತುಕಡಿ ನಿರಾಯುಧ ನಾಗರಿಕರ ಮೇಲೆ ತಪ್ಪಾಗಿ ಗುಂಡು ಹಾರಿಸಿತ್ತು.
Justice Vikram Nath and Justice PB Varale
Justice Vikram Nath and Justice PB Varale
Published on

ನಾಗಾಲ್ಯಾಂಡ್‌ನ ಮೊನ್‌ ಜಿಲ್ಲೆಯಲ್ಲಿ ಡಿಸೆಂಬರ್ 2021 ರಲ್ಲಿ ನಡೆದಿದ್ದ 14 ನಾಗರಿಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 30 ಸೇನಾ ಸಿಬ್ಬಂದಿ ವಿರುದ್ಧ ಪೊಲೀಸ್‌ ವಿಶೇಷ ತನಿಖಾ ತಂಡ ಹೂಡಿದ್ದ ಕ್ರಿಮಿನಲ್‌ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಮುಕ್ತಾಯಗೊಳಿಸಿದೆ [ರಬೀನಾ ಘಲೆ ಮತ್ತಿತರರು ಹಾಗೂ ಕೇಂದ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪ್ರಕರಣದಲ್ಲಿ ಆರೋಪಿಯಾಗಿದ್ದ ಅಧಿಕಾರಿಯೊಬ್ಬರ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ ಪುರಸ್ಕರಿಸಿತು.  

Also Read
ನಾಗಾಲ್ಯಾಂಡ್‌ ಹತ್ಯಾಕಾಂಡ: ಸೇನಾ ಸಿಬ್ಬಂದಿ ತನಿಖೆ ಮನವಿ ಸಂಬಂಧ ರಕ್ಷಣಾ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಆದರೆ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಆಗ ಸಿಬ್ಬಂದಿ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

"ಮೇಲ್ಮನವಿಗಳನ್ನು ಪುರಸ್ಕರಿಸಲಾಗಿದೆ. ದೋಷಾರೋಪಣೆ ಮಾಡಲಾದ ಎಫ್‌ಐಆರ್‌ ಮುಕ್ತಾಯಗೊಳಿಸಲಾಗುತ್ತದೆ. ಆದರೆ, ಅಭಿಯೋಜನಾ ಮಂಜೂರಾತಿ ದೊರೆತರೆ, ಅವುಗಳನ್ನು ತಮ್ಮ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬಹುದು" ಎಂದು ಪೀಠ ಖಚಿತಪಡಿಸಿತು.

ಆಂತರಿಕ ಶಿಸ್ತು ಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆ ನಡೆಸುವ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುವ ಅಧಿಕಾರ ಸಶಸ್ತ್ರ ಪಡೆಗಳಿಗೆ ಇದೆ ಎಂದು ನ್ಯಾಯಾಲಯ ಹೇಳಿತು.

ಸುಪ್ರೀಂ ಕೋರ್ಟ್ 30 ಸೇನಾ ಸಿಬ್ಬಂದಿ ವಿರುದ್ಧದ ವಿಚಾರಣೆಗೆ ಜುಲೈ 2022 ರಲ್ಲಿ ತಡೆ ನೀಡಿತ್ತು. ಇಂದು ವಿವಿಧ ಅರ್ಜಿಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಲಾಗಿದೆ.  ಅಂತಹ ಅರ್ಜಿಯೊಂದನ್ನು ನಾಗಾಲ್ಯಾಂಡ್ ಪೋಲೀಸರು ಬಂಧಿಸಿದ್ದ ಸೇನಾ ಅಧಿಕಾರಿಗಳಲ್ಲಿ ಒಬ್ಬರಾದ ಮೇಜರ್ ಅಂಕುಶ್ ಗುಪ್ತಾ ಅವರ ಪತ್ನಿ ಅಂಜಲಿ ಗುಪ್ತಾ ಅವರು ಸಲ್ಲಿಸಿದ್ದರು.

ಸೇನಾ ವಿಶೇಷ ಅಧಿಕಾರ ಕಾಯಿದೆ ಮತ್ತು ಸೇನಾ ಕಾಯಿದೆ ಅಡಿ ಅದರ ಸಿಬ್ಬಂದಿಗೆ ರಕ್ಷಣೆ ಇರುವುದರ ಹೊರತಾಗಿಯೂ ಪ್ರಸಕ್ತ ಪ್ರಕರಣದಲ್ಲಿ ಎಸ್‌ಐಟಿಯು ಅಪರಾಧ ಪ್ರಕ್ರಿಯಾ ಸಂಹಿತೆ ಅಡಿ (ಸಿಆರ್‌ಪಿಸಿ) ಪ್ರಕ್ರಿಯೆಗೆ ಮುಂದಾಗಿದ್ದನ್ನು ಅರ್ಜಿದಾರರು ವಿರೋಧಿಸಿದ್ದರು. ಅಲ್ಲದೆ, ಆರೋಪಿ ಸೇನಾಧಿಕಾರಿಗಳು ಹಾಗೂ ಅವರ ಕುಟುಂಬಗಳ ವೈಯಕ್ತಿಕ ಮಾಹಿತಿಯನ್ನು ನಾಗಾಲ್ಯಾಂಡ್‌ ಸರ್ಕಾರವು ಬಹಿರಂಗಗೊಳಿಸುವ ಮೂಲಕ ಅವರೆಲ್ಲರ ರಕ್ಷಣೆಯ ಬಗ್ಗೆ ಕುರುಡಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ನಿರಾಯುಧ ನಾಗರಿಕರನ್ನು ಭಯೋತ್ಪಾದಕರು ಎಂದು ತಪ್ಪಾಗಿ ತಿಳಿದು 2021ರ ಡಿಸೆಂಬರ್ 4ರಂದು ಸೇನೆಯ ದಂಗೆ ನಿಗ್ರಹ ಪಡೆ ಗುಂಡು ಹಾರಿಸಿತ್ತು. ಸೇನಾಪಡೆಗಳ ಗುಂಡಿಗೆ ಬಲಿಯಾದವರು ಒಟಿಂಗ್‌ ಗ್ರಾಮದವರಾಗಿದ್ದು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮುಗಿಸಿ ಪಿಕಪ್‌ ವಾಹನದಲ್ಲಿ ಮನೆಗೆ ಮರಳುತ್ತಿದ್ದರು. ಘಟನೆ ದೇಶದ ಗಮನ ಸೆಳೆದಿತ್ತು. ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ತಕ್ಷಣವೇ ರದ್ದುಪಡಿಸಬೇಕೆಂಬ ಕೂಗು ಕೇಳಿಬಂದಿತ್ತು.

Also Read
ನಾಗಾಲ್ಯಾಂಡ್ ನಾಗರಿಕರ ಹತ್ಯೆ: 30 ಸೇನಾ ಸಿಬ್ಬಂದಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ಉಗ್ರಗಾಮಿಗಳ ಚಲನವಲನದ ಬಗ್ಗೆ ಗುಪ್ತಚರ ದಳ ನೀಡಿದ ಸುಳಿವನ್ನು ಆಧರಿಸಿ ಭದ್ರತಾ ಪಡೆಗಳು ಗ್ರಾಮಸ್ಥರನ್ನು ಉಗ್ರಗಾಮಿಗಳೆಂದು ತಪ್ಪಾಗಿ ಗ್ರಹಿಸಿದ್ದವು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸೇನಾ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿತ್ತು. ಇದಲ್ಲದೆ, ಘಟನೆಯ ತನಿಖೆಗಾಗಿ ನಾಗಾಲ್ಯಾಂಡ್ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು, ತನಿಖೆಯ ನಂತರ 30 ಸೇನಾ ಸಿಬ್ಬಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿತು.

Kannada Bar & Bench
kannada.barandbench.com