ಲೋಕ ಅದಾಲತ್‌ನಲ್ಲಿ 35.84 ಲಕ್ಷ ಪ್ರಕರಣ ಇತ್ಯರ್ಥ; 2,402 ಕೋಟಿ ರೂಪಾಯಿ ವಿತರಣೆ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 2024ನೇ ಸಾಲಿನ ನಾಲ್ಕನೇ ಹಾಗೂ ಕೊನೆಯ ಲೋಕ ಅದಾಲತ್​ನನ್ನು ಡಿಸೆಂಬರ್​ 14ರಂದು ಹಮ್ಮಿಕೊಳ್ಳಲಾಗಿದೆ.
KSLSA executive Chairman V Kameshwara Rao & Justice Srenivas Harish Kumar
KSLSA executive Chairman V Kameshwara Rao & Justice Srenivas Harish Kumar
Published on

ರಾಜ್ಯದಾದ್ಯಂತ ಸೆಪ್ಟೆಂಬರ್​ 14ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ ನ್ಯಾಯಾಲಯದಲ್ಲಿ ಬಾಕಿಯಿರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 35 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠದಲ್ಲಿ 5, ಧಾರವಾಡ ಮತ್ತು ಕಲಬುರಗಿ ಪೀಠದಲ್ಲಿ ತಲಾ 2 ಪೀಠಗಳಲ್ಲಿ ಒಟ್ಟು 781 ಪ್ರಕರಣಗಳು ಹಾಗೂ ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿನ 999 ಪೀಠಗಳಲ್ಲಿ ಬಾಕಿ ಇರುವ 2,00,083 ಮತ್ತು ವ್ಯಾಜ್ಯಪೂರ್ವ 33,84,347 ಪ್ರಕರಣಗಳೂ ಸೇರಿದಂತೆ 35,84,430 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗದೆ. ಒಟ್ಟು 2,402 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ.

ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಸೇರಿದಂತೆ 1669 ವೈವಾಹಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 248 ದಂಪತಿಗಳನ್ನು ಸಂಧಾನದ ಮೂಲಕ ಒಂದುಗೂಡಿಸಲಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್​ ಮಾಹಿತಿ ನೀಡಿದರು.

2,696 ಪಾಲು ಕುರಿತಾದ ದಾವೆಗಳು, 3,621 ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು, 8,517 ಚೆಕ್​ ಬೌನ್ಸ್​ ಪ್ರಕರಣಗಳು, 389 ಎಲ್ಎಸಿ ಅಮಲ್ಜಾರಿ ಪ್ರಕರಣಗಳು 623 ಎಂವಿಸಿ ಅಮಲ್ಜಾರಿ ಪ್ರಕರಣಳು ಹಾಗೂ ಇತರೆ 2,598 ಅಮಲ್ಜಾರಿ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು 108 ಕೋಟಿ ರೂಪಾಯಿ ಪರಿಹಾರ ಕೊಡಿಸಲಾಗಿದೆ. ಇದಲ್ಲದೇ 73 ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳು ಇತ್ಯರ್ಥಪಡಿಸಿದ್ದು, 3.24 ಕೋಟಿ ರೂಪಾಯಿಗಳನ್ನು ಪರಿಹಾರ ವಿತರಿಸಲಾಗಿದೆ.

ಅದಾಲತ್​ನಲ್ಲಿನ ವಿಶೇಷ ಪ್ರಕರಣಗಳು

  • ರಿಲಾಯನ್ಸ್​ ಹೋಮ್​ ಫೈನಾನ್ಸ್​ ವರ್ಸರ್ಸ್‌ ಸೈಕಾನ್​ ಕನ್‌ಸ್ಟ್ರಕ್ಷನ್‌  ಪ್ರೈವೇಟ್​ ಲಿಮಿಟೆಡ್​ ನಡುವಿನ ಚೆಕ್‌ ಬೌನ್ಸ್‌ ಪ್ರಕರಣವನ್ನು20 ಕೋಟಿ ರೂಪಾಯಿಯೊಂದಿಗೆ ಇತ್ಯರ್ಥಪಡಿಸಲಾಗಿದೆ.

  • ಅಪರ್ಣ ರಾಮಕೃಷ್ಣ ವರ್ಸ್‌ ರಾಯಲ್​ ಸುಂದರಂ ವಿಮಾ ಕಂಪೆನಿ ನಡುವಿನ ಪ್ರಕರಣವನ್ನು 3.75 ಕೋಟಿ ರೂಪಾಯಿಗೆ ಮುಕ್ತಾಯಗೊಳಿಸಲಾಗಿದೆ.

  • ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ 26 ವರ್ಷಗಳಿಂದ ಬಾಕಿ ಉಳಿದಿದ್ದ ನಂಜಪ್ಪ ವರ್ಸಸ್‌ ಅಕ್ರಮ್‌ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ.

  • ಹಿರಿಯ ನಾಗರಿಕರಿಗೆ ವಿವಿಧ ಹಂತದಲ್ಲಿನ ಸುಮಾರು 1,365 ಪ್ರಕರಣಗಳ ಇತ್ಯರ್ಥಪಡಿಸಲಾಗಿದೆ. ಐದು ವರ್ಷಗಳಿಗೂ ಹೆಚ್ಚು ಹಳೆಯದಾದ 1,022 ಪ್ರಕರಣಗಳು, 10 ವರ್ಷಗಳಿಗೂ ಹಳೆಯದಾದ 277 ಪ್ರಕರಣಗಳು ಮತ್ತು 15 ವರ್ಷಗಳಿಗೂ ಹಳೆಯದಾದ 144 ಪ್ರಕರಣಗಳು ಸೇರಿ 1,443 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಆಸ್ತಿ ತೆರಿಗೆ ರಿಯಾಯಿತಿ: ಕರ್ನಾಟಕ ಪುರಸಭೆ ಕಾಯಿದೆ ಸೆಕ್ಷನ್‌ 103ರ ಅಡಿಯಲ್ಲಿ ಲೋಕ ಅದಾಲತ್​ನಲ್ಲಿ ರಿಯಾಯಿತಿ ವಿಸ್ತರಣೆ ಮಾಡಿದ ಹಿನ್ನೆಲೆಯಲ್ಲಿ 5,95,892 ಪ್ರಕರಣಗಳಲ್ಲಿ ತೆರಿಗೆ ಪಾವತಿಯಾಗಿದ್ದು, 653 ಕೋಟಿ ರೂಪಾಯಿ ಸರ್ಕಾರದ ಖಜಾನೆಗೆ ಜಮೆಯಾಗಿದೆ ಎಂದು ನ್ಯಾ. ರಾವ್‌ ವಿವರಿಸಿದರು.

Also Read
[ಲೋಕ ಅದಾಲತ್‌] 40 ಲಕ್ಷ ಪ್ರಕರಣ ಇತ್ಯರ್ಥ; 2,640 ಕೋಟಿ ಪರಿಹಾರ ಪಾವತಿ

ಡಿಸೆಂಬರ್ 14ಕ್ಕೆ ಮುಂದಿನ ಅದಾಲತ್

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 2024ನೇ ಸಾಲಿನ ನಾಲ್ಕನೇ ಹಾಗೂ ಕೊನೆಯ ಲೋಕ ಅದಾಲತ್​ನನ್ನು ಡಿಸೆಂಬರ್​ 14ರಂದು ಹಮ್ಮಿಕೊಳ್ಳಲಾಗಿದ್ದು, ಈ ಸಂಬಂಧ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳ ಬಹುದಾಗಿದೆ ಎಂದು ತಿಳಿಸಲಾಗಿದೆ. 

Kannada Bar & Bench
kannada.barandbench.com