ಜೆಎಸ್‌ಡಬ್ಲ್ಯುಗೆ 3,667 ಎಕರೆ ಭೂಮಿ ಕ್ರಯ ಪ್ರಕರಣ: ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಹೇಳಿದ್ದೇನು?

ಸರ್ಕಾರದ ನಿರ್ಧಾರ ಮರು ಪರಿಶೀಲಿಸಿದ ನಂತರದ ತೀರ್ಮಾನಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಲು ಎಎಜಿಗೆ ನಿರ್ದೇಶಿಸಲಾಗಿತ್ತು. ಅಫಿಡವಿಟ್‌ ಸಲ್ಲಿಸದ ಎಎಜಿ ನ್ಯಾಯಾಲಯದ ನಿರ್ದೇಶನದಂತೆ ಕ್ರಯ ಪತ್ರ ಮಾಡಿಕೊಡಲಾಗುವುದು ಎಂದಿದ್ದಾರೆ.
Karnataka HC and  JSW
Karnataka HC and JSW
Published on

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ಒಟ್ಟು 3667.31 ಎಕರೆ ಬಹುಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಗೆ (ಜಿಂದಾಲ್‌) ಶುದ್ಧ ಕ್ರಯ ಪತ್ರ ಮಾಡಿಕೊಡುವ ರಾಜ್ಯ ಸರ್ಕಾರದ ತೀರ್ಮಾನ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಪ್ರತಿಪಕ್ಷಗಳ ಟೀಕಾ ಪ್ರಹಾರಕ್ಕೆ ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ ಆದೇಶದ ಮೇರೆಗೆ ಶುದ್ಧ ಕ್ರಯ ಮಾಡಿಕೊಡುವ ನಿರ್ಧಾರವನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಸಮರ್ಥನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶ ಏನು ಹೇಳಿದೆ, ನ್ಯಾಯಾಲಯಕ್ಕೆ ಸರ್ಕಾರ ಏನು ಹೇಳಿತ್ತು ಎಂಬುದನ್ನು ವಿವರಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಜಿಂದಾಲ್‌ ಸ್ಟೀಲ್‌ ಕಂಪೆನಿಯು ತನ್ನ ಹಾಗೂ ಸರ್ಕಾರದ ನಡುವೆ 28.07.2006 ರಂದು ಆಗಿರುವ ಲೀಸ್‌ ಕಮ್‌ ಸೇಲ್‌ ಒಪ್ಪಂದ ಹಾಗೂ 06.05.2021ರಂದು ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಅನ್ವಯ 3667.31 ಎಕರೆ ಭೂಮಿಯನ್ನು ತನಗೆ ಶುದ್ಧಕ್ರಯ ಮಾಡಿಕೊಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ 25.05.2022ರಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು 12.03.2024 ರಂದು ಜಿಂದಾಲ್‌ ಸ್ಟೀಲ್‌ ಕಂಪನಿ ಪರವಾಗಿ ತೀರ್ಪು ನೀಡಿತ್ತು.

ರಾಜ್ಯ ಸರ್ಕಾರವು 26.04.2021ರಂದು ಕೈಗೊಂಡಿರುವ ಸಂಪುಟದ ನಿರ್ಧಾರದ ಅನ್ವಯ 6.05.2021ರಂದು ಸರ್ಕಾರ ಆದೇಶ ಹೊರಡಿಸಿದ್ದು, ಇದರ ಅನ್ವಯ ಜಿಂದಾಲ್‌ ಕಂಪನಿಗೆ ಶುದ್ಧಕ್ರಯ ಪತ್ರ ಮಾಡಿಕೊಡುವ ಮೂಲಕ ರಾಜ್ಯ ಸರ್ಕಾರವು ತಾರ್ಕಿಕ ಅಂತ್ಯ ಹಾಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು.

ನ್ಯಾಯಾಲಯದ ಆದೇಶವೇನು?

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2000.58 ಎಕರೆ ಜಮೀನು ಹಾಗೂ ತೋರಣಗಲ್ಲು, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕರೆ ಜಮೀನನ್ನು ಜಿಂದಾಲ್‌ ಸ್ಟೀಲ್‌ ಕಂಪನಿ ಶುದ್ಧ ಕ್ರಯ ಪತ್ರ ಮಾಡಿಕೊಡಲು 26.04.2021 ರಂದು ನಡೆದಿದ್ದ ಯಡಿಯೂರಪ್ಪ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆನಂತರ ಸರ್ಕಾರ ಆದೇಶ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಪಿಐಎಲ್‌ ಒಂದು ಹೈಕೋರ್ಟ್‌ ವಿಭಾಗೀಯ ಪೀಠದ ಮುಂದೆ ದಾಖಲಾಗಿತ್ತು.

ವಿಭಾಗೀಯ ಪೀಠವು ತನ್ನ ಅದೇಶದಲ್ಲಿ ಹೀಗೆ ದಾಖಲಿಸಿತ್ತು: ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ಅಂದಿನ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಬೃಹತ್‌ ಕೈಗಾರಿಕೆ ಇಲಾಖೆ ಸಚಿವರಾಗಿದ್ದ ಹಾಗೂ ಸಂಪುಟ ಉಪ ಸಮಿತಿಯ ಅಧ್ಯಕ್ಷರಾಗಿದ್ದ ಜಗದೀಶ್‌ ಶೆಟ್ಟರ್‌ ಅವರು ಜಿಂದಾಲ್‌ಗೆ ಜಮೀನು ಕ್ರಯ ಮಾಡಿಕೊಡುವ ತೀರ್ಮಾನಕ್ಕೆ ಪ್ರಸ್ತುತ ಮುಖ್ಯಮಂತ್ರಿ (ಬಸವರಾಜ ಬೊಮ್ಮಾಯಿ) ಅಸ್ತು ಎಂದಿಲ್ಲ. ಇಡೀ ಪ್ರಕರಣವನ್ನು ಮುಖ್ಯಮಂತ್ರಿ ಮತ್ತೆ ಮರುಪರಿಶೀಲಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೆ ಜಿಂದಾಲ್‌ ಕಂಪನಿಯ ಹಿರಿಯ ವಕೀಲರು ಆಕ್ಷೇಪಿಸಿಲ್ಲ. ಜಿಂದಾಲ್‌ಗೆ ಕ್ರಯ ಪತ್ರ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡರೆ ಅದನ್ನು ಮರುಪರಿಶೀಲಿಸುವಂತೆ ಅರ್ಜಿದಾರರು (ಪಿಐಎಲ್‌ ಸಲ್ಲಿಸಿದ್ದವರು) ಕೋರಬಹುದು ಎಂದು ಹೇಳಿದೆ ಎಂದು ಆದೇಶದಲ್ಲಿ ವಿವರಿಸಿ ಪಿಐಎಲ್‌ ವಿಲೇವಾರಿ ಮಾಡಿತ್ತು.

ವಿಭಾಗೀಯ ಪೀಠದ ಆದೇಶದ ಬಳಿಕೆ ಜಿಂದಾಲ್‌ ಕಂಪೆನಿಯು 10.01.2022ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿತ್ತು. ಅದಾಗ್ಯೂ, ಕ್ರಯ ಪತ್ರ ಮಾಡಿಕೊಟ್ಟಿರಲಿಲ್ಲ. ಈ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಜಿಂದಾಲ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಈ ಪ್ರಕರಣದ ವಿಚಾರಣೆಯ ನಡೆಸಿದ ನಂತರ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು 12.03.2024 ರಂದು ಈ ಕೆಳಗಿನಂತೆ ಆದೇಶಿಸಿತ್ತು:

ಜಿಂದಾಲ್‌ಗೆ ಕ್ರಯ ಪತ್ರ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಹೈಕೋರ್ಟ್‌ ನಿರ್ದೇಶನಕ್ಕೆ ಕಾಯಲಾಗುತ್ತಿದೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ತಿಳಿಸಿದ್ದಾರೆ. 26-04-2021ರ ಸಂಪುಟ ಸಭೆಯಲ್ಲಿ ಜಿಂದಾಲ್‌ಗೆ ಕ್ರಯಪತ್ರ ಮಾಡಿಕೊಡುವ ನಿರ್ಧಾರ ಕೈಗೊಂಡು ನಂತರ 6-05-2021 ರಂದು ಸರ್ಕಾರದ ಆದೇಶ ಹೊರಬಿದ್ದಿರುವುದರಿಂದ ಕ್ರಯ ಪತ್ರ ಮಾಡಿಕೊಡಲು ರಾಜ್ಯ ಸರ್ಕಾರವು ಮೀನಮೇಷ ಎಣಿಸುವಂತಿಲ್ಲ. ಪ್ರಕರಣವನ್ನು ಮರುಪರಿಶೀಲಿಸಲು ಸರ್ಕಾರಕ್ಕೆ ವಿಭಾಗೀಯ ಪೀಠ ಅನುಮತಿಸಿದೆ. ಆನಂತರ ಪ್ರಕರಣವನ್ನು ಸರ್ಕಾರ ಮರುಪರಿಶೀಲಿಸಿದೆ ಎಂದು ಹೇಳಿದ್ದಾರೆ. ಮರು ಪರಿಶೀಲಿಸಿದ ನಂತರದ ತೀರ್ಮಾನಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗೆ ನಿರ್ದೇಶಿಸಲಾಗಿತ್ತು. ಅಫಿಡವಿಟ್‌ ಸಲ್ಲಿಸದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ನ್ಯಾಯಾಲಯದ ನಿರ್ದೇಶನದಂತೆ ಕ್ರಯ ಪತ್ರ ಮಾಡಿಕೊಡಲಾಗುವುದು ಎಂದಿದ್ದಾರೆ. ಈ ಮೂಲಕ ಪ್ರಕರಣವನ್ನು ಸರ್ಕಾರವು ನ್ಯಾಯಾಲಯದ ತೀರ್ಮಾನಕ್ಕೆ ಬಿಟ್ಟಿದೆ.

27- 05-2019ರಂದು ಸಂಪುಟ ಕೈಗೊಂಡಿರುವ ನಿರ್ಧಾರವನ್ನು 26-04-2021ರ ಸಂಪುಟದ ತೀರ್ಮಾನದಲ್ಲಿ ಪುನರುಚ್ಚರಿಸಲಾಗಿದ್ದು, ಇದನ್ನು ಜಾರಿಗೊಳಿಸಲು ಆದೇಶಿಸುವುದು ಸೂಕ್ತವಾಗಿದೆ.

ಹೀಗೆ ಮೇಲಿನ ಆದೇಶ ನೀಡಿದ ವೇಳೆ ನ್ಯಾಯಾಲಯವು ಸಂಪುಟದ ತೀರ್ಮಾನ ಏನಿತ್ತು ಎನ್ನುವ ಬಗ್ಗೆ 6-05-2021ರ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಬಗ್ಗೆ ತಿಳಿಸಿತ್ತು. ಸರ್ಕಾರದ ಆ ಆದೇಶದಲ್ಲಿ ಏನಿತ್ತು ಎನ್ನುವುದನ್ನು ನೋಡುವುದಕ್ಕೂ ಮೊದಲು ಏಕಸದಸ್ಯ ಪೀಠದ ಮುಂದೆ ಜೆಎಸ್‌ಡಬ್ಲ್ಯು ಹಾಗೂ ಸರ್ಕಾರ ಏನು ವಾದ ಮಂಡಿಸಿದ್ದವು ಎನ್ನುವುದನ್ನು ಗಮನಿಸಬಹುದು.

ಜೆಎಸ್‌ಡಬ್ಲ್ಯು ವಾದವೇನಿತ್ತು?

ಕಂಪೆನಿಗೆ 18 ವರ್ಷಗಳ ಹಿಂದೆ ಭೂಮಿ ಹಂಚಿಕೆ ಮಾಡಲಾಗಿದೆ. ಹಲವು ವರ್ಷಗಳ ಹಿಂದೆ ಉತ್ಪಾದನೆ ಆರಂಭವಾಗಿದೆ. ಸ್ಟೀಲ್‌ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಂಪುಟವು ಹಲವು ಭಾರಿ ನಿರ್ಣಯಿಸಿದರೂ ಕ್ರಯ ಪತ್ರ ಮಾಡಿಕೊಟ್ಟಿಲ್ಲವಾದ್ದರಿಂದ ಕಂಪನಿಯ ಭವಿಷ್ಯ ಅತಂತ್ರವಾಗಿದೆ. ಒಪ್ಪಂದ ಹೊಣೆಗಾರಿಕೆಯಂತೆ ನಡೆದುಕೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ. ಇಲ್ಲವಾದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಮೂಲಕ ಕಂಪನಿಯ ಸಮಸ್ಯೆ ಪರಿಹರಿಸಲು ಆದೇಶಿಸಬೇಕು. ಇಲ್ಲವಾದಲ್ಲಿ ಕ್ರಯ ಪತ್ರ ಮಾಡಿಕೊಡಲು ಅನುಮೋದಿಸಿರುವ ಸಂಪುಟದ ನಿರ್ಧಾರಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಲಿದೆ ಎಂದು ಹಿರಿಯ ವಕೀಲೆ ಎಸ್‌ ಆರ್‌ ಅನುರಾಧಾ ವಾದಿಸಿದ್ದರು.

ಸರ್ಕಾರದ ವಾದವೇನಿತ್ತು?

ಜಿಂದಾಲ್‌ಗೆ ಕ್ರಯಪತ್ರ ಮಾಡಿಕೊಡದಿರುವ ಕ್ರಮ ಸರಿಯಾಗಿದೆ. ಆದರೆ, ಸಂಪುಟವು ಕ್ರಯ ಪತ್ರ ಮಾಡಿಕೊಡಲು ಅನುಮೋದಿಸಿರುವುದನ್ನು ಅಲ್ಲಗಳೆಯಲಾಗದು. ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದರೆ ಪ್ರಕರಣವನ್ನು ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕಿರಣ್‌ ವಿ. ರೋಣಾ ನ್ಯಾಯಾಲಯಕ್ಕೆ ತಿಳಿಸಿದ್ದರು.

ಸಂಪುಟದ ನಿರ್ಣಯ ಏನಿತ್ತು?

ಯಡಿಯೂರಪ್ಪ ನೇತೃತ್ವದ ಸರ್ಕಾರವು 27.05.2019 ರಂದು ಜಿಂದಾಲ್‌ಗೆ ಕ್ರಯ ಮಾಡಿಕೊಡಲು ಸಂಪುಟ ಅನುಮೋದಿಸಿತ್ತು. ಆನಂತರ ಬಿಜೆಪಿಯಲ್ಲೇ ಅಪಸ್ವರ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಂಪುಟದ ಉಪ ಸಮಿತಿಗೆ (ಬೃಹತ್‌ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್ ನೇತೃತ್ವ) ವಹಿಸಲಾಗಿತ್ತು. ಆನಂತರ ಸಚಿವ ಸಂಪುಟದ ಉಪ ಸಮಿತಿಯ ಶಿಫಾರಸ್ಸಿನಂತೆ 27.05.2019ರಂದು ಮತ್ತದೇ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿತ್ತು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2000.58 ಎಕರೆ ಜಮೀನು ಹಾಗೂ ತೋರಣಗಲ್ಲು, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕರೆ ಜಮೀನನ್ನು ಜಿಂದಾಲ್‌ ಸ್ಟೀಲ್‌ ಕಂಪನಿ ಶುದ್ಧ ಕ್ರಯ ಪತ್ರ ಮಾಡಿಕೊಡಲು 26.04.2021 ರಂದು ನಡೆದಿದ್ದ ಯಡಿಯೂರಪ್ಪ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆನಂತರ 6.05.202ರಂದು ಸರ್ಕಾರ ಈ ಕುರಿತು ಆದೇಶ ಮಾಡಿತ್ತು.

6.05.2021ರ ಸರ್ಕಾರದ ಆದೇಶದಲ್ಲಿ ಏನಿತ್ತು?

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲು ಮತ್ತು ಕುರೇಕುಪ್ಪ ಗ್ರಾಮಗಳಲ್ಲಿನ 2000.58 ಎಕರೆ ಜಮೀನನ್ನು ಪ್ರತಿ ಎಕರೆಗೆ 1,22,200 ರೂಪಾಯಿಯಂತೆ ಅಂತಿಮ ಬೆಲೆ ನಿಗದಿಪಡಿಸಿ ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಗೆ ಶುದ್ಧಕ್ರಯ ಪತ್ರ ಮಾಡಿಕೊಡಬೇಕು.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲು, ಮುಸೇನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಗಳಲ್ಲಿನ 1666.73 ಎಕರೆ ಜಮೀನನ್ನು ಪ್ರತಿ ಎಕರೆಗೆ 1,50,635 ರೂಪಾಯಿಯಂತೆ ಅಂತಿಮ ಬೆಲೆ ನಿಗದಪಡಿಸಿ ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಗೆ ಶುದ್ಧ ಕ್ರಮಪತ್ರ ಮಾಡಿಕೊಡಬೇಕು. ಇದಕ್ಕಾಗಿ ಕೆಪಿಸಿಎಲ್‌ಗೆ 944 ಎಕರೆ ಪರ್ಯಾಯ ಭೂಮಿಯನ್ನು ಭೂ ಸ್ವಾದೀನಪಡಿಸಿಕೊಳ್ಳುವ ಸಂದರ್ಭದಲ್ಲಿ ಒಂದು ವೇಳೆ ಪರ್ಯಾಯ ಭೂಮಿಯ ಭೂಸ್ವಾಧೀನದ ವೆಚ್ಚವು ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿಗೆ ಹಂಚಿಕೆಯಾದ ವೆಚ್ಚಕ್ಕಿಂತ ಹೆಚ್ಚಾಗಿದ್ದಲ್ಲಿ, ಆ ವ್ಯತ್ಯಾಸದ ವೆಚ್ಚವನ್ನು 24.10.2007ರ ಲೀಸ್‌ ಕಂ ಸೇಲ್‌ ಕರಾರು ಪತ್ರ ಹಾಗೂ 03.02.2007ರ ಅನ್ವಯ ಕೆಐಎಡಿಬಿಗೆ ಭರಿಸುವುದಾಗಿ ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪನಿ ಬರೆದುಕೊಟ್ಟಿರುವ ಮುಚ್ಚಳಿಕೆಯ ಷರತ್ತಿಗೆ ಒಳಪಟ್ಟಿರುತ್ತದೆ.

ಜೆಎಸ್‌ಡಬ್ಲ್ಯು ಮತ್ತು ಎಂಎಂಎಲ್‌ (ಕೆಎಸ್‌ಎಂಸಿಎಲ್‌) ನಡುವಿನ ವಾಣಿಜ್ಯ ತಕರಾರಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ರಾಜ್ಯ ಮಿನರಲ್ಸ್‌ ಕಾರ್ಪೊರೇಶನ್‌ ಲಿಮಿಟೆಡ್‌ ಪ್ರಶ್ನಿಸಬೇಕು ಎಂದು ಅಡ್ವೊಕೇಟ್‌ ಜನರಲ್‌ ನೀಡಿರುವ ಅಭಿಪ್ರಾಯ ಪಾಲಿಸಬೇಕು ಎಂದು ಹೇಳಲಾಗಿತ್ತು.

Also Read
ಸಂಪುಟದಲ್ಲಿ ನಿರ್ಧಾರ ಕೈಗೊಳ್ಳದೇ ಸರ್ಕಾರಿ ಆದೇಶ ಹೊರಡಿಸುವುದು ಎತ್ತಿನ ಮುಂದೆ ಚಕ್ಕಡಿ ಹೂಡಿದ ಹಾಗೆ: ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಜೆಎಸ್‌ಡಬ್ಲ್ಯು ಸ್ಟೀಲ್‌ ಕಂಪೆನಿಯು 1997ರಲ್ಲಿ ವಾರ್ಷಿಕ 1.25 ದಶಲಕ್ಷ ಟನ್‌ (ಎಂಟಿಪಿಎ) ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದು, ಹಂಚಿಕೆ ಮಾಡಲಾದ ಭೂಮಿಯಲ್ಲಿ 2003ರಲ್ಲಿ 3.8 ಎಂಟಿಪಿಎಗೆ ಹೆಚ್ಚಿಸಿತ್ತು. ಉತ್ಪಾದನೆಯಲ್ಲಿ ಹೆಚ್ಚಳವಾಗಿರುವುದನ್ನು ಪರಿಗಣಿಸಿ 2 ಎಂಟಿಪಿಎ ಹೆಚ್ಚುವರಿ ಸಾಮರ್ಥ್ಯಕ್ಕಾಗಿ 2000 ಎಕರೆ ಭೂಮಿ ಹಂಚಿಕೆ ಮಾಡಿ 12-06-2006ರಂದು ಅಂದಿನ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರವು ಆದೇಶ ಹೊರಡಿಸಿತ್ತು. ಈ ಆದೇಶದ ಭಾಗವಾಗಿ 28.07.2006ರಂದು ರಾಜ್ಯ ಸರ್ಕಾರವು ಲೀಸ್‌ ಕಮ್‌ ಸೇಲ್‌ ಒಪ್ಪಂದ ಮಾಡಿದಂತಿದೆ. 2ನೇ ಲೀಸ್‌ ಕಮ್‌ ಸೇಲ್‌ ಒಪ್ಪಂದಕ್ಕೆ 24.10.2007ರಂದು ಚಾಲನೆ ನೀಡಲಾಗಿದೆ.

ಇದಾದ ಬಳಿಕ ರಾಜ್ಯ ಸರ್ಕಾರ ಹಂಚಿಕೆ ಮಾಡಿದ ಭೂಮಿಯಲ್ಲಿ 10 ಎಂಟಿಪಿಎ ಸಾಮರ್ಥ್ಯದ ಘಟಕವನ್ನು ಜಿಂದಾಲ್‌ ಕಂಪೆನಿ ಆರಂಭಿಸಿತ್ತು. ತದನಂತರ ಜಿಂದಾಲ್‌ ಕಂಪನಿಯು ಕ್ರಯ ಪತ್ರ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಾ ಬಂದಿದೆ. ಸಿದ್ದರಾಮಯ್ಯ ನೇತೃತ್ವದ ಮೊದಲ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅಂದರೆ 20.06.2013 ರಿಂದ 24.01.2018ರ ನಡುವೆ ಕ್ರಯಪತ್ರ ಶಿಫಾರಸ್ಸಿಗೆ ಕೋರಲಾಗಿತ್ತು. 03.03.2018ರಂದು ಸಂಪುಟ ಒಪ್ಪಿಗೆ ನೀಡಿದ ಬಳಿಕ ಕ್ರಯ ಪತ್ರ ಮಾಡಿಕೊಡಬಹುದು ಎಂಬ ಕಾನೂನು ಅಭಿಪ್ರಾಯ ವ್ಯಕ್ತವಾಗಿತ್ತು. ಇದರ ಮುಂದುವರಿದ ಭಾಗವಾಗಿ ಜಿಂದಾಲ್‌ಗೆ ಹಂಚಿಕೆ ಮಾಡಿದ ಭೂಮಿಗೆ ಮರು ದರ ನಿಗದಿಗೊಳಿಸಿ ಆರ್ಥಿಕ ಇಲಾಖೆ ಅನುಮೋದಿಸಿತ್ತು. ಆನಂತರ ಯಡಿಯೂರಪ್ಪ ನೇತೃತ್ವದ ಸರ್ಕಾರವು 27.05.2019ರಂದು ಜಿಂದಾಲ್‌ಗೆ ಕ್ರಯ ಮಾಡಿಕೊಡಲು ಸಂಪುಟ ಅನುಮೋದಿಸಿತ್ತು.

ಆನಂತರ ಸಂಪುಟ ಸಚಿವರ ನಡುವೆಯೇ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ 14.06.2019ರಂದು ಬಿಎಸ್‌ವೈ ನೇತೃತ್ವದ ಸಂಪುಟವು ಪ್ರಕರಣವನ್ನು ಸಂಪುಟ ಉಪಸಮಿತಿಯ ಅಭಿಪ್ರಾಯಕ್ಕೆ ವಹಿಸಿತ್ತು. ಇಡೀ ಕ್ರಯ ಪತ್ರ ಪ್ರಸ್ತಾವವನ್ನು ಪರಿಶೀಲಿಸಿದ್ದ ಸಂಪುಟ ಉಪ ಸಮಿತಿಯು 22-12-2020 ರಿಂದ 04-03-2021ರ ನಡುವೆ ಹಲವು ಕಾನೂನು ಅಭಿಪ್ರಾಯ ಪಡೆದಿತ್ತು. ಇನ್ನು ಆರ್ಥಿಕ ಇಲಾಖೆಯು 27.05.2019ರಂದು ಅನುಮೋದನೆ ನೀಡಿದ್ದಕ್ಕೆ 26-04-2021ರ ಸಂಪುಟ ಸಭೆಯು ಅಸ್ತು ಎಂದಿತ್ತು. ಇದಾದ ಬಳಿಕ 06-05-2021ರಂದು ಜಿಂದಾಲ್‌ಗೆ ಕ್ರಯ ಪತ್ರ ಮಾಡಿಕೊಡಲು ಸರ್ಕಾರವು ಆದೇಶಿಸಿತ್ತು. ಈ ಆದೇಶ ಅನುಷ್ಠಾನಗೊಳಿಸುವಂತೆ ಜಿಂದಾಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

Attachment
PDF
JSW Steel Ltd Vs State of Karnataka.pdf
Preview
Kannada Bar & Bench
kannada.barandbench.com