ಕಾನೂನು ವೃತ್ತಿ ನಿರುತ್ತೇಜಕ, ಲಿಂಗತಾರತಮ್ಯವಿದೆ: ಎಸ್‌ಸಿಬಿಎ ಸಮೀಕ್ಷೆ ವೇಳೆ ಶೇ.30ಕ್ಕೂ ಹೆಚ್ಚು ವಕೀಲೆಯರ ಅಭಿಮತ

ಶೇ. 38.2 ರಷ್ಟು ವಕೀಲೆಯರು ಮದುವೆಯ ನಂತರ ಕೆಲಸ ಮುಂದುವರಿಸಲು ಕಷ್ಟಪಡುತ್ತಿರುವುದಾಗಿ ಹೇಳಿದರೆ, ಶೇ. 6.2 ರಷ್ಟು ವಕೀಲೆಯರು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ.
Woman Lawyer
Woman Lawyer
Published on

ನಾಯಕತ್ವದ ಅವಕಾಶಗಳ ಅಲಭ್ಯತೆ, ಲಿಂಗ ತಾರತಮ್ಯ, ವೃತ್ತಿ ಆಯ್ಕೆಗಳು, ಮದುವೆ ಮತ್ತು ತಾಯ್ತನದಂತಹ ಅಂಶಗಳು ವಕೀಲಿಕೆಯಲ್ಲಿ ತೊಡಗಿರುವ ಮಹಿಳೆಯರ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿರುವುದನ್ನು ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ನಡೆಸಿರುವ ಸಮೀಕ್ಷೆ ಬಹಿರಂಗಪಡಿಸಿದೆ.

ʼಕಾನೂನು ಕ್ಷೇತ್ರದಲ್ಲಿ ಮಹಿಳಾ ಸಬಲೀಕರಣ: ಶಕ್ತಿ, ಹೋರಾಟ ಮತ್ತು ಯಶಸ್ಸಿನ ಕುರಿತು ಚರ್ಚಾಗೋಷ್ಠಿʼ ಎನ್ನುವ ಕಾರ್ಯಕ್ರಮದಲ್ಲಿ ಎಸ್‌ಸಿಬಿಎ ನಡೆಸಿದ ಸಮೀಕ್ಷೆಯ ವಿವರಗಳನ್ನು ಬಹಿರಂಗಪಡಿಸಲಾಯಿತು.

Also Read
[ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ] ದತ್ತಾಂಶ ಸಂರಕ್ಷಣೆ ಕುರಿತು ಆಯೋಗದ ಅಫಿಡವಿಟ್‌ ಸಲ್ಲಿಕೆ: ಸರ್ಕಾರದ ವಿವರಣೆ

ಒಟ್ಟು 301 ವಕೀಲೆಯರು ಸಮೀಕ್ಷೆಗೆ ಪ್ರತಿಕ್ರಿಯಿಸಿದ್ದು ಶೇಕಡಾ 84.1 ರಷ್ಟು ಮಂದಿ ತಾವು ವಕೀಲಿಕೆಯ ಕುಟುಂಬದಿಂದ ಬಂದವರು ಎಂದಿದ್ದರೆ ಶೇ 15.9 ರಷ್ಟು ಮಂದಿ ತಮಗೆ ಅಂತಹ ಹಿನ್ನೆಲೆ ಇಲ್ಲ ಎಂದು ಹೇಳಿದ್ದಾರೆ.

ಸಮೀಕ್ಷೆಯಲ್ಲಿ ಶೇ 38.5ರಷ್ಟು ಮಂದಿ ಕಾನೂನು ವೃತ್ತಿಯು ನಿರುತ್ತೇಜಕವಾಗಿದೆ ಎಂದಿದ್ದರೆ, ಶೇ.25.2 ಮಂದಿ ಉತ್ತೇಜಕವಾಗಿದೆ ಎಂದಿದ್ದಾರೆ. ಶೇ 17.6ಷ್ಟು ಮಂದಿ ಕಾಲಕ್ರಮೇಣ ವೃತ್ತಿ ಉತ್ಸಾಹ ನೀಡುತ್ತಿದೆ ಎಂದು ಪ್ರತಿಕ್ರಿಯಿಸಿದ್ದರೆ, ಶೇ 11.3ರಷ್ಟು ಮಂದಿ ತುಂಬಾ ಪ್ರೋತ್ಸಾಹದಾಯಕವಾಗಿದೆ ಎಂದು ಹೇಳಿದ್ದಾರೆ.

ತಮಗೆ ನ್ಯಾಯವಾದಿಗಳ ಸಮುದಾಯದಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಸಮಾನ ಅವಕಾಶವಿಲ್ಲ ಎಂದು ಶೇಕಡಾ 57.8 ರಷ್ಟು ವಕೀಲೆಯರು ಪ್ರತಿಕ್ರಿಯಿಸಿದ್ದಾರೆ. ಶೇ 58.9ರಷ್ಟು ಮಹಿಳಾ ನ್ಯಾಯವಾದಿಗಳು ಸಂಘಟನೆಗಳಲ್ಲಿ ನಾಯಕತ್ವ ಬಯಸುತ್ತಿದ್ದಾರೆ.

ಶೇ.33 ಮಂದಿ ವೃತ್ತಿಯಲ್ಲಿ ತಮಗೆ ಲಿಂಗ ತಾರತಮ್ಯ ಎದುರಾಗಿದೆ ಎಂದಿದ್ದರೆ, ಶೇ.23.1 ಮಂದಿ ತಮಗೆ ಅಂತಹ ಅನುಭವವಾಗಿಲ್ಲ ಎಂದಿದ್ದರು, ಶೇ 29 ಮಂದಿ ಕೆಲವೊಮ್ಮೆ ಅಂತಹ ಅನುಭವವಾಗಿದೆ ಎಂದಿದ್ದಾರೆ. ಶೇ 9.4 ವಕೀಲೆಯರು ನಿಯತವಾಗಿ ಇಂತಹ ಪಕ್ಷಪಾತ ಕಂಡುಬಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಶೇ. 38.2 ರಷ್ಟು ವಕೀಲೆಯರು ಮದುವೆಯ ನಂತರ ಕೆಲಸ ಮುಂದುವರಿಸಲು ಕಷ್ಟಪಡುತ್ತಿರುವುದಾಗಿ ಹೇಳಿದರೆ, ಶೇ. 6.2 ರಷ್ಟು ವಕೀಲೆಯರು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ  ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಶೇ.33.5 ಮಂದಿ ತಾಯ್ತನದ ವಿಚಾರವಾಗಿ ನಿರ್ಧಾರ ಕೈಗೊಳ್ಳಲು ತಾವು ಸಂಕಷ್ಟ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಮದುವೆ, ತಾಯ್ತನ, ಮಕ್ಕಳ ಜವಾಬ್ದಾರಿ ಮುಂತಾದ ಕಾರಣಗಳಿಂದಾಗಿ ವೃತ್ತಿ ಮತ್ತು ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶೇ 34.2 ರಷ್ಟು ಹೇಳಿದ್ದಾರೆ.

ವೇತನ ಸಮಾನತೆಯ ಕೊರತೆ ಇದೆ ಎಂದು ಶೇ. 16.4ರಷ್ಟು ವಕೀಲೆಯರು ಹೇಳಿದರೆ ಅಸಮರ್ಪಕ ಮಾರ್ಗದರ್ಶನದ ಬಗ್ಗೆ ಶೇ 13.7ರಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.

ನ್ಯಾಯಾಧೀಶರು ಮತ್ತಿತರ ನ್ಯಾಯಾಂಗ ಹುದ್ದೆಗಳಿಗೆ ತೆರಳಲು ಶೇ 43.1% ಮಂದಿ ಬಯಸಿದ್ದರೆ ಶೇ 31.2 ಮಂದಿ ಆಸಕ್ತಿ ಇಲ್ಲ ಎಂದಿದ್ದಾರೆ. ಶೇ 25.8 ರಷ್ಟು ವಕೀಲೆಯರು ಇನ್ನೂ ನಿರ್ಧರಿಸಿಲ್ಲ ಎಂದಿದ್ದಾರೆ.

ತಮ್ಮ ಮಗಳಿಗೆ ಇಲ್ಲವೇ ಪರಿಚಿತ ವಲಯದಲ್ಲಿರುವ ಹೆಣ್ಣುಮಕ್ಕಳಿಗೆ ಕಾನೂನು ವೃತ್ತಿ ಬಗ್ಗೆ ಶಿಫಾರಸ್ಸು ಮಾಡುವಿರಾ ಎಂಬ ಪ್ರಶ್ನೆಗೆ ಶೇ 64.1% ಮಂದಿ ಹೌದು ಎಂದು, 20.7% ಮಂದಿ ಬಹುಶಃ ಎಂದು ಹಾಗೂ 15.3% ಮಂದಿ ಇಲ್ಲ ಎಂದು ಹೇಳಿದ್ದಾರೆ.

Also Read
"ಆಯೋಗವು ಸಮೀಕ್ಷೆ ಕೈಪಿಡಿಯಲ್ಲಿ ಸೇರಿಸಿರುವ 1,561 ಜಾತಿಗಳ ವರ್ಗೀಕರಣಕ್ಕೆ ಆಧಾರವೇನು?" ಹೈಕೋರ್ಟ್‌ ಪ್ರಶ್ನೆ

ಕಾರ್ಪೊರೇಟ್‌ ಕಾನೂನು ಕ್ಷೇತ್ರದಲ್ಲಿ ಉದ್ಯೋಗ ಬಯಸುವವರ ಮಹಿಳಾ ವಕೀಲರ ಸಂಖ್ಯೆ ಶೇ 39.6ರಷ್ಟಿದ್ದರೆ, ವ್ಯಾಜ್ಯ ಇಲ್ಲವೇ ನ್ಯಾಯಾಲಯ ಕಲಾಪಗಳಲ್ಲಿ ಪಾಲ್ಗೊಳ್ಳಲು ಬಯಸುವವರ ಪ್ರಮಾಣ ಶೇ 36.1ರಷ್ಟಿದೆ. ನ್ಯಾಯಾಂಗ ವಿಭಾಗಕ್ಕೆ ತೆರಳಲು ಬಯಸುವುದಾಗಿ ಶೇ 13.5 ಮಂದಿ ಹೇಳಿದ್ದಾರೆ, ಕಾನೂನು ಶಿಕ್ಷಣದಂತಹ ವಲಯಕ್ಕೆ ತೆರಳಲು ಶೇ 10.8 ಮಹಿಳಾ ವಕೀಲರು ಬಯಸಿದ್ದಾರೆ.

ಮೊದಲ ತಲೆಮಾರಿನ ವಕೀಲೆಯರಿಗೆ ಕಾರ್ಪೊರೇಟ್‌ ವಲಯದತ್ತ ವಾಲುವ ಪ್ರವೃತ್ತಿ ಹೆಚ್ಚಿದ್ದರೆ (18.4%) ಎರಡನೇ ತಲೆಮಾರಿನ ಮಹಿಳಾ ನ್ಯಾಯವಾದಿಗಳು ನ್ಯಾಯಾಂಗ ಮತ್ತು ಕಾನೂನು ಶಿಕ್ಷಣದತ್ತ ಹೆಚ್ಚು ಒಲವು ತೋರಿದ್ದಾರೆ.

Kannada Bar & Bench
kannada.barandbench.com