ಹತ್ರಾಸ್‌ ಅತ್ಯಾಚಾರ ಪ್ರಕರಣ: ಹೈಕೋರ್ಟ್ ನಿಗಾವಣೆಯಲ್ಲಿ ತನಿಖೆಗೆ ಆಗ್ರಹಿಸಿ ಸಿಜೆಐಗೆ ಪತ್ರ ಬರೆದ 47 ಮಹಿಳಾ ವಕೀಲರು

ಪ್ರಮಾದವೆಸಗಿರುವ ಪೊಲೀಸರು, ಆಡಳಿತಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಪತ್ರದಲ್ಲಿ ಕೋರಲಾಗಿದೆ.
ಹತ್ರಾಸ್‌ ಅತ್ಯಾಚಾರ ಪ್ರಕರಣ: ಹೈಕೋರ್ಟ್ ನಿಗಾವಣೆಯಲ್ಲಿ ತನಿಖೆಗೆ ಆಗ್ರಹಿಸಿ ಸಿಜೆಐಗೆ ಪತ್ರ ಬರೆದ 47 ಮಹಿಳಾ ವಕೀಲರು

ಹತ್ರಾಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಹಾಗೂ ತುರ್ತು ಕ್ರಮ ಕೈಗೊಳ್ಳುವ ದೃಷ್ಟಿಯಿಂದ ಹೈಕೋರ್ಟ್ ನಿಗಾವಣೆಯಲ್ಲಿ ತನಿಖೆ ಹಾಗೂ ವಿಚಾರಣೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಕೊಲಿಜಿಯಂನ ಇತರೆ ನ್ಯಾಯಮೂರ್ತಿಗಳಿಗೆ 47 ಮಹಿಳಾ ವಕೀಲರು ಪತ್ರ ಬರೆದು ಮನವಿ ಮಾಡಿದ್ದಾರೆ.

ಪ್ರಕರಣದಲ್ಲಿ ಸತ್ಯ ಮತ್ತು ಸಾಕ್ಷಿಯನ್ನು ಮರೆಮಾಚಲು ಯತ್ನಿಸಿದ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳ ವಿರುದ್ಧ ತಕ್ಷಣ ತನಿಖೆ ನಡೆಸಿ ಅವರನ್ನು ಅಮಾನತುಗೊಳಿಸುವ ಮೂಲಕ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ಅಗತ್ಯವಾದ ಸಾಂಸ್ಥಿಕ ಕಾರ್ಯವಿಧಾನ ಮತ್ತು ಮಾರ್ಗಸೂಚಿ ರಚಿಸುವುದರಿಂದ ಮುಂದೆ ನಮ್ಮ ದೇಶದಲ್ಲಿ ಸಂತ್ರಸ್ತೆ ಅಥವಾ ಅವರ ಕುಟುಂಬ ಸದಸ್ಯರು ಯಾವುದೇ ತೆರನಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಎದುರಿಸುವುದಿಲ್ಲ, ಈ ಬಗೆಯ ದುರ್ವಿಧಿಯನ್ನು ಎದುರಿಸುವ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ವಿವರಿಸಿದ್ದಾರೆ.

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ದಲಿತ ಯುವತಿಯನ್ನು ಬಲಿ ಪಡೆದ ಘಟನೆಗೆ ಸಂಬಂಧಿಸಿದಂತೆ ಘಟನಾವಳಿಗಳು ತಿರುವು ಪಡೆಯುತ್ತಿರುವುದನ್ನು ಕಂಡು ಅತ್ಯಂತ ವಿಷಾದ ಮತ್ತು ಸಂಕಟದಿಂದ ಪತ್ರ ಬರೆದಿದ್ದೇವೆ.
ಸಿಜೆಐ ಮತ್ತು ಸಹೋದ್ಯೋಗಿ ನ್ಯಾಯಮೂರ್ತಿಗಳಿಗೆ ಬರೆದ ಪತ್ರ

ಸಂತ್ರಸ್ತೆ ಸೆಪ್ಟೆಂಬರ್ 29ರಂದು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಬಳಿಕ ಪೊಲೀಸರು ನಡೆದುಕೊಂಡಿರುವ ರೀತಿಯು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ದೇಶದ ಮಾನವೀಯತೆಯ ಬಗ್ಗೆ ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ ಎಂದು ವಕೀಲೆಯರು ವಿವರಿಸಿದ್ದಾರೆ.

Also Read
ಹತ್ರಾಸ್ ಅತ್ಯಾಚಾರ ಪ್ರಕರಣ: ವಿಚಾರಣೆಯನ್ನು ಸಿಬಿಐ ಅಥವಾ ಎಸ್‌ಐಟಿಗೆ ಹಸ್ತಾಂತರಿಸಲು ಸುಪ್ರೀಂ ಕೋರ್ಟ್‌ನಲ್ಲಿ ಮನವಿ

ಸಂತ್ರಸ್ತೆಯ ಪೋಷಕರು ನೋವಿನಿಂದ ಎಚ್ಚೆತ್ತುಕೊಳ್ಳುತ್ತಿರುವ ನಡುವೆಯೇ ಉತ್ತರ ಪ್ರದೇಶ ಪೊಲೀಸ ಕ್ರಮವು ಎಲ್ಲರನ್ನೂ ಕ್ರೋಧಗೊಳ್ಳುವಂತೆ ಮಾಡಿದೆ… ಸಂತ್ರಸ್ತೆಯ ಪೋಷಕರ ಅನುಮತಿ ಪಡೆಯದೆಯೇ ಆಕೆಯ ಶವ ಸಂಸ್ಕಾರವನ್ನು ಪೊಲೀಸರು ನಡೆಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಬರೆದ ಪತ್ರದಲ್ಲಿ ವಕೀಲೆಯರು ವಿವರಿಸಿದ್ದಾರೆ.

Kannada Bar & Bench
kannada.barandbench.com