ಲೋಕಸಭಾ ಚುನಾವಣೆ ವೇಳೆ ₹4.8 ಕೋಟಿ ಜಪ್ತಿ: ಸಂಸದ ಡಾ. ಸುಧಾಕರ್‌ ವಿರುದ್ಧದ ನ್ಯಾಯಿಕ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಲೋಕಸಭೆ ಚುನಾವಣೆ ವೇಳೆ ಆಯೋಗದ ಅಧಿಕಾರಿಗಳು ಗೋವಿಂದಪ್ಪ ಅವರ ಮನೆಯಿಂದ 4.8 ಕೋಟಿ ರೂಪಾಯಿ ಹಣ ಜಪ್ತಿ ಮಾಡಿದ್ದರು. ಈ ಹಣ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶದಿಂದ ಇರಲಿಸಲಾಗಿತ್ತು ಎಂದು ಆರೋಪಿಸಲಾಗಿತ್ತು.
Dr. K Sudhakar and Karnataka HC
Dr. K Sudhakar and Karnataka HC
Published on

ಲೋಕಸಭೆ ಚುನಾವಣೆ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾದಾವರ ಗೋವಿಂದಪ್ಪ ಅವರ ಮನೆಯಲ್ಲಿ 4.8 ಕೋಟಿ ರೂಪಾಯಿ ಹಣವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಜಪ್ತಿ ಮಾಡಿದ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ. ಕೆ ಸುಧಾಕರ್ ವಿರುದ್ಧ ವಿಚಾರಣಾಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಆರೋಪಪಟ್ಟಿ ರದ್ದುಪಡಿಸುವಂತೆ ಕೋರಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರ ಪರ ಹಿರಿಯ ವಕೀಲರಾದ ಬಿ ವಿ ಆಚಾರ್ಯ ಮತ್ತು ಪ್ರಭುಲಿಂಗ ನಾವದಗಿ ಮತ್ತು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರ ವಾದ ಆಲಿಸಿದ ಪೀಠವು ಸಂಸದ ಡಾ.ಕೆ ಸುಧಾಕರ್ ವಿರುದ್ಧದ ಆರೋಪಪಟ್ಟಿ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿದೆ.

Also Read
ಜಾತಿ ನಿಂದನೆ ಪ್ರಕರಣ: ಸಚಿವ ಸುಧಾಕರ್ ವಿರುದ್ಧದ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

ಪ್ರಕರಣದ ಹಿನ್ನೆಲೆ: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಹಿಂದಿನ ದಿನ ಚುನಾವಣಾ ಆಯೋಗದ ಅಧಿಕಾರಿಗಳು ಗೋವಿಂದಪ್ಪ ಅವರ ಮನೆಯಿಂದ 4.8 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದರು. ಈ ಹಣ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಉದ್ದೇಶದಿಂದ ಇರಲಿಸಲಾಗಿತ್ತು ಎಂದು ಆರೋಪಿಸಲಾಗಿತ್ತು.

ಇದೇ ವಿಚಾರವಾಗಿ ಚುನಾವಣಾ ನೀತಿ ಸಂಹಿತೆ ಜಾರಿಯ ರಾಜ್ಯ ನೋಡಲ್ ಅಧಿಕಾರಿಯಾಗಿದ್ದ ಮನೀಶ್ ಮೌದ್ಗಿಲ್ ಅವರಿಗೆ ಸುಧಾಕರ್ ಅವರು ವಾಟ್ಸಾಪ್‌ ಮೆಸೇಜ್ ಮಾಡಿದ್ದರು ಎನ್ನಲಾಗಿತ್ತು. ಪ್ರಕರಣದ ಕುರಿತು ಚುನಾವಣಾ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು, ನೆಲಮಂಗಲ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಸುಧಾಕರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

Kannada Bar & Bench
kannada.barandbench.com