[ಐದು ವರ್ಷದ ಎಲ್‌ಎಲ್‌ಬಿ ಸೆಮಿಸ್ಟರ್‌ ಪರೀಕ್ಷೆ] ಕೆಎಸ್‌ಎಲ್‌ಯು ಸುತ್ತೋಲೆ ಎತ್ತಿ ಹಿಡಿದ ಹೈಕೋರ್ಟ್‌, ಅರ್ಜಿಗಳು ವಜಾ

ಕೆ ಪಿ ಪ್ರಭುದೇವ್‌ ಹಾಗೂ ರಿಷಬ್‌ ಟ್ರಕ್‌ರಾವೊ ಪ್ರತ್ಯೇಕವಾಗಿ ಸಲ್ಲಿಸಿದ್ದಎರಡು ರಿಟ್‌ ಮನವಿಗಳನ್ನು ನ್ಯಾ. ಅಶೋಕ್‌ ಎಸ್‌. ಕಿಣಗಿ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದ್ದು, ನ್ಯಾಯಮೂರ್ತಿಗಳು ಸಂಕ್ಷಿಪ್ತ ತೀರ್ಪು ಓದಿದರು.
KSLU

KSLU

ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆಫ್‌ಲೈನ್‌ ಮೂಲಕ ಪರೀಕ್ಷೆ ನಡೆಸುವ ಸಂಬಂಧ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು (ಕೆಎಸ್‌ಎಲ್‌ಯು) ಡಿಸೆಂಬರ್‌ 1ರಂದು ಹೊರಡಿಸಿದ್ದ ಸುತ್ತೋಲೆ ಪ್ರಶ್ನಿಸಿದ್ದ ಎರಡು ಮನವಿಗಳನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಜಾ ಮಾಡಿ ಮಹತ್ವದ ತೀರ್ಪು ಹೊರಡಿಸಿದೆ.

ಕೆ ಪಿ ಪ್ರಭುದೇವ್‌ ಸೇರಿ ಒಂಭತ್ತು ಮಂದಿ ಹಾಗೂ ರಿಷಬ್‌ ಟ್ರಕ್‌ರಾವೊ ಸೇರಿದಂತೆ 65 ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದಎರಡು ರಿಟ್‌ ಮನವಿಗಳನ್ನು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದ್ದು, ನ್ಯಾಯಮೂರ್ತಿಗಳು ಸಂಕ್ಷಿಪ್ತವಾಗಿ ಮಾತ್ರ ತೀರ್ಪು ಓದಿದರು.

ಕಳೆದ ಸೋಮವಾರ ಕೆಎಸ್‌ಎಲ್‌ಯು, ಅರ್ಜಿದಾರರು, ಭಾರತೀಯ ವಕೀಲರ ಪರಿಷತ್‌ (ಬಿಸಿಐ), ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಮತ್ತು ರಾಜ್ಯ ಸರ್ಕಾರದ ವಾದವನ್ನು ಸುದೀರ್ಘವಾಗಿ ಆಲಿಸಿದ್ದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.

ಕೆಎಸ್‌ಎಲ್‌ಯು ಪ್ರತಿನಿಧಿಸಿದ್ದ ವಕೀಲರು “ಡಿಸೆಂಬರ್‌ 15ರಿಂದ ಆರಂಭವಾಗಿರುವ ಪರೀಕ್ಷೆಗೆ ಶೇ. 70ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪರೀಕ್ಷೆ ನಡೆಸದಿದ್ದರೆ ವಿದ್ಯಾರ್ಥಿಗಳ ಪದವಿಯನ್ನು ಬಿಸಿಐ ಪರಿಗಣಿಸುವುದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹೊರಡಿಸಿರುವ ತೀರ್ಪು ಮತ್ತು ಬಿಸಿಐ ಸುತ್ತೋಲೆಯನ್ನು ಉಲ್ಲೇಖಿಸಿದರು. ಕಾಲೇಜುಗಳು ನಡೆಸಿರುವ ಆನ್‌ಲೈನ್‌ ತರಗತಿಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸಿದ್ದರು” ಎಂದು ಪೀಠದ ಗಮನಸೆಳೆದಿದ್ದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ನಡೆಸಲು ವಿಶ್ವವಿದ್ಯಾಲಯದ ಉದ್ದೇಶಿಸಿದ್ದ ಆಫ್‌ಲೈನ್‌ ಪರೀಕ್ಷೆ ಕುರಿತಾದ ಅಧಿಸೂಚನೆಯನ್ನು ಧಾರವಾಡ ಪೀಠವು ವಜಾ ಮಾಡಿದೆ. ಹೀಗಾಗಿ, ಮೂರು ಮತ್ತು ಐದು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ಗೆ ಯಾವುದೇ ವ್ಯತ್ಯಾಸವಿಲ್ಲ” ಎಂದಿದ್ದರು.

Also Read
ಬಗೆಹರಿಯದ ಐದು ವರ್ಷಗಳ ಎಲ್‌ಎಲ್‌ಬಿ ಶಿಕ್ಷಣದ ಆಫ್‌ಲೈನ್‌ ಪರೀಕ್ಷೆ ಗೊಂದಲ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಬಿಸಿಐ ಪರ ವಕೀಲರು “ಯಾವುದಾದರೂ ವಿಧಾನದಲ್ಲಿ ಪರೀಕ್ಷೆ ನಡೆಸುವಂತೆ ಬಿಸಿಐ ಹೊರಡಿಸಿರುವ ಸುತ್ತೋಲೆಯನ್ನು ಅರ್ಜಿದಾರರು ಪ್ರಶ್ನೆ ಮಾಡಿಲ್ಲ. ಧಾರವಾಡ ಪೀಠವು ಬಿಸಿಐ ಸುತ್ತೋಲೆಯನ್ನು ವಜಾ ಮಾಡಿಲ್ಲ. ಬದಲಿಗೆ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಹೇಳಿದೆ. ಹೀಗಾಗಿ, ಈ ಕ್ಷಣಕ್ಕೂ ಸುತ್ತೋಲೆಯು ಅಸ್ತಿತ್ವದಲ್ಲಿದ್ದು, ಯಾವುದಾದರೂ ವಿಧಾನದಲ್ಲಿ ವಿಶ್ವವಿದ್ಯಾಲಯ ಪರೀಕ್ಷೆ ನಡೆಸಬೇಕಿದೆ” ಎಂದಿದ್ದರು.

ಕೆಎಸ್‌ಎಲ್‌ಯು ಕುರಿತು ಪೀಠವು “ಬೆಂಗಳೂರು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಯೋಚಿಸಬೇಡಿ. ರಾಜ್ಯದ ವಿವಿಧೆಡೆ ಇರುವ ವಿದ್ಯಾರ್ಥಿಗಳನ್ನು ನೋಡಿ, ಇಂಟರ್‌ನೆಟ್‌ ಸಮಸ್ಯೆಯಿಂದ ಅವರಿಗೆ ಆನ್‌ಲೈನ್‌ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲದಿರಬಹುದು” ಎಂದಿತ್ತು.

Related Stories

No stories found.
Kannada Bar & Bench
kannada.barandbench.com