ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಫ್‌ಲೈನ್ ಮೂಲಕ ಪರೀಕ್ಷೆ ನಡೆಸುವ ಸಂಬಂಧ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ನಿರ್ಧಾರ ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಸೋಮವಾರ ಕರ್ನಾಟಕ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಕೆಎಸ್‌ಎಲ್‌ಯು ಡಿಸೆಂಬರ್ 1ರಂದು ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಕೆ ಪಿ ಪ್ರಭುದೇವ್ ಮತ್ತಿತರರು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಕೆಎಸ್‌ಎಲ್‌ಯು, ಅರ್ಜಿದಾರರು, ಭಾರತೀಯ ವಕೀಲರ ಪರಿಷತ್ (ಬಿಸಿಐ) ಪರ ವಕೀಲರ ವಾದವನ್ನು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ನೇತೃತ್ವದ ಏಕಸದಸ್ಯ ಪೀಠವು ಆಲಿಸಿತು.
ಕೆಎಸ್‌ಎಲ್‌ಯು ಪ್ರತಿನಿಧಿಸಿದ್ದ ವಕೀಲರು ಡಿಸೆಂಬರ್ 15ರಿಂದ ಆರಂಭವಾಗಿರುವ ಪರೀಕ್ಷೆಗೆ ಶೇ. 70ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಪರೀಕ್ಷೆ ನಡೆಸದಿದ್ದರೆ ವಿದ್ಯಾರ್ಥಿಗಳ ಪದವಿಯನ್ನು ಬಿಸಿಐ ಪರಿಗಣಿಸುವುದಿಲ್ಲ ಎಂಬುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೊರಡಿಸಿರುವ ತೀರ್ಪು ಮತ್ತು ಬಿಸಿಐ ಸುತ್ತೋಲೆಯನ್ನು ಉಲ್ಲೇಖಿಸಿದರು. ಕಾಲೇಜುಗಳು ನಡೆಸಿರುವ ಆನ್‌ಲೈನ್ ತರಗತಿಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದರು.
ಇದಕ್ಕೆ ಪೀಠವು “ಬೆಂಗಳೂರು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಯೋಚಿಸಬೇಡಿ. ರಾಜ್ಯದ ವಿವಿಧೆಡೆ ಇರುವ ವಿದ್ಯಾರ್ಥಿಗಳನ್ನು ನೋಡಿ, ಇಂಟರ್‌ನೆಟ್ ಸಮಸ್ಯೆಯಿಂದ ಅವರಿಗೆ ಆನ್‌ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲದಿರಬಹುದು” ಎಂದಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಎರಡು ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ನಡೆಸಲು ವಿಶ್ವವಿದ್ಯಾಲಯದ ಉದ್ದೇಶಿಸಿದ್ದ ಆಫ್‌ಲೈನ್ ಪರೀಕ್ಷೆ ಕುರಿತಾದ ಅಧಿಸೂಚನೆಯನ್ನು ಧಾರವಾಡ ಪೀಠವು ವಜಾ ಮಾಡಿದೆ. ಹೀಗಾಗಿ, ಮೂರು ಮತ್ತು ಐದು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ಗೆ ಯಾವುದೇ ವ್ಯತ್ಯಾಸವಿಲ್ಲ” ಎಂದರು.
ಬಿಸಿಐ ಪ್ರತಿನಿಧಿಸಿದ್ದ ವಕೀಲ ಶ್ರೀಧರ್ ಪ್ರಭು ಅವರು “ಯಾವುದಾದರೂ ವಿಧಾನದಲ್ಲಿ ಪರೀಕ್ಷೆ ನಡೆಸುವಂತೆ ಬಿಸಿಐ ಹೊರಡಿಸಿರುವ ಸುತ್ತೋಲೆಯನ್ನು ಅರ್ಜಿದಾರರು ಪ್ರಶ್ನೆ ಮಾಡಿಲ್ಲ. ಧಾರವಾಡ ಪೀಠವು ಬಿಸಿಐ ಸುತ್ತೋಲೆಯನ್ನು ವಜಾ ಮಾಡಿಲ್ಲ. ಬದಲಿಗೆ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಹೇಳಿದೆ. ಹೀಗಾಗಿ, ಈ ಕ್ಷಣಕ್ಕೂ ಸುತ್ತೋಲೆಯು ಅಸ್ತಿತ್ವದಲ್ಲಿದ್ದು, ಯಾವುದಾದರೂ ವಿಧಾನದಲ್ಲಿ ವಿಶ್ವವಿದ್ಯಾಲಯ ಪರೀಕ್ಷೆ ನಡೆಸಬೇಕಿದೆ” ಎಂದರು.
ಸುದೀರ್ಘವಾಗಿ ಎಲ್ಲರ ವಾದವನ್ನು ಆಲಿಸಿದ ಪೀಠವು “ಬಹುತೇಕ ವಿದ್ಯಾರ್ಥಿಗಳ ಬಳಿ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಿಲ್ಲ. ಅಲ್ಲದೇ, ಅವರಿಗೆ ಇಂಟರ್‌ನೆಟ್ ಸೌಲಭ್ಯವೂ ಇಲ್ಲ. ಅರ್ಜಿದಾರರು ಸೇರಿದಂತೆ ಬಹುತೇಕ ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾದ ರೀತಿಯಲ್ಲಿ ತರಗತಿಗಳನ್ನು ನಡೆಸಲಾಗಿಲ್ಲ” ಎಂದು ಅಭಿಪ್ರಾಯಪಟ್ಟಿತು. ತೀರ್ಪನ್ನು ಕಾಯ್ದಿರಿಸಿತು.