ಭಾರತೀಯ ವಕೀಲರ ಪರಿಷತ್ (ಬಿಸಿಐ) ಕಳಪೆ ಗುಣಮಟ್ಟದ್ದು ಎಂದು ಗುರುತಿಸಿರುವ ದೇಶದ ಸುಮಾರು 500 ಕಾನೂನು ಶಿಕ್ಷಣ ಸಂಸ್ಥೆಗಳ ದೀಢೀರ್ ತಪಾಸಣೆಯನ್ನು ಪರಿಣತರ ತಂಡಗಳು ನಡೆಸಲಿವೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಹೇಳಿದ್ದಾರೆ. ಕೆಲ ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಹಾಗೂ ಶಿಕ್ಷಣ ತಜ್ಞರನ್ನು ಈ ತಂಡಗಳು ಒಳಗೊಳ್ಳಲಿದ್ದು ದಿಢೀರ್ ತಪಾಸಣೆ ಕೈಗೊಳ್ಳಲಿವೆ.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಈ ವಿಚಾರ ಬಹಿರಂಗಪಡಿಸಿದ್ದಾರೆ. “ಪರೀಕ್ಷೆಗಳಲ್ಲಿನ ಮಾನದಂಡಗಳು ಮತ್ತು ಕಾನೂನು ಕಾಲೇಜುಗಳ ಕಟ್ಟುನಿಟ್ಟಾದ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದ ವ್ಯವಸ್ಥೆ ಪುನರುಜ್ಜೀವನಗೊಳಿಸುವ ಸಲುವಾಗಿ ಬಿಸಿಐ ದೇಶದ ಸುಮಾರು 500 ಕಾನೂನು ಸಂಸ್ಥೆಗಳನ್ನು ಗುರುತಿಸಿದೆ. ಅಂತಹ ಸಂಸ್ಥೆಗಳಿಗೆ ಕೆಲ ನಿವೃತ್ತ ನ್ಯಾಯಮೂರ್ತಿಗಳೂ, ಹಿರಿಯ ವಕೀಲರು ಹಾಗೂ ಶಿಕ್ಷಣ ತಜ್ಞರನ್ನು ಒಳಗೊಂಡ ತಂಡ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಯಾವುದೇ ಸಂಸ್ಥೆಯು ಗುಣಮಟ್ಟಕ್ಕಿಂತ ಕೆಳಗಿರುವುದು ಕಂಡುಬಂದರೆ ಅಂದರೆ ಸಾಕಷ್ಟು ಸಂಖ್ಯೆಯ ಅಧ್ಯಾಪಕರು ಇಲ್ಲವೇ ಮೂಲಸೌಕರ್ಯದ ಕೊರತೆ ಇರುವುದು ಕಂಡುಬಂದರೆ ಬಿಸಿಐನ ಕಾನೂನು ಶಿಕ್ಷಣ ಸಮಿತಿ ಅಂತಹ ಸಂಸ್ಥೆಗಳನ್ನು ಮುಚ್ಚಲು ತಕ್ಷಣ ಕ್ರಮ ಕೈಗೊಳ್ಳಲಿದೆ” ಎಂದು ಅವರು ತಿಳಿಸಿದರು.
ಭಾರತೀಯ ವಕೀಲರ ಪರಿಷತ್ ಮತ್ತು ಟ್ವಿಂಕಲ್ ರಾಹುಲ್ ಮಂಗಾಂವ್ಕರ್ ಇನ್ನಿತರರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಾಡಿರುವ ಅವಲೋಕನಗಳನ್ನು ಪರಿಶೀಲಿಸಲು ಹಿರಿಯ ವಕೀಲರು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಮಾಜಿ ನ್ಯಾಯಮೂರ್ತಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ರಿಜಿಜು ಹೇಳಿದರು.
ಆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್" ಕಾನೂನು ಕಾಲೇಜುಗಳ ಉತ್ತಮ ಹೊಣೆಗಾರಿಕೆ ಖಚಿತಪಡಿಸಿಕೊಳ್ಳಲು ಹಾಗೂ ಸೂಕ್ತ ಮಾನದಂಡಗಳನ್ನು ಅನುಸರಿಸುವುದನ್ನು ಅರಿಯಲು ಬಿಸಿಐ ಮೇಲ್ವಿಚಾರಣೆ ನಡೆಸಬೇಕು" ಎಂದು ತಿಳಿಸಿತ್ತು.