ದೇಶದಲ್ಲಿ ಖಾಲಿ ಇರುವ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗಳ ಸಂಖ್ಯೆ 405: ಕೇಂದ್ರ ಕಾನೂನು ಸಚಿವ ರಿಜಿಜು

ಕರ್ನಾಟಕ ಹೈಕೋರ್ಟ್‌ಗೆ ಮಂಜೂರಾದ ಒಟ್ಟು 62 ಹುದ್ದೆಗಳಲ್ಲಿ ಒಟ್ಟು 17 ಹುದ್ದೆಗಳು ಖಾಲಿ ಇವೆ.
Judiciary Watch
Judiciary Watchramesh sogemane
Published on

ದೇಶದ 25 ಹೈಕೋರ್ಟ್‌ಗಳಲ್ಲಿ ಮಂಜೂರಾದ 1,104 ನ್ಯಾಯಮೂರ್ತಿ ಹುದ್ದೆಗಳಲ್ಲಿ 405 ಹುದ್ದೆಗಳು ಖಾಲಿ ಇವೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್‌ ರಿಜಿಜು ಲೋಕಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

ಅಂತೆಯೇ ಕರ್ನಾಟಕ ಹೈಕೋರ್ಟ್‌ಗೆ ಮಂಜೂರಾದ ಒಟ್ಟು 62 ಹುದ್ದೆಗಳಲ್ಲಿ, 17 ಹುದ್ದೆಗಳು ಖಾಲಿ ಇದ್ದು 8 ಖಾಯಂ ನ್ಯಾಯಮೂರ್ತಿಗಳು ಹಾಗೂ 9 ಹೆಚ್ಚುವರಿ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಪ್ರಸ್ತುತ ಒಟ್ಟು 45 ನ್ಯಾಯಮೂರ್ತಿಗಳು ಸೇವೆ ಸಲ್ಲಿಸುತ್ತಿದ್ದಾರೆ.

Also Read
[ಸಂಸತ್ ಅವಲೋಕನ] ಗ್ರಾಹಕ ನ್ಯಾಯಾಲಯಗಳ ಖಾಲಿ ಹುದ್ದೆ, ರಾಷ್ಟ್ರೀಯ ದಾವೆ ನೀತಿ, ಚುನಾವಣೆ ವೇಳೆ ದ್ವೇಷದ ಭಾಷಣ…

ಕಾಂಗ್ರೆಸ್ ಸಂಸದ ಎನುಮುಲ ರೇವಂತ್ ರೆಡ್ಡಿ ಮತ್ತು ವೈಎಸ್ಆರ್ ಕಾಂಗ್ರೆಸ್ ಸಂಸದ ಚಂದ್ರಶೇಖರ್ ಬೆಲ್ಲಾನ ಅವರ ಪ್ರಶ್ನೆಗಳಿಗೆ ಕಾನೂನು ಸಚಿವರು ಉತ್ತರಿಸಿದರು. ಕುತೂಹಲಕಾರ ಅಂಶವೆಂದರೆ, 2014 ರಿಂದ, ವಿವಿಧ ಹೈಕೋರ್ಟ್‌ಗಳಲ್ಲಿ ಒಟ್ಟು 198 ಹೊಸ ಹುದ್ದೆಗಳನ್ನು ಸೃಜಿಸಲಾಗಿದೆ ಎಂದು ಕೂಡ ಅವರು ಇದೇ ವೇಳೆ ಮಾಹಿತಿ ನೀಡಿದರು.

Also Read
ನ್ಯಾಯಮಂಡಳಿ ಹುದ್ದೆಗಳ ಭರ್ತಿ ವಿಚಾರವನ್ನು ಅಧಿಕಾರಶಾಹಿ ಲಘುವಾಗಿ ಪರಿಗಣಿಸಿದೆ: ಸುಪ್ರೀಂ ಕೋರ್ಟ್ ಅಸಮಾಧಾನ

ಈ ಇಬ್ಬರೂ ಸಂಸದರು ಉನ್ನತ ನ್ಯಾಯಾಂಗದ ರಚನೆ ದೇಶದ ದೇಶದ ಸಾಮಾಜಿಕ-ಆರ್ಥಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವಂತೆ ನೋಡಿಕೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆಯೇ ಎಂಬ ಪ್ರಶ್ನೆಯನ್ನು ಕೂಡ ಕೇಳಿದ್ದರು. ಅದಕ್ಕೆ ಸಚಿವರ ಉತ್ತರ ಹೀಗಿದೆ:

“ಹೈಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಯನ್ನು ಸಂವಿಧಾನದ 217 ಮತ್ತು 224ರ ಅಡಿಯಲ್ಲಿ ಮಾಡಲಾಗಿದ್ದು, ಇದು ಯಾವುದೇ ಜಾತಿ ಅಥವಾ ವರ್ಗದ ವ್ಯಕ್ತಿಗಳಿಗೆ ಮೀಸಲಾತಿ ಒದಗಿಸುವುದಿಲ್ಲ. ಆದರೂ, ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸರ್ಕಾರ ಸಾಮಾಜಿಕ ವೈವಿಧ್ಯತೆಗೆ ಬದ್ಧವಾಗಿದೆ. ನ್ಯಾಯಮೂರ್ತಿಗಳ ನೇಮಕಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುವಾಗ, ಸಾಮಾಜಿಕ ವೈವಿಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಸೇರಿದ ಅಭ್ಯರ್ಥಿಗಳನ್ನು ಸೂಕ್ತವಾಗಿ ಪರಿಗಣಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತಿದೆ" ಎಂದರು.

Kannada Bar & Bench
kannada.barandbench.com