ಜಾರಿ ನಿರ್ದೇಶನಾಲಯದ ಪ್ರಕರಣಗಳಲ್ಲಿ 51 ಸಂಸದರು, 71 ಶಾಸಕರು ಆರೋಪಿಗಳು: ಸುಪ್ರೀಂ ಕೋರ್ಟ್‌ಗೆ ಅಮಿಕಸ್ ಕ್ಯೂರಿ ಮಾಹಿತಿ

ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧ ಸಿಬಿಐ ದಾಖಲಿಸಿರುವ ಒಟ್ಟು 121 ಪ್ರಕರಣಗಳ ವಿಚಾರಣೆ ಬಾಕಿ ಇದೆ.
Supreme Court
Supreme Court
Published on

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿ ತಾನು ದಾಖಲಿಸಿರುವ ಪ್ರಕರಣಗಳಲ್ಲಿ ಹಾಲಿ ಮತ್ತು ಮಾಜಿಯಾದ 51 ಸಂಸದರು, 71 ಶಾಸಕರು ಆರೋಪಿಗಳಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ ಹೇಳಿದೆ [ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣ].

ಅವರಲ್ಲಿ ಎಷ್ಟು ಮಂದಿ ಹಾಲಿ ಸಂಸದರು/ಶಾಸಕರು ಮತ್ತು ಎಷ್ಟು ಮಂದಿ ಮಾಜಿ ಸಂಸದರು/ಶಾಸಕರು ಎಂಬುದನ್ನು ವರದಿ ಸ್ಪಷ್ಟಪಡಿಸಿಲ್ಲ. ಸಿಬಿಐ ಸಲ್ಲಿಸಿರುವ ಇದೇ ರೀತಿಯ ವರದಿಯಲ್ಲಿ ಹಾಲಿ ಮತ್ತು ಮಾಜಿ ಸಂಸದರು ಮತ್ತು ಶಾಸಕರ ವಿರುದ್ಧ ಒಟ್ಟು 121 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಹೇಳಲಾಗಿದೆ. ಸಿಬಿಐ ಪ್ರಕರಣಗಳಲ್ಲಿ ಹೆಸರಿರುವ ಸಂಸದರ ಸಂಖ್ಯೆ 51. ಅವರಲ್ಲಿ 14 ಮಂದಿ ಹಾಲಿ ಸದಸ್ಯರು 37 ಮಂದಿ ಮಾಜಿ ಸದಸ್ಯರು ಹಾಗೂ 5 ಮಂದಿ ಮೃತಪಟ್ಟಿದ್ದಾರೆ.

ಅದೇ ರೀತಿ, 112 ಶಾಸಕರು ಸಿಬಿಐನ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ 34 ಮಂದಿ ಅಧಿಕಾರರೂಢರಾಗಿದ್ದು, 78 ಮಾಜಿ ಸದಸ್ಯರು ಇದ್ದಾರೆ. ಪ್ರಕರಣ ಎದುರಿಸುತ್ತಿದ್ದ  9 ಮಂದಿ ಮೃತಪಟ್ಟಿದ್ದಾರೆ. ಇನ್ನು ಸಿಬಿಐ  ಶಾಸಕರ ವಿರುದ್ಧ ತನಿಖೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ 37.

Also Read
ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣ: ಅಮಿಕಸ್‌ ಕ್ಯೂರಿಗೆ ಪ್ರಕರಣ ಹಿಂಪಡೆದ ಪಟ್ಟಿ ನೀಡಲು ಹೈಕೋರ್ಟ್‌ ಆದೇಶ

ಸಿಬಿಐ ಮತ್ತು ಇಡಿ ವರದಿಯಲ್ಲಿ ಉಲ್ಲೇಖಿಸಲಾದ ಈ ಅಂಕಿಅಂಶಗಳನ್ನು ಪ್ರಕರಣದಲ್ಲಿ ಅಮಿಕಸ್‌ ಕ್ಯೂರಿಯಾಗಿರುವ  ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಮತ್ತೊಂದು ವರದಿಯಲ್ಲಿ ವಿವರವಾಗಿ ವಿವರಿಸಲಾಗಿದೆ.

ಜನಪ್ರತಿನಿಧಿಗಳ ವಿರುದ್ಧ ವಿಚಾರಣೆಗೆ ಬಾಕಿ ಇರುವ ಮತ್ತು ಮಂಜೂರಾತಿಗೆ ಸಂಬಂಧಿಸಿದ ಸ್ಥಿತಿಗತಿ ವರದಿಯನ್ನು ಹಾಗೂ ವಿಚಾರಣೆಗೆ ವಿಳಂಬವಾಗುತ್ತಿರುವದಕ್ಕೆ ಕಾರಣಗಳನ್ನು ನೀಡುವಂತೆ ಅಮಿಕಸ್‌ ವಿಜಯ್‌ ಅವರನ್ನು ನ್ಯಾಯಾಲಯ ಕೇಳಿತ್ತು.  ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ತ್ವರಿತ ವಿಚಾರಣೆ ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ವಿವರ ಕೇಳಿತ್ತು.

ಘೋರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಸಂಸದ ಅಥವಾ ಶಾಸಕತ್ವದಿಂದ ಅನರ್ಹಗೊಳಿಸುವ ಅವಧಿಯನ್ನು ಶಿಕ್ಷೆಯ ನಂತರ ಬಿಡುಗಡೆಯಾದ ಆರು ವರ್ಷಗಳ ಅವಧಿಗೆ ಮಾತ್ರ ಸೀಮಿತಗೊಳಿಸುವ ಜನಪ್ರತಿನಿಧಿ ಕಾಯಿದೆಯ ನಿಯಮಾವಳಿಯ ಸಾಂವಿಧಾನಿಕ ಸಿಂಧುತ್ವವನ್ನು ಅರ್ಜಿ ಪ್ರಶ್ನಿಸಿದೆ.

Kannada Bar & Bench
kannada.barandbench.com