ಮಹಾರಾಷ್ಟ್ರ ಮತ್ತು ಗೋವಾದ ಹಾಲಿ ಅಥವಾ ಮಾಜಿ ಸಂಸದರು, ಶಾಸಕರ ವಿರುದ್ಧದ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ತಾನು ತಡೆಯಾಜ್ಞೆ ವಿಧಿಸಿರುವ ಕ್ರಿಮಿನಲ್ ಪ್ರಕರಣಗಳ ವಿವರ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್ ಶುಕ್ರವಾರ ತನ್ನ ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.
ಈ ಕುರಿತಂತೆ ಸ್ವಯಂ ಪ್ರೇರಿತ ವಿಚಾರಣೆ ನಡೆಸಲಿರುವ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ವಿಚಾರಣೆಗಾಗಿ ತಾವು ಹಾಗೂ ನ್ಯಾ. ಎಸ್ ಕೆ ಶಿಂಧೆ ಅವರನ್ನು ಒಳಗೊಂಡ ವಿಶೇಷ ಪೀಠ ರಚಿಸಿದರು. ತಾನು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ತಡೆ ನೀಡಿರುವ ಹಾಲಿ ಮತ್ತು ಮಾಜಿ ಶಾಸಕರನ್ನು ಒಳಗೊಂಡ ಬಾಕಿ ಇರುವ ಎಲ್ಲಾ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ನ್ಯಾಯಮೂರ್ತಿಗಳು ಕೇಳಿದರು.
ಅಂತಹ ಪ್ರಕರಣಗಳ ವಿವರ ದೊರೆತ ಬಳಿಕ ಪ್ರಕರಣಗಳಲ್ಲಿ ನೀಡಿದ ತಡೆಯಾಜ್ಞೆ ಮುಂದುವರೆಸಬೇಕೆ ಅಥವಾ ಬೇಡವೇ ಎಂಬುದನ್ನು ಹೈಕೋರ್ಟ್ ನಿರ್ಧರಿಸಲಿದೆ. ಶಾಸಕರ ವಿರುದ್ಧದ ವಿಚಾರಣೆಯ ಪ್ರಗತಿ ಮೇಲ್ವಿಚಾರಣೆ ಮಾಡುವ ಸಲುವಾಗಿ ಸಿ ಜೆ ದತ್ತಾ ಅವರು ಸ್ವಯಂಪ್ರೇರಿತವಾಗಿ ವಿಚಾರಣೆ ಆರಂಭಿಸಿದ್ದಾರೆ. ವಿವಿಧ ಕಾಯಿದೆಗಳ ಅಡಿಯಲ್ಲಿ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಸಂಬಂಧಿಸಿದಂತೆ ಉಂಟಾಗುತ್ತಿರುವ ಅತಿಯಾದ ವಿಳಂಬ ಕುರಿತು ಸೆಪ್ಟೆಂಬರ್ 2020ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಮಧ್ಯೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಮತ್ತು ಬಾಂಬೆ ಹೈಕೋರ್ಟ್‌ನ ವಿವಿಧ ಪೀಠಗಳಲ್ಲಿ ಸುಮಾರು 550 ಕ್ರಿಮಿನಲ್ ಪ್ರಕರಣಗಳು ಬಾಕಿ ಉಳಿದಿವೆ ಎಂದು ಮೂಲಗಳು ʼಬಾರ್ & ಬೆಂಚ್ʼಗೆ ತಿಳಿಸಿವೆ.
ಇದರಲ್ಲಿ 51 ಪ್ರಕರಣಗಳು ಹೈಕೋರ್ಟ್‌ನಲ್ಲಿಯೇ ಬಾಕಿ ಉಳಿದಿದ್ದು, ಇವುಗಳ ವಿವರ ಹೀಗಿದೆ:
ಪ್ರಧಾನ ಪೀಠ - 19
ನಾಗಪುರ ಪೀಠ - 9
ಔರಂಗಾಬಾದ್ ಪೀಠ - 21
ಗೋವಾ ಪೀಠ - 2