ಜಿಲ್ಲಾ ನ್ಯಾಯಾಲಯಗಳಲ್ಲಿ ವಕೀಲರ ಕೊರತೆಯಿಂದ 66 ಲಕ್ಷ ಪ್ರಕರಣಗಳು ವಿಳಂಬ
ವಕೀಲರ ಕೊರತೆಯಿಂದ ಭಾರತದಲ್ಲಿ ಸೆಪ್ಟೆಂಬರ್ 14ರ ವೇಳೆಗೆ ಒಟ್ಟಾರೆ 66,59,565 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ವಿಳಂಬವಾಗಿವೆ ಎಂದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್‌ಜೆಡಿಜಿ) ಅಂಕಿ-ಅಂಶದಿಂದ ಬಹಿರಂಗವಾಗಿದೆ.
ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಎನ್‌ಜೆಡಿಜಿ ಕಾರಣಗಳನ್ನು ಉಲ್ಲೇಖಿಸಿದ್ದು, ಪಕ್ಷಕಾರರನ್ನು ಪ್ರತಿನಿಧಿಸಲು ವಕೀಲರು ಇಲ್ಲದಿರುವುದು ಪ್ರಕರಣಗಳು ಅಪಾರ ಸಂಖ್ಯೆಯಲ್ಲಿ ಬಾಕಿ ಉಳಿಯಲು ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಈ ಪೈಕಿ 5.1 ಲಕ್ಷ ಕ್ರಿಮಿನಲ್ ಪ್ರಕರಣಗಳಾಗಿವೆ.
ಆರೋಪಿಗಳು ನಾಪತ್ತೆಯಾಗಿರುವುದರಿಂದ 38 ಲಕ್ಷ ಪ್ರಕರಣಗಳು ವಿಳಂಬವಾಗಿವೆ. 2,920,033 ಪ್ರಕರಣಗಳು ಸಾಕ್ಷಿಗಳ ಕಾರಣದಿಂದ ಮತ್ತು ಒಟ್ಟಾರೆ 2,462,051 ಪ್ರಕರಣಗಳು ಹಲವು ಕಾರಣಗಳಿಗೆ ತಡೆಯಾಜ್ಞೆಯಲ್ಲಿವೆ. ಪಕ್ಷಕಾರರ ಇಚ್ಛಾಶಕ್ತಿಯ ಕೊರತೆಯಿಂದಾಗಿ 8 ಲಕ್ಷಕ್ಕೂ ಅಧಿಕ ಪ್ರಕರಣಗಳು ವಿಳಂಬವಾಗಿವೆ.
ಡಿಕ್ರಿ ಜಾರಿ, ಮೇಲಿಂದ ಮೇಲೆ ಮೇಲ್ಮನವಿಗಳ ಸಲ್ಲಿಕೆ, ಕಾನೂನಾತ್ಮಕ ಪ್ರತಿನಿಧಿಗಳು ದಾಖಲೆಯಲ್ಲಿ ಬಾರದಿರುವುದು, ಪ್ರಕರಣಗಳ ಮಾಹಿತಿಯ ಕೊರತೆ, ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‌ಗಳು ತಡೆಯಾಜ್ಞೆ ನೀಡಿರುವುದು ಇತರೆ ಕಾರಣಗಳಾಗಿವೆ.
ಈ ಮೇಲಿನ ಅಂಕಿ-ಅಂಶಗಳು ನ್ಯಾಯಾಲಯದಲ್ಲಿ ಬ್ಯಾಕ್‌ಲಾಗ್ ಹೆಚ್ಚುವಲ್ಲಿ ವಕೀಲರ ಪಾತ್ರವೇನಿದೆ ಎಂಬುದ ಮೇಲೆ ಬೆಳಕು ಚೆಲ್ಲಲಿದೆ. ಕಳೆದ ವರ್ಷ ಮಹಾರಾಷ್ಟ್ರದ ಅಧೀನ ನ್ಯಾಯಾಲಯಗಳಲ್ಲಿ ಬಾಕಿ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಿರುವುದನ್ನು ಉಲ್ಲೇಖಿಸಿದ್ದ ಸುಪ್ರೀಂ ಕೋರ್ಟ್, ವಕೀಲರು ಸೂಕ್ತ ರೀತಿಯಲ್ಲಿ ಸಹಕರಿಸಿದಿದ್ದರೆ ಮತ್ತು ನ್ಯಾಯಯುತವಾಗಿ ನಡೆದುಕೊಳ್ಳದಿದ್ದರೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲಾಗದು ಎಂದಿತ್ತು.
ಇನ್ನೂ ವಿಶಿಷ್ಟವೆಂದರೆ ಸುಮಾರು 99 ಸಾವಿರ ಪ್ರಕರಣಗಳು ಕಳೆದ 30 ಕ್ಕೂ ಅಧಿಕ ವರ್ಷಗಳಿಂದ ಬಾಕಿ ಉಳಿದಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 2 ಕೋಟಿ ಪ್ರಕರಣಗಳು ಹೆಚ್ಚಾಗಿದ್ದು, ಇತ್ಯರ್ಥಕ್ಕೆ ಬಾಕಿ ಇವೆ.
ದೇಶದ ವಿವಿಧ ಹೈಕೋರ್ಟ್‌ಗಳಲ್ಲಿ 59,61,088 ಪ್ರಕರಣಗಳು ಬಾಕಿ ಉಳಿದ್ದು, 76,000 ಅಧಿಕ ಪ್ರಕರಣಗಳು 30 ವರ್ಷಕ್ಕೂ ಹಳೆಯದಾಗಿವೆ. ಬಾಕಿ ಉಳಿದಿರುವ ಪ್ರಕರಣಗಳ ಪೈಕಿ 1,07,972 ಜಾಮೀನಿಗೆ ಸಂಬಂಧಿಸಿದ ಅರ್ಜಿಗಳಾಗಿವೆ.
ಸುಪ್ರೀಂ ಕೋರ್ಟ್‌ನಲ್ಲಿ 67,390 ಪ್ರಕರಣಗಳು ಬಾಕಿ ಉಳಿದಿದ್ದು, ಕೇವಲ 21 ಪ್ರಕರಣಗಳು 30 ವರ್ಷಕ್ಕೂ ಅಧಿಕ ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇವೆ.