
ಸುಮಾರು ಏಳು ವರ್ಷಗಳಿಂದ ಅಂದರೆ 2018ರಿಂದ 698 ಹೈಕೋರ್ಟ್ ನ್ಯಾಯಮೂರ್ತಿಗಳು ನೇಮಕವಾಗಿದ್ದು ಅವರಲ್ಲಿ 108 ಮಹಿಳೆಯರು ಇದ್ದಾರೆ ಎಂದು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ) ಅರ್ಜುನ್ ರಾಮ್ ಮೇಘವಾಲ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು “ಈ ಅವಧಿಯಲ್ಲಿ 22 ಮಂದಿ ಪರಿಶಿಷ್ಟ ಜಾತಿ (ಎಸ್‌ಸಿ), 15 ಮಂದಿ ಪರಿಶಿಷ್ಟ ಪಂಗಡ (ಎಸ್‌ಟಿ), 87 ಮಂದಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಹಾಗೂ 37 ಮಂದಿ ಅಲ್ಪಸಂಖ್ಯಾತ ಸಮುದಾಯ ವರ್ಗಗಳಿಗೆ ಸೇರಿದವರು ನ್ಯಾಯಮೂರ್ತಿಗಳಾಗಿದ್ದಾರೆ” ಎಂದು ಅವರು ಹೇಳಿದರು.
ದೇಶದೆಲ್ಲೆಡೆಯ ನ್ಯಾಯಾಲಯಗಳಲ್ಲಿ ನೇಮಕಗೊಂಡ ಒಟ್ಟು ನ್ಯಾಯಾಧೀಶರಲ್ಲಿ ಎಸ್‌ಸಿ/ಎಸ್‌ಟಿ ನ್ಯಾಯಾಧೀಶರ ಶೇಕಡಾವಾರು ಪ್ರಮಾಣ ಮತ್ತು ಹೈಕೋರ್ಟ್‌ಗಳಲ್ಲಿ ಹೆಚ್ಚಿನ ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ನ್ಯಾಯಾಧೀಶರನ್ನು ನೇಮಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಸಂಸದ ನೀರಜ್ ಡಾಂಗಿ ಅವರು ಕೇಳಿದ ಪ್ರಶ್ನೆಗೆ ಸಚಿವಾಲಯ ಉತ್ತರಿಸಿತು.
ಜಿಲ್ಲಾ ನ್ಯಾಯಾಧೀಶರ ಕುರಿತಾದ ಅಂತಹ ಕೇಂದ್ರೀಕೃತ ಮಾಹಿತಿ ನಿರ್ವಹಣೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಶಿಫಾರಸುಗೊಂಡವರು ತಮ್ಮ ಸಾಮಾಜಿಕ ಹಿನ್ನೆಲೆಯನ್ನುನಿಗದಿತ ನಮೂನೆಯಲ್ಲಿ (ಸುಪ್ರೀಂ ಕೋರ್ಟ್‌ನೊಂದಿಗೆ ಸಮಾಲೋಚಿಸಿ) ಒದಗಿಸುವುದನ್ನು 2018ರಿಂದ ಪಾಲಿಸಲಾಗುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕಾನೂನು ಸಚಿವಾಲಯ ಒದಗಿಸಿದ ಮಾಹಿತಿಯ ಪ್ರಕಾರ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿರುವ ಒಟ್ಟು 20,466 ನ್ಯಾಯಾಧೀಶರಲ್ಲಿ, 3,871 ನ್ಯಾಯಾಧೀಶರು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದವರಾಗಿದ್ದು, ಒಟ್ಟು ಬಲದ ಶೇ. 19 ರಷ್ಟಿದ್ದಾರೆ.
ದೇಶದಲ್ಲಿ ನ್ಯಾಯಾಧೀಶರು-ಜನಸಂಖ್ಯೆ ಅನುಪಾತದ ಪ್ರಕಾರ ಪ್ರತಿ ಲಕ್ಷ ಜನರಿಗೆ ನೇಮಕಗೊಂಡ ನ್ಯಾಯಾಧೀಶರ ಸಂಖ್ಯೆಯ ಕುರಿತ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯವು "2011ರ ಜನಗಣತಿಯ ಪ್ರಕಾರ 121 ಕೋಟಿ ಜನಸಂಖ್ಯೆ ಇದ್ದು 31.12.2024 ರಂದು ಸುಪ್ರೀಂ ಕೋರ್ಟ್, ಹೈಕೋರ್ಟ್‌ಗಳು ಮತ್ತು ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಅನುಮೋದಿತ ನ್ಯಾಯಾಧೀಶರ ಸಂಖ್ಯೆ ಬಗ್ಗೆ ಲಭ್ಯವಿರುವ ಮಾಹಿತಿಯಂತೆ, ದೇಶದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ಸುಮಾರು 21 ನ್ಯಾಯಾಧೀಶರು ಇದ್ದಾರೆ ಎಂದು ಲೆಕ್ಕಹಾಕಲಾಗಿದೆ” ಎಂಬುದಾಗಿ ವಿವರಿಸಿತು.
[ಇನ್ನಷ್ಟು ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ]