ನ್ಯಾಯಾಧೀಶರ ಮಕ್ಕಳಿಗೆ ಹಿರಿಯ ವಕೀಲರ ಸ್ಥಾನ: ನ್ಯಾಯವಾದಿಯ ಆರೋಪಕ್ಕೆ ಸುಪ್ರೀಂ ಅಸಮಾಧಾನ

ಇತ್ತೀಚೆಗೆ 70 ನ್ಯಾಯವಾದಿಗಳನ್ನು ದೆಹಲಿ ಹೈಕೋರ್ಟ್ ಹಿರಿಯ ವಕೀಲರನ್ನಾಗಿ ನೇಮಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.
Lawyers
Lawyers
Published on

ನ್ಯಾಯಾಧೀಶರ ಸಂಬಂಧಿಕರನ್ನೇ ನ್ಯಾಯಾಲಯಗಳು ಹಿರಿಯ ವಕೀಲರನ್ನಾಗಿ ನೇಮಕ ಮಾಡುತ್ತಿವೆ ಎಂಬ ವಕೀಲರೊಬ್ಬರ ಆಕ್ಷೇಪಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

 ಇತ್ತೀಚೆಗೆ 70 ನ್ಯಾಯವಾದಿಗಳನ್ನು ದೆಹಲಿ ಹೈಕೋರ್ಟ್ ಹಿರಿಯ ವಕೀಲರನ್ನಾಗಿ ನೇಮಕ ಮಾಡಿರುವುದನ್ನು ರದ್ದುಗೊಳಿಸುವಂತೆ ಕೋರಿ ವಕೀಲ ಮ್ಯಾಥ್ಯೂಸ್ ಜೆ ನೆಡುಂಪರ ಮತ್ತಿತರರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಅರ್ಜಿದಾರ ವಕೀಲರ ವಿರುದ್ಧ ಕಿಡಿಕಾರಿತು.

Also Read
ನ್ಯಾಯಮೂರ್ತಿಗಳ ಸಂಬಂಧಿಕರಿಗೇ ನ್ಯಾಯಮೂರ್ತಿ ಹುದ್ದೆ: ಕೊಲೊಜಿಯಂ ವಿರೋಧಕ್ಕೆ ದನಿಗೂಡಿಸಿದ ಎ ಎಂ ಸಿಂಘ್ವಿ

“ತಮ್ಮ ಮಕ್ಕಳನ್ನು ಹಿರಿಯ ವಕೀಲರನ್ನಾಗಿ ಮಾಡಿದ ಎಷ್ಟು ನ್ಯಾಯಾಧೀಶರ ಹೆಸರು ನಿಮ್ಮ ಬಳಿ ಇವೆ?” ಎಂದು ಪ್ರಶ್ನಿಸಿತು.

 ಇದಕ್ಕೆ ಪ್ರತಿಕ್ರಿಯಿಸಿದ ನೆಡುಂಪರ ಅವರು ಆ ಕುರಿತು  ತಾವು ಪಟ್ಟಿ ಸಲ್ಲಿಸಿರುವುದಾಗಿ ತಿಳಿಸಿದರು. ಇದರಿಂದ ತೃಪ್ತವಾಗದ ನ್ಯಾಯಾಲಯ ಅರ್ಜಿಯಿಂದ ಆರೋಪ ತೆಗೆದುಹಾಕದಿದ್ದರೆ ಕ್ರಮ ಕೈಗೊಳ್ಳಬೇಕಾದೀತು ಎಂದು ಎಚ್ಚರಿಕೆ ನೀಡಿತು.

 “ಅರ್ಜಿ ತಿದ್ದುಪಡಿ ಮಾಡಲು ಸ್ವಾತಂತ್ರ್ಯ ನೀಡುತ್ತಿದ್ದೇವೆ. ತಿದ್ದುಪಡಿ ಮಾಡದಿದ್ದರೆ ಅದಕ್ಕೆ ತಕ್ಕಂತೆ ಕ್ರಮ ಕೈಗೊಳ್ಳುತ್ತೇವೆ” ಎಂದು ನ್ಯಾಯಾಲಯ ತಿಳಿಸಿತು.

ನ್ಯಾಯಾಧೀಶರಿಗೆ ವಕೀಲ ವರ್ಗ ಹೆದರುತ್ತದೆ ಎಂದು ನೆಡುಂಪರ ವಾದಿಸಿದಾಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ “ಇದು ಕಾನೂನಾತ್ಮಕ ನ್ಯಾಯಾಲಯವಾಗಿದೆ. ಭಾಷಣ ಮಾಡಲು ಮುಂಬೈನ ಆಜಾದ್‌ ಮೈದಾನವಲ್ಲ. ಕಾನೂನಾತ್ಮಕ ವಾದ ಮಂಡಿಸಿ, ಭಾಷಣ ಮಾಡಬೇಡಿ” ಎಂದು ನ್ಯಾ. ಗವಾಯಿ ಹೇಳಿದರು.

ಅರ್ಜಿಯಲ್ಲಿರುವ ಕೆಲ ಅಂಶಗಳನ್ನು ಸಮರ್ಥಿಸಿಕೊಳ್ಳಲು ಮತ್ತು ಅವುಗಳನ್ನು ತೆಗೆದುಹಾಕುವ ಅಗತ್ಯವಿದೆಯೇ ಎಂದು ಪರಿಗಣಿಸಲು ವಕೀಲರಿಗೆ ಸಮಯಾವಕಾಶ ನೀಡಿತು.

Also Read
ನ್ಯಾ. ಅಭಿಜಿತ್‌ ಅವರಿಂದ ಪಕ್ಷಪಾತ ಧೋರಣೆ, ಇದು ನ್ಯಾಯಾಲಯಕ್ಕೆ ಶೋಭೆಯಲ್ಲ: ಅಭಿಷೇಕ್ ಬ್ಯಾನರ್ಜಿ ಆರೋಪ

ಅರ್ಜಿಗೆ ಸಹಿ ಹಾಕಿರುವ ವಕೀಲರು ಕೂಡ ನ್ಯಾಯಾಂಗ ನಿಂದನೆಯ ಅಪರಾಧಿಗಳಾಗುತ್ತಾರೆ ಎಂದು ಪೀಠ ಎಚ್ಚರಿಕೆ ನೀಡಿತು.

ತಮ್ಮ ಒಪ್ಪಿಗೆಯಿಲ್ಲದೆ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಖಾಯಂ ಸಮಿತಿಯ ಸದಸ್ಯರೊಬ್ಬರು ರಾಜೀನಾಮೆ ನೀಡಿದಾಗಿನಿಂದ ದೆಹಲಿ ಹೈಕೋರ್ಟ್‌ನಲ್ಲಿ ಹಿರಿಯ ವಕೀಲರ ನೇಮಕಾತಿ ವಿಚಾರ ವಿವಾದಕ್ಕೆ ಸಿಲುಕಿತ್ತು. ಮೂಲಪಟ್ಟಿಯನ್ನು ತಿರುಚಲಾಗಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

Kannada Bar & Bench
kannada.barandbench.com