

ಸೂರಜ್‌ಗಢದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವಾಹನಗಳಿಗೆ 2016ರಲ್ಲಿ ನಕ್ಸಲರು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಸುರೇಂದ್ರ ಗಾಡ್ಲಿಂಗ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಒಂದು ತಿಂಗಳ ಕಾಲ ಮುಂದೂಡಿದೆ.
ಪ್ರಕರಣದ ವಿಚಾರಣೆಯಲ್ಲಿ ಇನ್ನು ಮುಂದೆ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು ಕಾಲಿಮಿತಿ ನಿಗದಿ ಮಾಡಲಾಗುವುದು ಎಂದು ತಿಳಸಿದ ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠ ಪ್ರಕರಣವನ್ನು ಒಂದು ತಿಂಗಳ ಬಳಿಕ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತು.
ಗಾಡ್ಲಿಂಗ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಆನಂದ್ ಗ್ರೋವರ್, ತಮ್ಮ ಕಕ್ಷಿದಾರರ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಉಂಟಾಗಿರುವ ವಿಳಂಬ ಗಮನಿಸಿ ಜಾಮೀನು ನೀಡಬೇಕು ಎಂದು ಕೋರಿದರು. ವಿಡಿಯೋ ಕಾನ್ಫರೆನ್ಸಿಂಗ್ ಕಾರ್ಯನಿರ್ವಹಿಸದಿರುವುದು, ದಾಖಲೆಗಳ ಭಾರೀ ಪ್ರಮಾಣ ಮತ್ತು ಇಲೆಕ್ಟ್ರಾನಿಕ್ ಸಾಕ್ಷ್ಯಗಳ ಪ್ರತಿಗಳು ಲಭ್ಯವಿಲ್ಲದಿರುವುದನ್ನು ಅವರು ಉಲ್ಲೇಖಿಸಿದರು.
ಆದರೆ, ಇದನ್ನು ಅಲ್ಲಗಳೆದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು, ಯಾವುದೇ ವಿಳಂಬವಾಗಿಲ್ಲ ಎಂದು ಸಮರ್ಥಿಸಿಕೊಂಡರು. ವಿಚಾರಣಾ ಪ್ರಕ್ರಿಯೆಯಲ್ಲಿ ಪ್ರಗತಿಯಾಗಬೇಕಿರುವುದರಿಂದ ಒಂದು ತಿಂಗಳ ಬಳಿಕ ಜಾಮೀನು ಅರ್ಜಿ ಆಲಿಸಲಾಗುವುದು ಎಂದು ನ್ಯಾಯಾಲಯ ಸೂಚಿಸಿತು. ಈ ಹಂತದಲ್ಲಿ ಗಾಡ್ಲಿಂಗ್ ಅವರು ದೀರ್ಘ ಕಾಲ ಜೈಲಿನಲ್ಲಿ ಉಳಿಯುತ್ತಾರೆ ಎಂದು ಗ್ರೋವರ್ ಆತಂಕ ವ್ಯಕ್ತಪಡಿಸಿದರು.
ಗಾಡ್ಲಿಂಗ್ ಅವರ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ಪ್ರಕರಣದಲ್ಲಿ ನ್ಯಾಯಸಮ್ಮತ ವಿಚಾರಗಳಿಲ್ಲ. ಅವರು 7 ವರ್ಷಗಳಿಂದ ಜೈಲಿನಲ್ಲಿದ್ದಾರೆ! ಈ ದೇಶ ಎತ್ತ ಸಾಗಿದೆ?" ಎಂದು ಅವರು ಆಕ್ಷೇಪಿಸಿದರು.
ಇಲೆಕ್ಟ್ರಾನಿಕ್ ಸಾಕ್ಷ್ಯಗಳ ಪ್ರತಿಗಳು ಲಭ್ಯವಿರುವುದಿಲ್ಲ ಎಂಬುದನ್ನೂ ಗ್ರೋವರ್ ನ್ಯಾಯಾಲಯ ಗಮನಕ್ಕೆ ತಂದರು. ಆಗ ನ್ಯಾಯಾಲಯ ಸ್ಥಳಕ್ಕೆ ಹೋಗಿ ಪರಿಶೀಲಿಸಿ ನಂತರ ವಾದ ಮಂಡಿಸುವಂತೆ ಸಲಹೆ ನೀಡಿತು.
ಅಲ್ಲದೆ ಒಂದು ತಿಂಗಳ ನಂತರ ಜಾಮೀನು ವಿಚಾರಣೆ ನಡೆಸುವಾಗ ಆರೋಪಗಳ ವಿಚಾರಣಾರ್ಹತೆಯ ಅಂಶಗಳ ಮೇಲೆ ವಾದಿಸಲು ಅವಕಾಶ ನೀಡುವುದಾಗಿ ನ್ಯಾಯಾಲಯ ಭರವಸೆ ನೀಡಿತು. ಜೊತೆಗೆ, ಮುಂಬೈ ಎನ್‌ಐಎ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಳಿಸಲು ನ್ಯಾಯಾಧೀಶರ ಲಭ್ಯತೆ ಇರುವುದೇ ಎಂಬುದನ್ನು ಪರಿಶೀಲಿಸಿ, ಅಗತ್ಯವಿದ್ದರೆ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿತು.
ಗಾಡ್ಲಿಂಗ್ ಅವರು 2018ರ ಭೀಮಾ ಕೊರೇಗಾಂವ್ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಸ್ತುತ ಅವರು ತಲೋಜಾ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.